ನಟಿ ಶಾಲಿನಿ ಅಜಿತ್ ಕುಮಾರ್​ 
ಕಾಲಿವುಡ್

ದಯವಿಟ್ಟು ನಾನು ನಟಿಸಿರುವ ಒಂದೇ ಒಂದು ಚಿತ್ರವನ್ನಾದರೂ ನೋಡಿ! ತನ್ನ ಮಕ್ಕಳ ಬಳಿಯೇ ಮನವಿ ಮಾಡಿಕೊಂಡ ನಟಿ ಶಾಲಿನಿ ಅಜಿತ್​

ಪ್ರಮುಖ ಮುಖ್ಯಾಂಶಗಳು

  • ತಮಿಳು ನಟ ಅಜಿತ್ ಕುಮಾರ್ ಪತ್ನಿ ಶಾಲಿನಿ ಅಜಿತ್
  • ಕಾರ್ಯಕ್ರಮದ ವೇದಿಕೆಯಲ್ಲಿ ಮಕ್ಕಳ ಬಳಿ ಮನವಿ ಮಾಡಿಕೊಂಡ ನಟಿ
  • ನಾನು ನಟಿಸಿರುವ ಒಂದೇ ಒಂದು ಸಿನಿಮಾ ನೋಡಿ ಎಂದು ಮನವಿ
ಚೆನ್ನೈ: ತಮಿಳು ಚಿತ್ರರಂಗದ ದಿಗ್ಗಜ ನಟ, ಅಭಿಮಾನಿಗಳ ನೆಚ್ಚಿನ 'ತಲಾ' ಹಿರಿಯ ನಟ ಅಜಿತ್ ಕುಮಾರ್ ಯಾವ ಸಿನಿಪ್ರಿಯರಿಗೆ ಗೊತ್ತಿಲ್ಲ ಹೇಳಿ? ಅವರ ಸಿನಿಮಾ ಬಂದರೆ ಸಾಕು ಥಿಯೇಟರ್​ಗಳಲ್ಲಿ ನಾ ಮುಂದು ತಾ ಮುಂದು ಎಂದು ಅಭಿಮಾನಿಗಳು ಮುಗಿಬೀಳುತ್ತಾರೆ. ಎರಡು ಅಥವಾ ಮೂರು ವರ್ಷಕ್ಕೊಮ್ಮೆ ಒಂದು ಸಿನಿಮಾ ಮಾಡುವ ಅಜಿತ್​, ಪ್ರಸ್ತುತ ಕಾರ್​ ರೇಸಿಂಗ್​ನಲ್ಲಿ ಸಖತ್ ಬಿಜಿಯಾಗಿದ್ದಾರೆ. ಈ ಮಧ್ಯೆ, ಅವರ ಪತ್ನಿ ಹಾಗೂ ನಟಿ ಶಾಲಿನಿ ಅಜಿತ್ (Shalini Ajith Kumar) ಅವರು ನೀಡಿರುವ ಹೇಳಿಕೆಯೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹಲವರ ಗಮನ ಸೆಳೆದಿದೆ. 
ಒಂದು ಕಾಲದಲ್ಲಿ ತಮ್ಮ ಮುದ್ದಾದ ನಟನೆಯಿಂದಲೇ ಲಕ್ಷಾಂತರ ಅಭಿಮಾನಿಗಳ ಹೃದಯ ಗೆದ್ದ ನಟಿ ಶಾಲಿನಿ ಅಜಿತ್ ಕುಮಾರ್, 'ಸಖಿ' (ಅಲೈಪಾಯುತೆ), 'ಪ್ರೇಮಂ' (ಮಲಯಾಳಂ), 'ಜಗದೇಕವೀರುಡು ಅತಿಲೋಕಸುಂದರಿ' (ಬೇಬಿ ಶಾಲಿನಿ ಪಾತ್ರ) ಮುಂತಾದ ಚಿತ್ರಗಳ ಮೂಲಕ ಬೆಳ್ಳಿಪರದೆಯಲ್ಲಿ ಮಿಂಚಿದರು. ಅಜಿತ್ ಕುಮಾರ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಸಂಸಾರದ ಕಡೆ ಹೆಚ್ಚು ಗಮನ ಹರಿಸಿದ ಅವರು, ಚಿತ್ರರಂಗದಿಂದ ದೂರ ಉಳಿದರು. ತಮ್ಮ ಇಬ್ಬರು ಮಕ್ಕಳ ಜತೆ ಸುಖ ಸಂಸಾರ ಸಾಗಿಸುತ್ತಿರುವ ಶಾಲಿನಿ, ಇತ್ತೀಚೆಗೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕೆಲವು ಆಸಕ್ತಿದಾಯಕ ಸಂಗತಿಗಳನ್ನು ಬಹಿರಂಗಪಡಿಸಿದರು.
ಇತ್ತೀಚಿನ ಜೆಎಫ್‌ಡಬ್ಲ್ಯೂ ಮೂವಿ ಅವಾರ್ಡ್ಸ್ 2026ರಲ್ಲಿ ಮಾತನಾಡಿದ ಶಾಲಿನಿ ಅಜಿತ್​, ತಮ್ಮ ಮಕ್ಕಳಾದ ಅನುಷ್ಕಾ ಮತ್ತು ಆದ್ವಿಕ್ ಇಲ್ಲಿಯವರೆಗೆ ತಾನು ನಟಿಸಿರುವ ಒಂದೇ ಒಂದು ಸಿನಿಮಾವನ್ನು ಕೂಡ ಸಂಪೂರ್ಣವಾಗಿ ನೋಡಿಲ್ಲ. ಈ ವೇದಿಕೆಯ ಮುಖಾಂತರ ನಾನು ನನ್ನ ಮಕ್ಕಳಿಗೆ ಒಂದು ಸಣ್ಣ ಮನವಿಯನ್ನು ಮಾಡಿಕೊಳ್ಳುತ್ತೇನೆ. ದಯವಿಟ್ಟು, ನೀವಿಬ್ಬರು ನನ್ನ ಒಂದೇ ಒಂದು ಸಿನಿಮಾವನ್ನಾದರೂ ನೋಡಿ ಎಂದು ನಗುತ್ತಲೇ ಹೇಳಿದರು.
"ಮಕ್ಕಳು ನಾನು ನಟಿಸಿರುವ ಸಿನಿಮಾದ ಹಾಡುಗಳನ್ನು ಕೇಳುತ್ತಾರೆಯೇ ಹೊರೆತು ಸಿನಿಮಾ ನೋಡಲ್ಲ. ಇವತ್ತು, ನಾಳೆ ನೋಡ್ತೀನಿ ಅಂತ ಹೇಳ್ತಾರೆ. ಇಲ್ಲಿ ನಾನು ಕೇಳೋದು ಒಂದೇ. ದಯವಿಟ್ಟು ನೀವಿಬ್ಬರು ಕನಿಷ್ಠ ನನ್ನ ಒಂದೇ ಒಂದು ಚಿತ್ರವನ್ನಾದರೂ ನೋಡಿ ಎಂದು ಶಾಲಿನಿ ಕೇಳಿಕೊಂಡಿದ್ದಾರೆ. ಅಜಿತ್ ಕುಮಾರ್​ ಅಭಿನಯಿಸುತ್ತಿರುವ ಇನ್ನೂ ಶೀರ್ಷಿಕೆ ಇಡದ ಎಕೆ64 ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಮೂಡಿದ್ದು, ಇದೇ ವರ್ಷದ ಕೊನೆಯಲ್ಲಿ ಈ ಸಿನಿಮಾ ರಿಲೀಸ್​ ಆಗಬಹುದು ಎಂಬ ಮಾತುಗಳಿವೆ. ಆದ್ರೆ, ಚಿತ್ರದ ಚಿತ್ರೀಕರಣ ಇನ್ನೂ ಆರಂಭವಾಗಿಲ್ಲ ಎಂದು ವರದಿಗಳು ತಿಳಿಸಿವೆ,(ಏಜೆನ್ಸೀಸ್).