ಕಾಲಿವುಡ್

ಪ.ರಂಜಿತ್ ಆಕ್ಷನ್​ ಕಟ್ ಹೇಳಿರುವ 'ವೆಟ್ಟುವಮ್'​ ರಿಲೀಸ್​ ದಿನಾಂಕ ಅನೌನ್ಸ್; 2027ರಲ್ಲಿ ಈ ದಿನ ಸಿನಿಮಾ ತೆರೆಗೆ..Vettuvam

  • ಪ ರಂಜಿತ್​ ನಿರ್ದೇಶನದ ವೆಟ್ಟುವಮ್​ ರಿಲೀಸ್​ ದಿನಾಂಕ ಅನೌನ್ಸ್

  • 2027 ಪೊಂಗಲ್​ ಹಬ್ಬದಂದು ಸಿನಿಮಾ ರಿಲೀಸ್ ಆಗಲಿದೆ ಎಂದು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್

  • ಆರ್ಯ, ವಿ.ಆರ್. ದಿನೇಶ್, ಶೋಭಿತಾ ಧೂಳಿಪಾಲ, ಕಲೈಯರಸನ್ ಹಾಗೂ ಮೈಮ್ ಗೋಪಿ ನಟನೆಯ ಸಿನಿಮಾ

Vettuvam movie 2027: ತಂಗಲಾನ್​, ಕಬಾಲಿ, ಸರ್ಪಟ್ಟ ಪರಂಬರೈ, ಮದ್ರಾಸ್​ ನಂತಹ ಸೂಪರ್​ ಹಿಟ್ ಸಿನಿಮಾಗಳನ್ನು ಕಾಲಿವುಡ್​ಗೆ ಕೊಟ್ಟಿರುವ ಪ ರಂಜಿತ್​​, ಪ್ರತ್ಯೇಕವಾದ ಕಥಾಹಂದರ ಮತ್ತು ವಿಭಿನ್ನ ಶೈಲಿಯ ಚಲನಚಿತ್ರ ನಿರ್ಮಾಣದಿಂದಲೂ ಪ್ರೇಕ್ಷಕರನ್ನು ಆಕರ್ಷಿಸುತ್ತಾರೆ. ಸದ್ಯ ಮತ್ತೊಂದು ಮಹತ್ವಾಕಾಂಕ್ಷೆಯ ಚಿತ್ರವಾದ 'ವೆಟ್ಟುವಂ'ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದ್ದಾರೆ.

ಇತ್ತೀಚೆಗೆ ಸಿನಿಮಾ ತಂಡವು ರಿಲೀಸ್ ಮಾಡಿದ್ದ  'ವರ್ಲ್ಡ್ ಆಫ್ ವೆಟ್ಟುವಮ್' ವಿಡಿಯೋ ಭಾರಿ ಕುತೂಹಲವನ್ನು ಕೆರಳಿಸಿತ್ತು. ಬೆಳ್ಳಿ ತೆರೆ ಮೇಲೆ ನೋಡೋದು ಯಾವಾಗ ಎಂದು ಕಾಯುತ್ತಿದ್ದವರಿಗೆ ಇದೊಂದು ಬಿಗ್​ ಗುಡ್​​ನ್ಯೂಸ್ ಆಗಿದೆ.

ನಿರ್ದೇಶಕ ಪಾ. ರಂಜಿತ್ ಅವರ 'ನೀಲಂ ಪ್ರೊಡಕ್ಷನ್ಸ್' ಹಾಗೂ 'ಲರ್ನ್ ಆ್ಯಂಡ್ ಟೀಚ್ ಪ್ರೊಡಕ್ಷನ್' ಸಂಸ್ಥೆಗಳು ಜಂಟಿಯಾಗಿ ನಿರ್ಮಿಸಿರುವ ವೆಟ್ಟುವಮ್ ಸಿನಿಮಾದಲ್ಲಿ ಆರ್ಯ, ದಿನೇಶ್, ಶಬೀರ್, ಶೋಭಿತಾ ಧೂಳಿಪಾಲ ಹಾಗೂ ಕಲೈಯರಸನ್ ಮುಂತಾದ ದಿಗ್ಗಜ ನಟ-ನಟಿಯರು ಇದ್ದಾರೆ. 'ಸೆಲೆಬ್ರೇಟ್ ರೆಸಿಲಿಯನ್ಸ್' ಎಂಬ ವಿಶೇಷ ವಿಡಿಯೋವನ್ನು ಸಿನಿಮಾ ತಂಡ ಇತ್ತೀಚೆಗೆ ಬಿಡುಗಡೆ ಮಾಡಿದೆ.

ದಿಲೀಪ್ ಸುಬ್ಬರಾಯನ್ ಸಾಹಸ ನಿರ್ದೇಶನ, ಎಸ್.ಎಸ್. ಮೂರ್ತಿ ಕಲಾ ನಿರ್ದೇಶನ, ಆರ್.ಕೆ. ಸಂಕಲನ, ಹಾಗೂ ಖ್ಯಾತ ಸಂಗೀತ ನಿರ್ದೇಶಕ ಜಿ.ವಿ. ಪ್ರಕಾಶ್ ಕುಮಾರ್ ಅವರ ಸಂಗೀತ ಸಂಯೋಜನೆ ಮಾಡಿದ್ದಾರೆ. ಬಿಡುಗಡೆಯಾಗಲಿರುವ ‘ವೆಟ್ಟುವಮ್’ ಸಿನಿಮಾವು ತಮಿಳು, ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ವಿಶ್ವದಾದ್ಯಂತ ರಿಲೀಸ್ ಆಗಲಿದೆ. ತಮಿಳಿಗರ ಪ್ರಸಿದ್ಧ ಹಬ್ಬದಂದು ಅಂದರೆ 2027ರ ಪೊಂಗಲ್​​​​​ ಈ ಸಿನಿಮಾ ರಿಲೀಸ್ ಆಗುತ್ತಿರುವುದು ಮತ್ತೊಂದು ವಿಶೇಷವಾಗಿದೆ.

'ಸೆಲೆಬ್ರೇಟ್ ರೆಸಿಲಿಯನ್ಸ್' ಎಂಬ ವಿಶೇಷ ವಿಡಿಯೋವನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದ್ದು, ಈ ವಿಡಿಯೋವು ಸವಾಲಿನ ಪರಿಸ್ಥಿತಿಗಳನ್ನು ಎದುರಿಸುವಾಗ ಪಾತ್ರಗಳು ಹೇಗೆ ಗಟ್ಟಿಯಾಗಿ ನಿಲ್ಲುತ್ತವೆ ಮತ್ತು ಪ್ರತಿಕೂಲ ಪರಿಸ್ಥಿತಿಯಲ್ಲಿ ತಮ್ಮ ಸಾಮರ್ಥ್ಯವನ್ನು ಹೇಗೆ ಪ್ರದರ್ಶಿಸುತ್ತವೆ ಎಂಬುದರ ಕುರಿತು ಕುತೂಹಲಕಾರಿ ನೋಟವನ್ನು ನೀಡುತ್ತದೆ.

ಪಾ. ರಂಜಿತ್ ಅವರು ವಿವಿಧ ಸಮುದಾಯಗಳ ನಡುವಿನ ಸಂಘರ್ಷಗಳು ಹಾಗೂ ಅನಿರೀಕ್ಷಿತ ಬೆಳವಣಿಗೆಗಳ ಸುತ್ತ 'ವೆಟ್ಟುವಂ' ಚಿತ್ರವನ್ನು ಅದ್ಭುತವಾಗಿ ಕೆತ್ತಿದ್ದಾರೆ. ತನ್ನ ವಿಶಿಷ್ಟ ನಿರೂಪಣೆ ಮತ್ತು ಮಹತ್ವಾಕಾಂಕ್ಷೆಯ ಮೂಲಕ ಈ ಸಿನಿಮಾವು ಭಾರತದಾದ್ಯಂತ ಇರುವ ಪ್ರೇಕ್ಷಕರಿಗೆ ಹೊಸ ಸಿನೆಮಾದ ಅನುಭವವನ್ನು ನೀಡುವ ಭರವಸೆ ಮೂಡಿಸಿದೆ, (ಏಜೆನ್ಸೀಸ್).