ಕಾಲಿವುಡ್​ ಸ್ಟಾರ್​ ನಟರು 
ಕಾಲಿವುಡ್

ಅಜಿತ್, ರಜನಿ, ವಿಜಯ್​, ಸೂರ್ಯ​... 2025ರಲ್ಲಿ ಈಡೇರದ ಕಾಲಿವುಡ್ ಆಸೆ ಈ ವರ್ಷವಾದ್ರೂ ಈಡೇರುತ್ತಾ? ದುಪ್ಪಟ್ಟು ನಿರೀಕ್ಷೆ | Kollywood

ಪ್ರಮುಖ ಮುಖ್ಯಾಂಶಗಳು

  • ಈ ವರ್ಷ ಹಲವಾರು ಬಹುನಿರೀಕ್ಷಿತ ಹಾಗೂ ಸೂಪರ್​​ಸ್ಟಾರ್​ಗಳ ಚಿತ್ರಗಳು ತೆರೆಕಾಣಲು ಸಜ್ಜು
  • ಸ್ಟಾರ್​ ಹೀರೋಗಳ ಸಿನಿಮಾಗಳ ಮೇಲೆ ನಿರೀಕ್ಷೆ ದುಪ್ಪಟ್ಟು
  • ಕಳೆದ ವರ್ಷ ತಲುಪದ ಗುರಿಯನ್ನು 2026ರಲ್ಲಿ ರೀಚ್ ಮಾಡುವ ಭರವಸೆ
ಚೆನ್ನೈ: ಈ ವರ್ಷ ಕಾಲಿವುಡ್​ನಲ್ಲಿ (Kollywood) ಒಂದಲ್ಲ, ಎರಡಲ್ಲ ಹಲವಾರು ಬಹುನಿರೀಕ್ಷಿತ ಹಾಗೂ ಸೂಪರ್​​ಸ್ಟಾರ್​ಗಳ ಸಿನಿಮಾಗಳು ಪ್ರೇಕ್ಷಕರ ಮುಂದೆ ಹಾಜರಾಗಲು ಎದುರುನೋಡುತ್ತಿವೆ. ದಿಗ್ಗಜ ನಟರ ಚಿತ್ರಗಳ ಜತೆಗೆ ಹೊಸಬರ ಸಿನಿಮಾಗಳು ಸಾಲುಗಟ್ಟಿ ನಿಂತಿವೆ. ಏನೇ ಆದರೂ ಬಿಗ್ ಬಜೆಟ್​ ಫಿಲಂಗಳ ಮೇಲೆ ಸದ್ಯ ತಮಿಳು ಚಿತ್ರರಂಗದ ಚಿತ್ರ ಮೂಡಿದೆ. ಕಾರಣ, 2025ರಲ್ಲಿ ಈಡೇರದ ಆಸೆ ಈ ವರ್ಷವಾದ್ರೂ ಈಡೇರುತ್ತಾ? ಎಂಬ ನಿರೀಕ್ಷೆಯಲ್ಲಿ.
1000 ಕೋಟಿ ರೂ. ಕ್ಲಬ್
ಕಳೆದ ವರ್ಷ ರಿಲೀಸ್​ ಆದ 'ಕೂಲಿ' ಸೇರಿದಂತೆ ಒಂದಷ್ಟು ನಿರೀಕ್ಷಿತ ಸ್ಟಾರ್​ ಹೀರೋಗಳ ಸಿನಿಮಾಗಳು 1000 ಕೋಟಿ ರೂ. ಕ್ಲಬ್​ ಸೇರುವಲ್ಲಿ ವಿಫಲಗೊಂಡಿತು. 2025ರ ಆಗಸ್ಟ್‌ನಲ್ಲಿ ತೆರೆಕಂಡ ರಜಿನಿಕಾಂತ್ ಅಭಿನಯದ ಕೂಲಿ ಚಿತ್ರವು ಸಾವಿರ ಕೋಟಿ ರೂ. ಗಡಿಯನ್ನು ತಲುಪುವುದು ಖಚಿತ ಎಂದೇ ಕಾಲಿವುಡ್ ಅಂದಾಜಿಸಿತ್ತು. ಆದ್ರೆ, ಲೋಕೇಶ್ ಕನಕರಾಜ್ ನಿರ್ದೇಶನದ ಚಿತ್ರಕ್ಕೆ ಕೆಲವು ನೆಗೆಟಿವ್​ ವಿಮರ್ಶೆಗಳು ದೊಡ್ಡ ಹೊಡೆತ ನೀಡಿತು.

ದುಪ್ಪಟ್ಟು ಭರವಸೆ

ಇದರಿಂದ ಕೂಲಿ 1000 ಕೋಟಿ ರೂ. ಕ್ಲಬ್​ ಸೇರಲು ವಿಫಲವಾಯಿತು. ಇದರೊಟ್ಟಿಗೆ, ಸ್ಟಾರ್ ಹೀರೋಗಳಾದ ಕಮಲ್ ಹಾಸನ್​, ಸೂರ್ಯ ಮತ್ತು ಅಜಿತ್ ಸಿನಿಮಾಗಳು ಕೂಡ ಬಾಕ್ಸ್ ಆಫೀಸ್‌ನಲ್ಲಿ ಕಳಪೆ ಪ್ರದರ್ಶನ ಕಂಡಿತು. ಇದು ಕಾಲಿವುಡ್​ ಹಾಕಿಕೊಂಡಿದ್ದ ಗುರಿಯನ್ನು ಮುಟ್ಟಲು ಉತ್ತಮ ಸಾಥ್​ ನೀಡಲಿಲ್ಲ. ಅಲ್ಲದೆ, ದಳಪತಿ ವಿಜಯ್ ಅಭಿನಯದ ಕೊನೆಯ ಚಿತ್ರದ ಮೇಲಿದ್ದ ದುಪ್ಪಟ್ಟು ಭರವಸೆ, ನಿರೀಕ್ಷೆಗಳಿಗೂ ಬ್ರೇಕ್​ ಬಿದ್ದಿದೆ.
ಸೆನ್ಸಾರ್​ ಮಂಡಳಿ ನೀಡಿದ ಅಡಚಣೆಯಿಂದ ಸದ್ಯ ವಿಜಯ್ ಅವರ ಕೊನೆಯ ಚಿತ್ರ 'ಜನನಾಯಗನ್' ತಾತ್ಕಾಲಿಕವಾಗಿ ಮುಂದೋಗಿದೆ. ಇಲ್ಲಿಯವರೆಗೆ ಸಿನಿಮಾದ ಅಧಿಕೃತ ರಿಲೀಸ್​ ದಿನಾಂಕ ಸ್ಪಷ್ಟವಾಗಿಲ್ಲ. ಬಿಡುಗಡೆ ದಿನಾಂಕ ಫಿಕ್ಸ್ ಮಾಡಲು ಏನಾದರೂ ಒಂದು ಸಮಸ್ಯೆ ಚಿತ್ರತಂಡಕ್ಕೆ ಎದುರಾಗುತ್ತಲೇ ಇದೆ. ಇದು ತೆಲುಗು ಚಿತ್ರದ ರಿಮೇಕ್ ಆಗಿದ್ದರೂ 'ಜನನಾಯಗನ್​' ಮೇಲೆ ತಮಿಳು ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಯಿದೆ. ಹೀಗಾಗಿ, ಈ ಚಿತ್ರವು 1000 ಕೋಟಿ ರೂ. ಕ್ಲಬ್ ಸೇರುವ ಭರವಸೆ ಮೂಡಿದೆ.

'ಜೈಲರ್ 2'

ಇದರೊಟ್ಟಿಗೆ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ರಜನಿ ಅಭಿನಯದ 'ಜೈಲರ್ 2' ಕೂಡ ಈ ವರ್ಷದ ದ್ವಿತೀಯಾರ್ಧದಲ್ಲಿ ಬಿಡುಗಡೆಯಾಗಲಿದೆ. ಕಾಲಿವುಡ್‌ನ ಇದುವರೆಗಿನ ಎರಡನೇ ಅತಿ ಹೆಚ್ಚು ಗಳಿಕೆ ಮಾಡಿದ 'ಜೈಲರ್' ಸೀಕ್ವೆಲ್​ ಮೇಲೂ ನಿರೀಕ್ಷೆಗಳು ಜಾಸ್ತಿಯಿದೆ. ಇನ್ನು ಸೂರ್ಯ ನಟನೆಯ 'ಕರುಪ್ಪು' ಮತ್ತು ಅಜಿತ್ ಅವರ 64ನೇ ಸಿನಿಮಾಗಳು ಈ ವರ್ಷವಾದ್ರೂ ಕಾಲಿವುಡ್​ನ ಗುರಿಯನ್ನು ತಲುಪಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).