- ಚೊಚ್ಚಲ ಸಿನಿಮಾದಲ್ಲೇ ಸ್ಟಾರ್ ನಟಿ ಪಟ್ಟ ಪಡೆದವರಲ್ಲಿ ನಟಿ ಕೃತಿ ಶೆಟ್ಟಿ ಕೂಡ ಒಬ್ಬರು
- ಕೃತಿ ನಟಿಸಿದ ಚೊಚ್ಚಲ ಸಿನಿಮಾ 'ಉಪ್ಪೇನ' ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿತು
- ತುಂಬಾ ಗ್ಯಾಪ್ ನಂತರ ಕೃತಿ ನಟನೆಯ ವಾ ವಾಥಿಯರ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ
- ಇತ್ತೀಚೆಗೆ ಕೃತಿ ತಮ್ಮ ವೃತ್ತಿ ಜೀವನದ ಆಸಕ್ತಿದಾಯಕ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ
ಹೈದರಾಬಾದ್: ಚಿತ್ರರಂಗದಲ್ಲಿ ಸ್ಟಾರ್ ಡಮ್ ಪಡೆಯುವುದು ಅಷ್ಟು ಸುಲಭವಲ್ಲ. ಸಾಕಷ್ಟು ಸಿನಿಮಾ ಮಾಡಿದರೂ ಹೆಸರು, ಮನ್ನಣೆ ಸಿಗುವುದಿಲ್ಲ. ಆದರೆ, ಕೆಲವರು ಕೇವಲ ಒಂದು ಅಥವಾ ಎರಡು ಸಿನಿಮಾಗಳಲ್ಲಿ ಜನಪ್ರಿಯರಾಗುತ್ತಾರೆ. ಇನ್ನು ಕೆಲವರು ಚೊಚ್ಚಲ ಸಿನಿಮಾದಿಂದಲೇ ಸ್ಟಾರ್ ಪಟ್ಟ ಪಡೆದುಬಿಡುತ್ತಾರೆ. ಆ ಸಾಲಿಗೆ ಸೇರಿದವರಲ್ಲಿ ನಟಿ ಕೃತಿ ಶೆಟ್ಟಿ ( Krithi Shetty ) ಕೂಡ ಒಬ್ಬರು.
ಕೃತಿ ನಟಿಸಿದ ಚೊಚ್ಚಲ ಸಿನಿಮಾ 'ಉಪ್ಪೇನ' ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿತು. ಇದಾದ ಬಳಿಕ ಸಾಕಷ್ಟು ಆಫರ್ಗಳು ಕೃತಿಯನ್ನು ಅರಸಿ ಬಂದವು. ಆದರೆ, ಇತ್ತೀಚೆಗೆ ಆಫರ್ಗಳು ಕಡಿಮೆ ಆಗಿರುವಂತೆ ತೋರುತ್ತಿವೆ. ತುಂಬಾ ಗ್ಯಾಪ್ ನಂತರ ಅವರ ನಟನೆಯ ವಾ ವಾಥಿಯರ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.
ಅಂದಹಾಗೆ, 17ನೇ ವಯಸ್ಸಿನಲ್ಲಿ 'ಉಪ್ಪೇನಾ' ಚಿತ್ರದ ಮೂಲಕ ಟಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಕೃತಿ ಶೆಟ್ಟಿ, ಕ್ಷಣಾರ್ಧದಲ್ಲಿ ಸ್ಟಾರ್ ನಟಿ ಪಟ್ಟ ಗಳಿಸಿದರು. ಈ ಚಿತ್ರದ ಭಾರಿ ಯಶಸ್ಸು ಸರಣಿ ಅವಕಾಶಗಳಿಗೆ ಕಾರಣವಾಯಿತು. ಈ ಸಿನಿಮಾದ ಬಳಿಕ 'ಶ್ಯಾಮ್ ಸಿಂಗರಾಯ್', 'ಬಂಗಾರರಾಜು', 'ಮಾಚೆರ್ಲ ನಿಯೋಜಕವರ್ಗಂ', 'ದಿ ವಾರಿಯರ್' ಮತ್ತು 'ಕಸ್ಟಡಿ' ಮುಂತಾದ ಚಿತ್ರಗಳಲ್ಲಿ ನಟಿಸಿದರು. ಆದಾಗ್ಯೂ, ಅವುಗಳಲ್ಲಿ ಕೆಲವೇ ಸಿನಿಮಾಗಳು ಹಿಟ್ ಆದ್ದರಿಂದ ಕೃತಿ ಅವರ ಕ್ರೇಜ್ ಸ್ವಲ್ಪ ಕಡಿಮೆಯಾಯಿತು.
ಇನ್ನು ಕೃತಿ ಅವರು ಟಾಲಿವುಡ್‌ಗೆ ಮಾತ್ರ ಸೀಮಿತವಾಗಿಲ್ಲ, ತಮಿಳು ಮತ್ತು ಮಲಯಾಳಂನಲ್ಲೂ ನಟಿಸುತ್ತಿದ್ದಾರೆ. ಅವರು ಪ್ರಸ್ತುತ 'ಜಿನೀ', 'ವಾ ವಾಥಿಯಾರ್' ಮತ್ತು 'ಲವ್ ಇನ್ಶುರೆನ್ಸ್ ಕಂಪನಿ' ಹೆಸರಿನ ತಮಿಳು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗಳು ಅವರ ವೃತ್ತಿಜೀವನದ ಮಹತ್ವದ ತಿರುವುಗಳೆಂದೇ ಪರಿಗಣಿಸಲಾಗಿದೆ.
ಇದೀಗ 'ವಾ ವಾಥಿಯಾರ್' ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ಸಿನಿಮಾ ಪ್ರಚಾರದಲ್ಲಿ ಕೃತಿ ಬಿಜಿಯಾಗಿದ್ದಾರೆ. ಇತ್ತೀಚಿಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಭಾಗವಹಿಸಿದ ಕೃತಿ, ನಾಯಕಿಯಾಗಿ ತಮ್ಮ ವೃತ್ತಿ ಜೀವನದ ಪ್ರಯಾಣದ ಬಗ್ಗೆ ಆಸಕ್ತಿದಾಯಕ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.
ನಾನು ಒಂದು ಕಮರ್ಷಿಯಲ್ ಜಾಹೀರಾತಿಗಾಗಿ ಆಡಿಷನ್‌ಗೆ ಹೋಗಿದ್ದೆ. ಆ ದಿನ ನನ್ನ ತಂದೆ ಬರುವುದು ತಡವಾದ್ದರಿಂದ ಎದುರಿನ ಸ್ಟುಡಿಯೋದಲ್ಲಿ ನಡೆಯುತ್ತಿದ್ದ ಆಡಿಷನ್‌ಗಳನ್ನು ನೋಡಲು ನಾನು ಒಳಗೆ ಹೋಗಿದ್ದೆ. ಅಲ್ಲಿದ್ದ ಒಂದು ತಂಡವು ನನ್ನನ್ನು ನೋಡಿ ಚಿತ್ರದಲ್ಲಿ ನಟಿಸಲು ಆಸಕ್ತಿ ಇದೆಯೇ ಎಂದು ಕೇಳಿತು. ಆ ಕ್ಷಣದಲ್ಲಿ ನನಗೆ ಏನು ಹೇಳಬೇಕೆಂದು ತೋಚಲಿಲ್ಲ. ನಾನು ನನ್ನ ತಾಯಿಯ ಫೋನ್ ನಂಬರ್ ಅನ್ನು ಅವರಿಗೆ ನೀಡಿ ಅಲ್ಲಿಂದ ಹೊರಟುಹೋದೆ. ಕೆಲವು ದಿನಗಳ ನಂತರ, ನಿರ್ದೇಶಕ ಬುಚಿಬಾಬು ಸನಾ ಕರೆ ಮಾಡಿ ನನ್ನೊಂದಿಗೆ ಮಾತನಾಡಿದರು. ಬಳಿಕ ನಾನು 'ಉಪ್ಪೇನ' ಚಿತ್ರದ ಮೂಲಕ ನಾಯಕಿಯಾಗಿ ಟಾಲಿವುಡ್‌ಗೆ ಎಂಟ್ರಿ ಕೊಟ್ಟೆ. ಆ ದಿನ ನನ್ನ ತಂದೆ ಸಮಯಕ್ಕೆ ಬಂದಿದ್ದರೆ ನಾನು ನಾಯಕಿಯಾಗುತ್ತಿರಲಿಲ್ಲ ಎಂದು ಕೃತಿ ನಗುತ್ತಾ ಹೇಳಿದರು.
ಅಂದಹಾಗೆ, ವಾ ವಾಥಿಯಾರ್ ಸಿನಿಮಾವನ್ನು ನಳನ್ ಕುಮಾರಸ್ವಾಮಿ ಎಂಬುವರು ನಿರ್ದೇಶಿಸಿದ್ದು, ಕಾಲಿವುಡ್ ಸೂಪರ್ಸ್ಟಾರ್ ಕಾರ್ತಿ ನಾಯಕನಾಗಿ ಅಭಿನಯಿಸಿದ್ದಾರೆ. ಕೆ. ಇ. ಜ್ಞಾನವೇಲ್ ರಾಜಾ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ತಮಿಳು ಭಾಷೆಯಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ಡಿಸೆಂಬರ್ 5ರಂದು ಬಿಡುಗಡೆಯಾಗಲಿದೆ.
ಇದಿಷ್ಟೇ ಅಲ್ಲದೆ, ಸದ್ಯ ತಮಿಳು ಚಿತ್ರರಂಗದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ನಟ ಪ್ರದೀಪ್ ರಂಗನಾಥನ್ ಅವರ ಲವ್ ಇನ್ಶುರೆನ್ಸ್ ಕಂಪನಿ ಸಿನಿಮಾಗೂ ಕೃತಿ ನಾಯಕಿಯಾಗಿದ್ದಾರೆ. ಕಾರ್ತಿ ಮತ್ತು ಪ್ರದೀಪ್ ಅವರಂತಹ ಒಳ್ಳೆಯ ನಟರೊಂದಿಗೆ ಕೆಲಸ ಮಾಡಲು ನನಗೆ ತುಂಬಾ ಸಂತೋಷವಾಗುತ್ತಿದೆ. ಭವಿಷ್ಯದಲ್ಲಿಯೂ ಒಳ್ಳೆಯ ಕಥೆಗಳನ್ನು ಮಾಡುವತ್ತ ಹೆಜ್ಜೆ ಹಾಕುತ್ತೇನೆ ಎಂದು ಕೃತಿ ಹೇಳಿದರು, (ಏಜೆನ್ಸೀಸ್).