- 47 ವರ್ಷಗಳ ಬಳಿಕ ತೆರೆ ಮೇಲೆ ನಟಿಸಲಿದ್ದಾರೆ ದಿಗ್ಗಜ ನಟರು
- ಚಿತ್ರಕ್ಕೆ ನೆಲ್ಸನ್ ದಿಲೀಪ್ ಕುಮಾರ್ ಆ್ಯಕ್ಷನ್-ಕಟ್
- ಅಭಿಮಾನಿಗಳ ಬಹುವರ್ಷಗಳ ಕನಸು ನನಸು
ಭಾರತೀಯ ಚಿತ್ರರಂಗದ ದಿಗ್ಗಜ ಕಲಾವಿದರಾದ ರಜಿನಿಕಾಂತ್ ಮತ್ತು ಕಮಲ್ ಹಾಸನ್ ತಮ್ಮದೇ ಛಾಪು ಮೂಡಿಸಿದ್ದಾರೆ. ಬಹುವರ್ಷಗಳ ಬಳಿಕ ಈ ಇಬ್ಬರು ಕಲಾವಿದರು ಒಂದೇ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಸದ್ದು ಮಾಡಿತ್ತು. ಕೊನೆಗೆ, ಅವರು ಒಟ್ಟಿಗೆ ನಟಿಸುತ್ತಿಲ್ಲ, ರಜಿನಿ ಮಾತ್ರ ಅಭಿನಯಿಸುತ್ತಿದ್ದು, ಕಮಲ್ ಬಂಡವಾಳ ಹೂಡುತ್ತಿದ್ದಾರೆ ಎಂಬ ಸ್ಪಷ್ಟನೆ ದೊರೆಯಿತು. ಆ ಮೂಲಕ 47 ವರ್ಷಗಳ ಬಳಿಕ ಈ ದಿಗ್ಗಜರನ್ನು ಬೆಳ್ಳಿಪರದೆ ಮೇಲೆ ಒಟ್ಟಿಗೆ ನೋಡಲು ಉತ್ಸುಕರಾಗಿದ್ದ ಪ್ರೇಕ್ಷಕರಿಗೆ ನಿರಾಶೆ ಉಂಟಾಗಿತ್ತು. ಇದೀಗ ಅಭಿಮಾನಿಗಳ ಆಸೆ ನೆರವೇರುವ ಕಾಲ ಕೂಡಿಬಂದಿದೆ. ಹೌದು, 47 ವರ್ಷಗಳ ಬಳಿಕ ರಜಿನಿಕಾಂತ್ ಮತ್ತು ಕಮಲ್ ಹಾಸನ್ ಒಟ್ಟಿಗೆ ನಟಿಸಲಿರುವ ಹೊಸ ಚಿತ್ರ ಅಧಿಕೃತವಾಗಿ ಘೋಷಣೆಯಾಗಿದೆ. ಚಿತ್ರದ ಟೀಸರ್ ರಿಲೀಸ್ ಮಾಡಲಾಗಿದ್ದು, ಅದರಲ್ಲಿ ರಜಿನಿ ಮತ್ತು ಕಮಲ್ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಈ ಚಿತ್ರವನ್ನು ರೆಡ್‌ಜೈಂಟ್ ಸಂಸ್ಥೆ ನಿರ್ಮಿಸಲಿದ್ದು, ‘ಜೈಲರ್’ ಖ್ಯಾತಿಯ ನೆಲ್ಸನ್ ದಿಲೀಪ್ ಕುಮಾರ್ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತವಿರಲಿದೆ. ತಾತ್ಕಾಲಿಕವಾಗಿ ‘ಕೆಎಚ್*ಆರ್‌ಕೆ’ ಎಂದು ಶೀರ್ಷಿಕೆಯಿಡಲಾಗಿದ್ದು, ಉಳಿದ ತಾರಾ ಹಾಗೂ ತಾಂತ್ರಿಕ ಬಳಗವನ್ನು ತಂಡ ಮುಂದಿನ ದಿನಗಳಲ್ಲಿ ಪರಿಚಯಿಸಲಿದೆ.
ಟೀಸರ್ ಕೊನೆಯಲ್ಲಿ ಕಮಲ್ ಹಾಸನ್ ಹೀರೋ ಯಾರು ಎಂದು ಕೇಳಿದ್ದು, ನೆಲ್ಸನ್ ತಬ್ಬಿಬ್ಬಾಗಿದ್ದಾರೆ. ಆದರೆ, ಪ್ರೇಕ್ಷಕರು ಮಾತ್ರ ಟೈಟಲ್ ಕಾರ್ಡನ್ ಹೆಸರುಗಳನ್ನು ತೆಗೆದುಕೊಂಡು ಡಿ-ಕೋಡ್ ಮಾಡಿದ್ದು, ಇಲ್ಲಿ ರಜಿನಿಕಾಂತ್ ಹೀರೋ ಆಗಿರಲಿದ್ದು, ಕಮಲ್ ಹಾಸನ್ ವಿಲನ್ ಪಾತ್ರ ನಿರ್ವಹಿಸಲಿದ್ದಾರೆ ಎಂದು ಪ್ರೇಕ್ಷಕರು ಊಹಿಸಿದ್ದಾರೆ. ಆದರೆ, ಈ ಬಗ್ಗೆ ಸಿನಿಮಾ ತಂಡವೇ ಅಂತಿಮ ಘೋಷಣೆ ಮಾಡಬೇಕಷ್ಟೆ. ಈ ಹಿಂದೆ ರಜಿನಿ - ಕಮಲ್ ‘ಅಪೂರ್ವ ರಾಗಂಗಳ್’, ‘ಮೂಂಡ್ರು ಮುಡಿಚು’, ‘ಅವರ್‌ಗಳ್’, ‘ಪತಿನಾರು ವಯಿತಿನಿಲೆ’ ಸೇರಿ 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದರು. 1979ರಲ್ಲಿ ತೆರೆಕಂಡಿದ್ದ ‘ಅಲ್ಲಾವುದ್ದೀನ್ ಅಧ್ಬುತ ವಿಲಕ್ಕುಮ್’ ಈ ಜೋಡಿ ಒಟ್ಟಿಗೆ ನಟಿಸಿದ್ದ ಕೊನೆಯ ಸಿನಿಮಾ. ಇದೀಗ 47 ವರ್ಷಗಳ ಬಳಿಕ ಈ ಸೂಪರ್‌ಸ್ಟಾರ್ಸ್ ಮತ್ತೆ ಒಂದಾಗುತ್ತಿದ್ದಾರೆ. -ಏಜೆನ್ಸೀಸ್