ಸಾಯಿ ಅಭ್ಯಂಕರ್ರಿಂದ ಮಧ್ಯರಾತ್ರಿ ಫೋನ್ ಕರೆ... ಅಚ್ಚರಿ ಹೇಳಿಕೆ ನೀಡಿದ ನಟಿ ಕಯಾದು ಲೋಹರ್! Kayadu Lohar
- ಡ್ಯೂಡ್ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ವಿಶೇಷ ಛಾಪು ಮೂಡಿಸಿದ ಸಾಯಿ ಅಭ್ಯಂಕರ್
- ಅವರ ಇತ್ತೀಚಿನ ಹಾಡು 'ಪಾವಾಝ ಮಲ್ಲಿ' ಮೂಲಕ ಇಂಟರ್ನೆಟ್‌ನಲ್ಲಿ ಸಂಚಲನ ಸೃಷ್ಟಿಸುತ್ತಿದೆ
- ಈ ಹಾಡಿನಲ್ಲಿ ತಮ್ಮ ಆಕರ್ಷಕ ನೃತ್ಯ ಮತ್ತು ಗ್ಲಾಮರ್‌ನಿಂದಲೇ ಎಲ್ಲರನ್ನು ಸೆಳೆದ ನಟಿ ಕಯಾದು ಲೋಹರ್
Kayadu Lohar : ಸಾಮಾಜಿಕ ಜಾಲತಾಣ ಹೆಚ್ಚೆಚ್ಚು ಬಳಕೆ ಬರುತ್ತಿದ್ದಂತೆ ಹೊಸ ಹೊಸ ಪ್ರತಿಭೆಗಳು ಬೆಳಕಿಗೆ ಬರುತ್ತಿವೆ. ಅದರಲ್ಲೂ ಸಂಗೀತ ಲೋಕಕ್ಕೆ ಜಾಲತಾಣದಿಂದ ಒಳ್ಳೊಳ್ಳೆ ಪ್ರತಿಭೆಗಳ ಪರಿಚಯವಾಗುತ್ತಿವೆ. ಹೊಸ ಹೊಸ ಮ್ಯೂಸಿಕ್ ಆಲ್ಬಮ್‌ಗಳು ಯೂಟ್ಯೂಬ್ ಸೇರಿದಂತೆ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಸದ್ದು ಮಾಡುತ್ತಿವೆ. 'ಡ್ಯೂಡ್' ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ವಿಶೇಷ ಛಾಪು ಮೂಡಿಸಿದ ಸಾಯಿ ಅಭ್ಯಂಕರ್, ತಮ್ಮ ಇತ್ತೀಚಿನ ಹಾಡು 'ಪಾವಾಝ ಮಲ್ಲಿ' ಮೂಲಕ ಇಂಟರ್ನೆಟ್‌ನಲ್ಲಿ ಸಂಚಲನ ಸೃಷ್ಟಿಸುತ್ತಿದ್ದಾರೆ. ಈ ಸಾಯಿ ಅಭ್ಯಂಕರ್ ಬೆಳಕಿದ್ದು ಬಂದಿದ್ದೂ ಕೂಡ ಜಾಲತಾಣದಿಂದಲೇ. ಈತನ ಆಲ್ಬಂ ಸಾಂಗ್ಗಳಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ.
ಅಂದಹಾಗೆ, ಪ್ರಸ್ತುತ ಸಖತ್ ಸದ್ದು ಮಾಡುತ್ತಿರುವ "ಪಾವಾಝ ಮಲ್ಲಿ" ಹಾಡಿನಲ್ಲಿ ತಮ್ಮ ಆಕರ್ಷಕ ನೃತ್ಯ ಮತ್ತು ಗ್ಲಾಮರ್‌ನಿಂದಲೇ ನಟಿ ಕಯಾದು ಲೋಹರ್ ಪ್ರೇಕ್ಷಕರನ್ನು ಆಕರ್ಷಿಸಿದ್ದಾರೆ. ಆಕೆಯ ನೃತ್ಯ ತುಣುಕುಗಳು ಜಾಲತಾಣದಲ್ಲಿ ವೈರಲ್ ಆಗಿದೆ. ತುಂಬಾ ಮಾದಕವಾಗಿ ಕಯಾದು ಸೊಂಟ ಬಳುಕಿಸಿದ್ದಾರೆ. ಇತ್ತೀಚೆಗೆ ಈ ಹಾಡಿನ ಹಿಂದಿನ ತಮ್ಮ ಶ್ರಮದ ಬಗ್ಗೆ ಸಂದರ್ಶನವೊಂದರಲ್ಲಿ ವಿವರಿಸಿದರು.
ಈ ಪ್ರಾಜೆಕ್ಟ್ಗೆ ತಾನು ಹೇಗೆ ಪ್ರವೇಶಿಸಿದೆ ಎಂಬುದರ ಕುರಿತು ಮಾತನಾಡಿದ ಕಯಾದು, ಮಧ್ಯರಾತ್ರಿ ಸಾಯಿ ಅಭ್ಯಂಕರ್ ಅವರಿಂದ ಕರೆ ಬಂದಾಗ ನನಗೆ ಆರಂಭದಲ್ಲಿ ಆಶ್ಚರ್ಯವಾಯಿತು. ಆದರೆ, ಅವರ ಹಾಡನ್ನು ಕೇಳಿದಾಗ, ನನಗೆ ಅದು ತುಂಬಾ ಇಷ್ಟವಾಯಿತು ಮತ್ತು ತಕ್ಷಣ ಓಕೆ ಎಂದು ಹೇಳಿದೆ ಎಂದರು.
ಹಾಡು ಕೇಳಲು ಎಷ್ಟೇ ಚೆನ್ನಾಗಿದ್ದರೂ, ಅದನ್ನು ಚಿತ್ರೀಕರಿಸಲು ಅಭ್ಯಂಕರ್ ಅವರು ಇನ್ನೂ ಹೆಚ್ಚು ಶ್ರಮಿಸಿದರು. ಒಂದೆಡೆ ನಿರಂತರ ಪೂರ್ವಾಭ್ಯಾಸ, ಮತ್ತೊಂದೆಡೆ ಬಿಜಿಯಾದ ಶೂಟಿಂಗ್ ವೇಳಾಪಟ್ಟಿಯ ನಡುವೆ ಸುಮಾರು ಎರಡು ದಿನಗಳ ಕಾಲ ನಿದ್ರೆಯಿಲ್ಲದೆ ನಾವು ಕೆಲಸ ಮಾಡಿದ್ದೇವೆ. ಒಂದೊಮ್ಮೆ ಚಿತ್ರೀಕರಣವು ಮಧ್ಯರಾತ್ರಿ 2 ಗಂಟೆಯವರೆಗೆ ಮುಂದುವರೆಯಿತು. ಈ ಹಾಡನ್ನು ಪರಿಪೂರ್ಣತೆಗೆ ತರಲು ಇಡೀ ತಂಡವು ತೋರಿಸಿದ ಸಮರ್ಪಣೆ ಈಗ ಲಕ್ಷಾಂತರ ವೀಕ್ಷಣೆಗಳ ರೂಪದಲ್ಲಿ ಯಶಸ್ಸು ಸಿಕ್ಕಿದೆ ಎಂದು ಹೇಳಿದರು.
ತಮ್ಮ ಸಿನಿ ವೃತ್ತಿಜೀವನದ ಬಗ್ಗೆ ಮಾತನಾಡಿದ ಕಯಾದು, ಆರಂಭದಲ್ಲಿ ತೆಲುಗು, ತಮಿಳು ಮತ್ತು ಮಲಯಾಳಂನಂತಹ ದಕ್ಷಿಣ ಭಾಷೆಗಳನ್ನು ಮಾತನಾಡುವುದು ನನಗೆ ಸ್ವಲ್ಪ ಕಷ್ಟವಾಗುತ್ತಿತ್ತು. ಆದರೆ, ಒಬ್ಬ ನಟಿಯಾಗಿ, ನಾನು ನಟಿಸುವ ಭಾಷೆಯನ್ನು ಕಲಿಯುವುದು ನನ್ನ ಕನಿಷ್ಠ ಜವಾಬ್ದಾರಿ ಎಂದು ನಾನು ನಂಬುತ್ತೇನೆ. ಅದಕ್ಕಾಗಿಯೇ ನಾನು ಪ್ರಸ್ತುತ ಈ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಲು ಶ್ರಮಿಸುತ್ತಿದ್ದೇನೆ ಎಂದು ಕಯಾದು ಹೇಳಿದರು.
ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಸಕ್ರಿಯರಾಗಿರುವ ಮತ್ತು ಗ್ಲಾಮರಸ್ ಫೋಟೋಗಳೊಂದಿಗೆ ತನ್ನ ಫಾಲೋವರ್ಸ್ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಈ ಸುಂದರಿ, ಪ್ರಸ್ತುತ 'ದಿ ಪ್ಯಾರಡೈಸ್' ನಂತಹ ಬೃಹತ್ ಯೋಜನೆಯ ಭಾಗವಾಗಿದ್ದಾರೆ. ಕಯಾದು ತೋರಿಸುತ್ತಿರುವ ಸಮರ್ಪಣೆಯನ್ನು ನೋಡಿದರೆ, ಅವರು ಶೀಘ್ರದಲ್ಲೇ ದಕ್ಷಿಣ ಭಾರತದ ಟಾಪ್ ಹೀರೋಯಿನ್ ಆಗುತ್ತಾರೆ ಎಂದು ಚಲನಚಿತ್ರ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಅಂದಹಾಗೆ, ನಟಿ ಕಯಾದು ಲೋಹರ್ ಅವರು ಪ್ರಧಾನವಾಗಿ ದಕ್ಷಿಣ ಭಾರತದ ಚಲನಚಿತ್ರಗಳಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟಿ ಮತ್ತು ಮಾಡೆಲ್. ಮೂಲತಃ ಮಹಾರಾಷ್ಟ್ರದವರಾದ ಇವರು, ಕನ್ನಡದ 'ಮುಗಿಲ್ ಪೇಟೆ' ಚಿತ್ರದ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿದರು. ನಂತರ ಮಲಯಾಳಂನ ಜನಪ್ರಿಯ ಚಿತ್ರ 'ಪಾತ್ರೊಸಿನ್ ಪಡೈಪ್ಪುಗಳು' ಮತ್ತು ವಿನಯನ್ ನಿರ್ದೇಶನದ ಬಿಗ್ ಬಜೆಟ್ ಚಿತ್ರ 'ಪತ್ತೊಂಬದಾಂ ನೂಟಾಂಡು' ಮೂಲಕ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿದರು. ತಮ್ಮ ಆಕರ್ಷಕ ಅಭಿನಯ ಮತ್ತು ಸೌಂದರ್ಯದಿಂದ ಗುರುತಿಸಿಕೊಂಡಿರುವ ಇವರು, ಮರಾಠಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗದಲ್ಲಿ ಭರವಸೆಯ ನಟಿಯಾಗಿ ಬೆಳೆಯುತ್ತಿದ್ದಾರೆ, (ಏಜೆನ್ಸೀಸ್).