ತಮಿಳು ಚಿತ್ರರಂಗಕ್ಕೆ ದಳಪತಿ ವಿಜಯ್​ ಪುತ್ರನ ಎಂಟ್ರಿ 
ಕಾಲಿವುಡ್

ಡೈರೆಕ್ಟರ್​ ಕ್ಯಾಪ್​ ಧರಿಸಿದ ಜೇಸನ್ ಸಂಜಯ್: ಸಿನಿಮಾ ರಂಗಕ್ಕೆ ದಳಪತಿ ಪುತ್ರನ ಆಗಮನ; ಜುಲೈ 31 ಕ್ಕೆ ಸಿಗ್ಮಾ ಬಿಡುಗಡೆ! Thalapathy Vijay son Jason Sanjay

ಪ್ರಮುಖ ಮುಖ್ಯಾಂಶಗಳು

  • ತಮಿಳು ಚಿತ್ರರಂಗಕ್ಕೆ ದಳಪತಿ ವಿಜಯ್​ ಪುತ್ರನ ಎಂಟ್ರಿ
  • ಜೇಸನ್ ಸಂಜಯ್ ನಿರ್ದೇಶನದ ಸಿಗ್ಮಾ ಜುಲೈ 31 ಕ್ಕೆ ಬಿಡುಗಡೆ
  • ಡೈರೆಕ್ಷರ್​ ಕ್ಯಾಪ್​ ಧರಿಸಿದ ದಳಪತಿ ಪುತ್ರ
ತಮಿಳುನಾಡು: ಕಾಲಿವುಡ್​ನ ಮಾಸ್ ಹೀರೊ, ಪ್ರಸ್ತುತ ತಮಿಳುನಾಡಿನ ಮುಖ್ಯಮಂತ್ರಿ ಆಗಿರುವ ದಳಪತಿ ವಿಜಯ್ ಮಗ ಜೇಸನ್ ಸಂಜಯ್ (Thalapathy Vijay son Jason Sanjay) ಸಿನಿಮಾರಂಗಕ್ಕೆ ಎಂಟ್ರಿ ಕೊಡಲು ಸಿದ್ಧರಾಗಿದ್ದಾರೆ.
ಆದರೆ ಅಪ್ಪನಂತೆ ತೆರೆಮುಂದೆ ಹಿರೋ ಆಗಿ ಕಾಣಿಸಿ ಕೊಳ್ಳುವ ಬದಲು ಕ್ಯಾಮರಾ ಹಿಂದೆ ಡೈರೆಕ್ಟರ್​ ಕ್ಯಾಪ್​ ಧರಿಸುವಲ್ಲಿ ಜೇಸನ್ ಸಂಜಯ್ ಆಸಕ್ತಿ ಹೊಂದಿದ್ದು, ಅವರು ಚೊಚ್ಚಲ ಸಿನಿಮಾ ಸಿಗ್ಮಾ (SIGMA) ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ.
ದಕ್ಷಿಣ ಭಾರತದ ಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ಬೆಂಬಲದೊಂದಿಗೆ ಮೂಡಿಬರುತ್ತಿರುವ ಈ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ, ಇದೇ ವರ್ಷ ಜುಲೈ 31 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಿದೆ.

ದಿನಾಂಕ ಘೋಷಿಸಿದ ಲೈಕಾ ಪ್ರೊಡಕ್ಷನ್ಸ್

ಶುಕ್ರವಾರ (ಮೇ.29) ಲೈಕಾ ಪ್ರೊಡಕ್ಷನ್ಸ್ ಸಂಸ್ಥೆಯು ಸಿನಿಮಾದ ಕಣ್ಣು ಸೆಳೆಯುವ ಹೊಸ ಪೋಸ್ಟರ್ ಒಂದನ್ನು ಹಂಚಿಕೊಳ್ಳುವ ಮೂಲಕ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಸುಮಾರು ಮೂರು ವರ್ಷಗಳಿಂದ ಸದ್ದಿಲ್ಲದೆ ಸ್ಕ್ರಿಪ್ಟ್ ಹಾಗೂ ಪ್ರೀ-ಪ್ರೊಡಕ್ಷನ್ ಕೆಲಸಗಳನ್ನು ಮಾಡಿಕೊಳ್ಳುತ್ತಾ ಬಂದಿದ್ದ ಈ ಪ್ರಾಜೆಕ್ಟ್, ಈಗ ಅಂತಿಮ ಹಂತಕ್ಕೆ ಬಂದು ನಿಂತಿದೆ.
ಸಿನಿಮಾದ ಬಿಡುಗಡೆ ಬಗ್ಗೆ ಬರೆದುಕೊಂಡಿರುವ ಪ್ರೊಡಕ್ಷನ್ ಹೌಸ್, ಇದೊಂದು ದೊಡ್ಡ ಮಟ್ಟದ ಸಾಹಸದ ಕಥೆ ಎಂದು ಬಣ್ಣಿಸಿದೆ. ಒಂದು ದೊಡ್ಡ ದರೋಡೆ (Heist) ಶುರುವಾಗಲಿದೆ. #SIGMA ಜುಲೈ 31 ರಂದು ಥಿಯೇಟರ್‌ಗಳಿಗೆ ಲಗ್ಗೆ ಇಡಲಿದೆ. ಅಂತಿಮ ಅನ್ವೇಷಣೆಗೆ ನೀವೆಲ್ಲರೂ ಸಿದ್ಧರಾಗಿ ಎಂದು ಪೋಸ್ಟರ್ ಜೊತೆಗೆ ಬರೆದುಕೊಂಡು ಹೈಪ್ ಕ್ರಿಯೇಟ್ ಮಾಡಿದೆ.
ಆಗಸ್ಟ್ 2023 ರಲ್ಲಿ ಮೊದಲ ಬಾರಿಗೆ ಜೇಸನ್ ಸಂಜಯ್ ಈ ಚಿತ್ರವನ್ನು ಅನೌನ್ಸ್ ಮಾಡಿದ್ದರು. ಚಿತ್ರಕ್ಕೆ ಅವರೇ ಕಥೆ-ಚಿತ್ರಕಥೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದರು.

ಏನಿದು ಸಿಗ್ಮಾ?

ಈಗಾಗಲೇ ರಿಲೀಸ್ ಆಗಿರುವ ಪೋಸ್ಟರ್ ಮತ್ತು ಟೀಸರ್ ನೋಡುವುದಾದರೆ, ಸಿಗ್ಮಾ ಒಂದು ಪಕ್ಕಾ ಆ್ಯಕ್ಷನ್, ಕಾಮಿಡಿ ಮತ್ತು ಡ್ರಾಮಾ ಒಳಗೊಂಡಿರುವ ಕ್ರೈಮ್ ಥ್ರಿಲ್ಲರ್ ಸಿನಿಮಾ ಎಂಬುದು ಗೊತ್ತಾಗುತ್ತದೆ. ಸಿನಿಮಾದಲ್ಲಿ ವರ್ಸಟೈಲ್ ನಟ ಸಂದೀಪ್ ಕಿಶನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಅನಿವಾರ್ಯವಾಗಿ ಅಪರಾಧ ಲೋಕದ ಜಾಲದಲ್ಲಿ ಸಿಕ್ಕಿಬೀಳುವ ನಾಯಕ, ಆ ನಂತರ ನಿಧಿ ಹುಡುಕಾಟದಂತಹ (Treasure Hunt) ಕಾರ್ಯಾಚರಣೆಗೆ ಇಳಿಯುವ ರೋಚಕ ಕಥೆ ಇಲ್ಲಿದೆ ಎನ್ನಲಾಗಿದೆ. ಕಳೆದ ವರ್ಷ ರಿಲೀಸ್ ಆಗಿದ್ದ ಸಿನಿಮಾದ ಟೀಸರ್, ಸಸ್ಪೆನ್ಸ್ ಮತ್ತು ಮನರಂಜನೆಯ ಪ್ಯಾಕೇಜ್‌ನಂತೆ ಕಾಣಿಸಿದ್ದು ಸಿನಿಮಾ ಪ್ರೇಮಿಗಳಲ್ಲಿ ಭರವಸೆ ಮೂಡಿಸಿದೆ.

ನೆಟ್‌ಫ್ಲಿಕ್ಸ್ ಪಾಲಾದ ಡಿಜಿಟಲ್ ಹಕ್ಕು

ಸಿನಿಮಾ ರಿಲೀಸ್ ಆಗುವ ಮುನ್ನವೇ ಓಟಿಟಿ ಲೋಕದಲ್ಲೂ ಧೂಳೆಬ್ಬಿಸಿದೆ. ಚಿತ್ರಮಂದಿರಗಳಲ್ಲಿ ಅಬ್ಬರಿಸಿದ ನಂತರ ಈ ಚಿತ್ರದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಖ್ಯಾತ ಓಟಿಟಿ ಸಂಸ್ಥೆ ನೆಟ್‌ಫ್ಲಿಕ್ಸ್ (Netflix) ಭಾರಿ ಮೊತ್ತಕ್ಕೆ ಖರೀದಿಸಿದೆ ಎಂದು ತಯಾರಕರು ಖಚಿತಪಡಿಸಿದ್ದಾರೆ.
ಸ್ಟಾರ್ ನಿರ್ದೇಶಕನ ಮಗನ ಚೊಚ್ಚಲ ಸಿನಿಮಾ, ಲೈಕಾ ಪ್ರೊಡಕ್ಷನ್ಸ್ ಸಂಸ್ಥೆಯ ಬಂಡವಾಳ ಮತ್ತು ಸಂದೀಪ್ ಕಿಶನ್ ನಟನೆ ಇವೆಲ್ಲವೂ ಸೇರಿ ಸಿಗ್ಮಾ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಳ್ಳುವಂತೆ ಮಾಡಿದೆ. ಜುಲೈ 31 ಕ್ಕೆ ಬಾಕ್ಸ್ ಆಫೀಸ್‌ನಲ್ಲಿ ಈ ಸಿನಿಮಾ ಎಷ್ಟರ ಮಟ್ಟಿಗೆ ಕಮಾಲ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ,(ಏಜನ್ಸೀಸ್​).