ರಜಿನಿ ಚಿತ್ರದ ನಿರ್ಮಾಪಕರಿಗೆ ಹೈಕೋರ್ಟ್ ತಪರಾಕಿ
- ರಜಿನಿಕಾಂತ್ ನಟಿಸಿದ 10 ವರ್ಷಗಳ ಹಿಂದಿನ ಚಿತ್ರ 'ಕೊಚಡೈಯನ್'
- ಈ ಚಿತ್ರದ ನಿರ್ಮಾಪಕರಿಗೆ ಹೈಕೋರ್ಟ್ ಸೂಚನೆ
- 2.5 ಕೋಟಿ ರೂ. ಕಟ್ಟಿ, ಇಲ್ಲವೇ ಜೈಲಿಗೆ ಹೋಗಿ ಎಂದ ನ್ಯಾಯಾಲಯದ ಆದೇಶ
ಚೆನ್ನೈ: ಹತ್ತು ವರ್ಷಗಳ ಹಿಂದೆ ತಮಿಳಿನ ಸೂಪರ್‌ಸ್ಟಾರ್ ರಜಿನಿಕಾಂತ್ ನಾಯಕನಾಗಿ ಮತ್ತು ಅವರ ಪುತ್ರಿ ಸೌಂದರ್ಯ ನಿರ್ದೇಶನದ 'ಕೊಚಡೈಯನ್' (ತೆಲುಗಿನಲ್ಲಿ 'ವಿಕ್ರಮಸಿಂಹ') ಸಿನಿಮಾವನ್ನು ಬಹುತೇಕರು ನೋಡಿರುತ್ತಾರೆ. ಆದರೆ, ಇತ್ತೀಚೆಗೆ ಮದ್ರಾಸ್ ಹೈಕೋರ್ಟ್ ಈ ಚಿತ್ರದ ನಿರ್ಮಾಪಕ (Film Producer) ಮುರಳಿ ಮನೋಹರ್‌ಗೆ ದೊಡ್ಡ ಶಾಕ್ ನೀಡಿದೆ.
ನಾಲ್ಕು ವಾರಗಳಲ್ಲಿ...
ಹಳೆಯ ಬಾಕಿಗಳಿಗೆ ಸಂಬಂಧಿಸಿದಂತೆ ನಾಲ್ಕು ವಾರಗಳಲ್ಲಿ 'ಆ್ಯಡ್ ಬ್ಯೂರೋ' ಕಂಪನಿಗೆ 2.5 ಕೋಟಿ ರೂ. ಪಾವತಿಸಲು ಆದೇಶಿಸಿದೆ. ಈ ಹಣವನ್ನು ಈಗಾಗಲೇ ತಿಳಿಸಿರುವ ಸಮಯದೊಳಗೆ ಪಾವತಿಸಬೇಕು. ಇಲ್ಲದೇ ಹೋದಲ್ಲಿ, ಆರು ತಿಂಗಳ ಕಾಲ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ. ಈ ಹಿಂದೆಯೇ ವಿಚಾರಣಾ ನ್ಯಾಯಾಲಯವು ಮುರುಳಿಗೆ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿದ ನಿರ್ಮಾಪಕರು, ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ, ಇಲ್ಲಿಯೂ ಅವರಿಗೆ ಭಾರೀ ಮುಖಭಂಗವೇ ಉಂಟಾಗಿದೆ.
ಅಷ್ಟಕ್ಕೂ ಏನಿದು ವಿವಾದ?
ಈ ವಿವಾದ 2014ರಲ್ಲಿ ಆರಂಭವಾದ್ದದ್ದು. ಮೀಡಿಯಾ ಒನ್ ಗ್ಲೋಬಲ್ ಎಂಟರ್‌ಟೈನ್‌ಮೆಂಟ್‌ನ ಪ್ರತಿನಿಧಿ ಮುರಳಿ ಮನೋಹರ್, ತಮ್ಮ 'ಕೊಚಡೈಯನ್' ಚಿತ್ರದ ಕೆಲಸಕ್ಕಾಗಿ ಬೆಂಗಳೂರು ಮೂಲದ ಜಾಹೀರಾತು ಬ್ಯೂರೋ ಕಂಪನಿಯಿಂದ ಲೋನ್ ಪಡೆದಿದ್ದರು. ಆದರೆ, ಮರುಪಾವತಿಯ ಭಾಗವಾಗಿ ಅವರು ನೀಡಿದ 5 ಕೋಟಿ ರೂ. ಚೆಕ್ ಬೌನ್ಸ್ ಆದ ಕಾರಣ ಕಂಪನಿಯು ನ್ಯಾಯಾಲಯದ ಮೆಟ್ಟಿಲೇರಿತು.
ಕಳೆದ ಹತ್ತು ವರ್ಷಗಳಿಂದ ನಡೆಯುತ್ತಿರುವ ಈ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದ್ದೇ ತಡ ವಿವಾದ ಅಂತಿಮ ಘಟ್ಟ ತಲುಪಿದೆ. ನಿರ್ಮಾಪಕ ಮುರುಳಿ ಈಗ ಕೋರ್ಟ್ ಆದೇಶದಂತೆ 2.5 ಕೋಟಿ ರೂ. ಕಟ್ಟಬೇಕಿದೆ. ಇಲ್ಲದಿದ್ರೆ, ಜೈಲು ಶಿಕ್ಷೆಗೆ ಗುರಿಯಾಗಬೇಕಿದೆ. ರಜಿನಿಕಾಂತ್ ಅಭಿನಯದ 'ಕೊಚಡೈಯನ್', ಭಾರಿ ಬಜೆಟ್ ಮತ್ತು 3ಡಿ ಮೋಷನ್ ಕ್ಯಾಪ್ಚರ್ ತಂತ್ರಜ್ಞಾನದೊಂದಿಗೆ ರಿಲೀಸ್ ಆದ ಚಿತ್ರ. ಆದರೆ, ಆ ಸಮಯದಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಚಿತ್ರತಂಡ ನಿರೀಕ್ಷಿಸಿದ ಯಶಸ್ಸನ್ನು ಸಿನಿಮಾ ಗಳಿಸಲಿಲ್ಲ. ಈಗ, 10 ವರ್ಷಗಳ ಬಳಿಕ, ಈ ಚಿತ್ರವು ಹಣಕಾಸಿನ ವಿವಾದದಿಂದ ಮತ್ತೊಮ್ಮೆ ಸುದ್ದಿಗೆ ಬಂದಿರುವುದು ಗಮನಾರ್ಹ,(ಏಜೆನ್ಸೀಸ್).