ತಮಿಳು ಯುವ ನಟ ಪ್ರದೀಪ್ ರಂಗನಾಥನ್
- ಸಾಲು ಸಾಲು ಸೂಪರ್ಹಿಟ್ ಬೆನ್ನಲ್ಲೇ ಫಸ್ಟ್ ಫ್ಲಾಪ್
- ಕಮಾಲ್ ಮಾಡಲಿಲ್ಲ ಯುವ ನಟನ ಪ್ರದೀಪ್ ರಂಗನಾಥನ್ ಚಿತ್ರ
- ಲವ್ಗೆ ಟೆಕ್ನಾಲಜಿ ಕೊಟ್ಟಿದ್ದೇ ಸೋಲಿಗೆ ಕಾರಣ?
Pradeep Ranganathan: ಇತ್ತೀಚೆಗಷ್ಟೇ ಲವ್ ಇನ್ಶುರೆನ್ಸ್ ಕಂಪನಿ (LIK) ಚಿತ್ರದ ಮೂಲಕ ಮತ್ತೊಮ್ಮೆ ತೆರೆ ಮೇಲೆ ಬಂದ ತಮಿಳಿನ ಯುವ ನಟ ಪ್ರದೀಪ್ ರಂಗನಾಥನ್, ಸಾಲು ಸಾಲು ಸೂಪರ್ಹಿಟ್ ಬೆನ್ನಲ್ಲೇ ಇದೀಗ ತಮ್ಮ ಸಿನಿ ಕರಿಯರ್ನ ಫಸ್ಟ್ ಫ್ಲಾಪ್ ಕಂಡಿದ್ದಾರೆ.
ಪ್ರದೀಪ್ ರಂಗನಾಥನ್ ಮತ್ತು ಕೃತಿ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ನಟಿಸಿದ ಹಾಗೂ ವಿಘ್ನೇಶ್ ಶಿವನ್ ನಿರ್ದೇಶನದ ಸೈನ್ಸ್ ಫಿಕ್ಷನ್ ಜಾನರ್ ಆಧರಿತ ಕಾಮಿಡಿ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿಲ್ಲ. ತಮಿಳುನಾಡಿನ ಬಾಕ್ಸ್ ಆಫೀಸ್ ಲೆಕ್ಕ ತೆಗೆದುಕೊಂಡರೆ, ಚಿತ್ರವು ಮೊದಲ ವಾರದಲ್ಲಿ ಕೇವಲ 23.25 ಕೋಟಿ ರೂ.ಗಳನ್ನು ಸಂಗ್ರಹಿಸಿದೆ. ಉತ್ತಮ ಪ್ರದರ್ಶನವನ್ನು ಕಾಯ್ದುಕೊಳ್ಳಲು ವಿಫಲವಾಗಿರುವ ಎಲ್ಐಕೆ ಸದ್ಯ ಬಾಕ್ಸ್ ಆಫೀಸ್ನಲ್ಲಿ ಸೋಲಪ್ಪಿಕೊಂಡಿದೆ.
ತಮಿಳುನಾಡಿನಲ್ಲಿ ಒಟ್ಟಾರೆ ಚಿತ್ರಮಂದಿರಗಳ ಪ್ರದರ್ಶನವನ್ನು ನೋಡುವುದಾದರೆ, 30 ಕೋಟಿ ರೂ.ಗಿಂತ ಕಡಿಮೆ ಮೊತ್ತಕ್ಕೆ ಚಿತ್ರವು ತನ್ನ ಆಟವನ್ನು ನಿಲ್ಲಿಸಲಿದೆ. ಇದು ಪ್ರದೀಪ್ ರಂಗನಾಥನ್ ಅವರ ಅತ್ಯಂತ ಕಡಿಮೆ ಗಳಿಕೆ ಮಾತ್ರವಲ್ಲದೆ, ಸತತ ಮೂರು ಬ್ಲಾಕ್ಬಸ್ಟರ್ ಸಿನಿಮಾಗಳ ಬಳಿಕ ಮೊದಲ ಫ್ಲಾಪ್ ಚಿತ್ರವಾಗಿದೆ. ಇದು ನಟನ ಯುವ ಅಭಿಮಾನಿಗಳಲ್ಲಿ ಭಾರೀ ಬೇಸರ ಮೂಡಿಸಿದೆ.
ಸಾಧಾರಣ ಮೈಕಟ್ಟು, ಸಿಂಪಲ್ ಲುಕ್ ಮತ್ತು ಅಭಿನಯದಿಂದಲೇ ಇಂದು ಅಪಾರ ಸಿನಿಪ್ರಿಯರು ಮತ್ತು ಯುವ ಅಭಿಮಾನಿಗಳನ್ನು ಸಂಪಾದಿಸಿರುವ ಪ್ರದೀಪ್, ಕೇವಲ ಎರಡ್ಮೂರು ಚಿತ್ರಗಳಿಂದ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದಾರೆ. ಪ್ರದೀಪ್ ನಟನೆಯ ನಾಲ್ಕನೇ ಬಹುನಿರೀಕ್ಷಿತ 'ಲವ್ ಇನ್ಶೂರೆನ್ಸ್ ಕಂಪನಿ' (LIK) ಸಿನಿಮಾ ಈಗ ಸೋಲಿನ ಹಾದಿ ಹಿಡಿದಿರುವುದು ಚಿತ್ರತಂಡಕ್ಕೆ ದೊಡ್ಡ ಹೊಡೆತ ನೀಡಿದೆ. ಅಂದುಕೊಂಡ ಸಮಯಕ್ಕೆ ಚಿತ್ರವನ್ನು ಬಿಡುಗಡೆಗೊಳಿಸಲು ಸಾಧ್ಯವಾಗದೆ, ಪದೇ ಪದೇ ಮುಂದೂಡಿಕೆ ಮಾಡಿದ್ದೂ ಕೂಡ ಚಿತ್ರದ ಸೋಲಿಗೆ ಒಂದು ಕಾರಣವಾಗಿರಬಹುದು.
ಹೀಗಿದೆ ತಾರಾಗಣ
'ಎಲ್ಐಕೆ' ಚಿತ್ರದಲ್ಲಿ ಪ್ರದೀಪ್ ರಂಗನಾಥನ್, ಕೃತಿ ಶೆಟ್ಟಿ, ಎಸ್.ಜೆ. ಸೂರ್ಯ, ಯೋಗಿ ಬಾಬು, ಗೌರಿ ಕಿಶನ್, ಸೀಮನ್, ಶಾರಾ, ಮೈಸ್ಕಿನ್, ಆನಂದ್ ರಾಜ್ ಮತ್ತು ಸುನಿಲ್ ರೆಡ್ಡಿ ಸೇರಿದಂತೆ ಪ್ರಮುಖರು ನಟಿಸಿದ್ದಾರೆ. ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರ ರೌಡಿ ಪಿಕ್ಚರ್ಸ್ ಹಾಗೂ ಎಸ್.ಎಸ್. ಲಲಿತ್ ಕುಮಾರ್ ಅವರ ಸೆವೆನ್ ಸ್ಕ್ರೀನ್ ಸ್ಟುಡಿಯೋ ಈ ಚಿತ್ರವನ್ನು ನಿರ್ಮಿಸಲಿದೆ. ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಅವರ ಸಂಗೀತವಿದೆ.
'ಲವ್' ಸಿನಿಮಾಗಳಿಂದಲೇ ಪ್ರದೀಪ್ಗೆ ಭರ್ಜರಿ ಯಶಸ್ಸು
'ಲವ್ ಟುಡೇ', 'ಡ್ರ್ಯಾಗನ್' ಮತ್ತು 'ಡ್ಯೂಡ್' ಈಗಿನ ಕಾಲಘಟ್ಟದ ಯುವಜನತೆಯ ಪ್ರೇಮಕಥೆಗಳು ಮತ್ತು ಮನಸ್ಥಿತಿಗಳ ಮೇಲೆ ಹೆಚ್ಚು ಫೋಕಸ್ ಮಾಡಲಾದ ಚಿತ್ರಗಳು. ಈ ಮೂರರಲ್ಲೂ ಲವ್ಸ್ಟೋರಿ, ಕಾಮಿಡಿ ಮತ್ತು ಒಂದೊಳ್ಳೆ ಸಂದೇಶಗಳಿವೆ. ಇದು ಸಿನಿಮಾ ನೋಡಲು ಬರುವ ಪ್ರೇಕ್ಷಕನನ್ನು ಕಥೆಗೆ ಹೊಂದಿಕೊಳ್ಳುವಂತೆ ಮಾಡಿವೆ ಮತ್ತು ಭರಪೂರ ಮನರಂಜನೆಯನ್ನು ನೀಡಿವೆ. ಈ ಚಿತ್ರಗಳೇ ಇಂದು ಪ್ರದೀಪ್ಗೆ ದೊಡ್ಡ ಮಟ್ಟದ ಯಶಸ್ಸನ್ನು ತಂದುಕೊಟ್ಟಿದ್ದು, 'ಲವ್ ಇನ್ಶೂರೆನ್ಸ್ ಕಂಪನಿ' ಮೇಲೂ ಅದೇ ಭರವಸೆ, ನಿರೀಕ್ಷೆಗಳು ಮೂಡುವಂತೆ ಮಾಡಿದೆ. ಪದೇ ಪದೇ ಹಲವಾರು ಬಾರಿ ಮುಂದೂಡಿಕೆ ಆಗಿರುವ ಎಲ್ಐಕೆ ರಿಲೀಸ್, ಈಗ ಏ.10ರಂದು ತೆರೆಗೆ ಬರಲಿದ್ದು, ಸಿನಿಪ್ರೇಕ್ಷಕರಿಂದ ಮೆಚ್ಚುಗೆ ಪಡೆದು ಹಿಟ್ ಸಾಲಿಗೆ ಸೇರುತ್ತದೆಯೋ, ಇಲ್ಲವೋ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.
ಅಷ್ಟಕ್ಕೂ ಯಾರು ಈ ಪ್ರದೀಪ್ ರಂಗನಾಥನ್?
ಮೂಲತಃ ತಮಿಳುನಾಡಿನವರೇ ಆದ ಪ್ರದೀಪ್ ರಂಗನಾಥನ್, ಚೆನ್ನೈನಲ್ಲಿ ಹೆಚ್ಚು ಸಮಯ ಕಳೆದಿದ್ದಾರೆ. ತಮಿಳು ಚಿತ್ರರಂಗದ ಬಹುಮುಖ ಪ್ರತಿಭೆಗಳಲ್ಲಿ ಒಬ್ಬರಾಗಿ ಹೊರಹೊಮ್ಮಿರುವ ಅವರು, ನಟ, ಬರಹಗಾರ ಮತ್ತು ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ನಟ ಜಯಂ ರವಿ ಮತ್ತು ಕಾಜಲ್ ಅಗರ್ವಾಲ್ ನಟಿಸಿದ 2019ರ ಸೂಪರ್ಹಿಟ್ ಚಿತ್ರ 'ಕೋಮಲಿ' ಮೂಲಕ ಮೊದಲು ಗಮನ ಸೆಳೆದ ಪ್ರದೀಪ್, ಆ ನಂತರ ಪೂರ್ಣ ಪ್ರಮಾಣದಲ್ಲಿ ಸ್ಟಾರ್ ಹೀರೋ ಆಗಿ ಮಿಂಚಿದರು.
2021ರಲ್ಲಿ ಅತ್ಯುತ್ತಮ ಚೊಚ್ಚಲ ನಿರ್ದೇಶಕರಿಗಾಗಿ ಸೈಮಾ ಪ್ರಶಸ್ತಿಯನ್ನು ಗೆದ್ದ ಪ್ರದೀಪ್ ರಂಗನಾಥನ್, ಚೆನ್ನೈನ ಶಿವಸುಬ್ರಮಣ್ಯ ನಾಡರ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಾಹಿತಿ ತಂತ್ರಜ್ಞಾನದಲ್ಲಿ ಪದವಿ ಮುಗಿಸಿದ್ದಾರೆ. ಸಿನಿಮಾ ನಿರ್ಮಾಣದ ಮೇಲಿನ ಅವರ ಉತ್ಸಾಹ ಕಿರುಚಿತ್ರಗಳಿಂದ ಆರಂಭವಾಗಿ ಇಂದು ಬಹುನಿರೀಕ್ಷಿತ ಚಿತ್ರಗಳ ಹಂತಕ್ಕೆ ಬಂದು ನಿಂತಿದೆ. 'ವಾಟ್ಸಾಪ್ ಕಾದಲ್', 'ಕಾಲೇಜ್ ಡೈರೀಸ್' ಮತ್ತು 'ಟಿವಿ ಕಾದೈ'ನಂತಹ ಸ್ವಂತ ಪ್ರಾಜೆಕ್ಟ್ಗಳೇ ಇಂದು ಅವರ ಸಿನಿವೃತ್ತಿಗೆ ದೊಡ್ಡ ಅಡಿಪಾಯವನ್ನು ಹಾಕಿಕೊಟ್ಟಿದೆ,(ಏಜೆನ್ಸೀಸ್).