'ಜನ ನಾಯಗನ್​' ನಾಯಕಿ ಪೂಜಾ ಹೆಗ್ಡೆ  
ಕಾಲಿವುಡ್

ಹೀಗೆ ಮಾಡಿದ್ರೆ ಮಾತ್ರ ಸಿನಿಮಾ, ಕಲೆ ಉಳಿಯೋದು! ಕಿಡಿಗೇಡಿಗಳ ವಿರುದ್ಧ ಸೌತ್ ಬ್ಯೂಟಿ ಪೂಜಾ ಹೆಗ್ಡೆ ಗರಂ

ಪ್ರಮುಖ ಮುಖ್ಯಾಂಶಗಳು

  • ರಿಲೀಸ್​ಗೂ ಮುನ್ನವೇ ಜನ ನಾಯಗನ್​ ಚಿತ್ರಕ್ಕೆ ಸಾಕಷ್ಟು ಸಂಕಷ್ಟ
  • ಬಿಡುಗಡೆ ದಿನ ಪದೇ ಪದೇ ಮುಂದೂಡಿಕೆಯ ಬೆನ್ನಲ್ಲೇ ಚಿತ್ರದ ದೃಶ್ಯಗಳು ಲೀಕ್
  • ಸಿನಿಮಾದ ಬಹುಮುಖ್ಯ ಸೀನ್​ಗಳೇ ಜಾಲತಾಣಗಳಲ್ಲಿ ಸೋರಿಕೆ
ಚೆನ್ನೈ: ತಮಿಳು ನಟ, ದಳಪತಿ ವಿಜಯ್​ ಅಭಿನಯದ ಬಹುನಿರೀಕ್ಷಿತ ಹಾಗೂ ಕೊನೆಯ ಸಿನಿಮಾ 'ಜನ ನಾಯಗನ್' ಹಲವು ಸಂಕಷ್ಟಗಳು ಬೆನ್ನೇರಿವೆ. ಈ ವರ್ಷ ಜನವರಿ 9ರಂದು ತೆರೆಗೆ ಬರಬೇಕಿದ್ದ ಚಿತ್ರವು, ಸೆನ್ಸಾರ್​ ಮಂಡಳಿಯ ಅಡಚಣೆಯಿಂದ ರಿಲೀಸ್​ನಲ್ಲಿ ಪದೇ ಪದೇ ವಿಳಂಬ ಎದುರಿಸುತ್ತಿದೆ. ಇಂದಿಗೂ ಸಿನಿಮಾದ ಬಿಡುಗಡೆ ದಿನಾಂಕ ಯಾವಾಗ? ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿಯೇ ಇಲ್ಲ. ಇದೆಲ್ಲದರ ಮಧ್ಯೆ, ಚಿತ್ರದ ಬಹುಮುಖ್ಯ ದೃಶ್ಯಗಳು ಇದೀಗ ಜಾಲತಾಣಗಳಲ್ಲಿ ಸೋರಿಕೆಯಾಗಿವೆ. ಇದು ಚಿತ್ರತಂಡಕ್ಕೆ ಭಾರೀ ನೋವುಂಟು ಮಾಡಿದೆ. ​
ಹಲವಾರು ಸೈಟ್​ಗಳಲ್ಲಿ ಜನ ನಾಯಗನ್​ ಚಿತ್ರದ ಮುಖ್ಯ ದೃಶ್ಯಗಳು ಲೀಕ್​ ಆಗಿವೆ. ಇದರ ಹಿಂದೆ ಯಾರ ಕೈವಾಡವಿದೆ ಎಂಬುದು ಸದ್ಯದ ಮಟ್ಟಿಗೆ ತಿಳಿಯದಿದ್ದರೂ, ಆ ದೃಶ್ಯಗಳ ಮೇಕಿಂಗ್​ ಹಿಂದಿರುವ ಅಪಾರ ಶ್ರಮ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಇನ್ನೂ ತೆರೆ ಕಾಣದೆ ಸಾಕಷ್ಟು ತೊಂದರೆ ಅನುಭವಿಸುತ್ತಿರುವ ಚಿತ್ರತಂಡಕ್ಕೆ ಆನ್​ಲೈನ್​ ಸೋರಿಕೆ ದೊಡ್ಡ ಪೆಟ್ಟು ನೀಡಿದೆ. ಈ ಬಗ್ಗೆ ಚಿತ್ರದ ನಿರ್ದೇಶಕರು, ನಿರ್ಮಾಪಕರು ಕಾನೂನು ಹೋರಾಟ ನಡೆಸುವುದಾಗಿಯೂ ಎಚ್ಚರಿಸಿದ್ದಾರೆ. ಫೂಟೇಜ್​ಗಳನ್ನು ಹರಿಬಿಟ್ಟ ಕಿಡಿಗೇಡಿಗಳ ಪತ್ತೆಗಾಗಿ ಈಗಾಗಲೇ ಸೈಬರ್​ ಕ್ರೈಮ್​ ಪೊಲೀಸರು ಬೆಲೆ ಬೀಸಿದ್ದಾರೆ.
ದೃಶ್ಯಗಳು ಸೋರಿಕೆ ಬೆನ್ನಲ್ಲೇ ತಮಿಳು ಚಿತ್ರರಂಗದ ಅನೇಕ ಸ್ಟಾರ್​ ನಟ, ನಟಿಯರು ಪೈರಸಿ ವಿರುದ್ಧ ಧ್ವನಿ ಎತ್ತಿದ್ದು, ಇಂತಹ ಕೆಲಸಗಳನ್ನು ಸಹಿಸಲು ಸಾಧ್ಯವಿಲ್ಲ. ನೂರಾರು ಕೆಲಸಗಾರರ ಶ್ರಮವನ್ನು ಎರಡು ಸೆಕೆಂಡ್​ನಲ್ಲಿ ಛಿದ್ರಗೊಳಿಸುವವರ ನಡೆಗೆ ನಮ್ಮ ಛೀಮಾರಿ ಎಂದಿದ್ದಾರೆ. ಇದಕ್ಕೆ ದನಿಗೂಡಿಸಿರುವ 'ಜನ ನಾಯಗನ್' ನಾಯಕಿ ಪೂಜಾ ಹೆಗ್ಡೆ, ಸಂಖ್ಯೆಯ ಕುರಿತಾಗಿ ನನಗೆ ಬೇಸರವಿಲ್ಲ. ಆದರೆ, ಚಿತ್ರದಲ್ಲಿ ಕೆಲಸ ಮಾಡಿರುವ ಕಲಾವಿದರು, ಟೆಕ್ನಿಷಿಯನ್​ಗಳು ಮತ್ತು ತೆರೆ ಹಿಂದಿನ ಕಾಣದ ಕೈಗಳ ಗೌರವವನ್ನು ಕಿತ್ತುಕೊಂಡಿದ್ದಕ್ಕೆ ಎಂದು ಹೇಳಿದ್ದಾರೆ.
ನಾವೆಲ್ಲರೂ ಒಟ್ಟಾಗಿ ವಿಜಯ್ ಸರ್ ಅವರ ಕೊನೆಯ ಚಿತ್ರವನ್ನು, ಕಡೆಯ ಬಾರಿಗೆ, ಬೆಳ್ಳಿ ಪರದೆಯ ಮೇಲೆ ಸರಿಯಾದ ರೀತಿಯಲ್ಲಿ ನೋಡಿ, ಸಂಭ್ರಮಿಸಲು ನಾವು ಅರ್ಹರಲ್ಲವೇ? ದಯವಿಟ್ಟು ಇಂತಹ ಪೈರಸಿಯನ್ನು ಬೆಂಬಲಿಸಬೇಡಿ. ಸಿನಿಮಾ ಮತ್ತು ಕಲೆ ಹೀಗೆಯೇ ಉಳಿಯಬೇಕೆಂದರೆ, ಆನ್​ಲೈನ್​ ಸೋರಿಕೆಗಳನ್ನು ಮುಲಾಜಿಲ್ಲದೆ ತಿರಸ್ಕರಿಸಿ. ಇವುಗಳನ್ನು ವಿರೋಧಿಸಿ. ಕೊನೆಯ ಬಾರಿಗೆ ಫ್ಯಾನ್ಸ್​ಗಳ ಜೊತೆ ವಿಜಯ್​ ಸರ್​ ಅವರ ಕಡೆಯ ಸಿನಿಮಾವನ್ನು ಸಂಭ್ರಮಿಸೋಣ ಎಂದು ಬರೆದು ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).