ಜನನಾಯಗನ್ ಚಿತ್ರದಲ್ಲಿ ನಟ ವಿಜಯ್
- ದಳಪತಿ ವಿಜಯ್ ಅಭಿನಯದ ಕೊನೆಯ ಸಿನಿಮಾ 'ಜನನಾಯಗನ್'
- ಕೊನೆಯ ಸಿನಿಮಾದ ಟ್ರೇಲರ್ ಔಟ್, ಫ್ಯಾನ್ಸ್ ಭಾವುಕ
- ಆ್ಯಕ್ಷನ್, ಮಾಸ್ ಪ್ಯಾಕ್ಡ್ ಚಿತ್ರದ ಟ್ರೇಲರ್ನ ಒಂದೊಂದು ದೃಶ್ಯವು...
ತಮಿಳುನಾಡು: ತಮಿಳಿನ ಸ್ಟಾರ್ ನಟ, 'ಟಿವಿಕೆ' (ತಮಿಳಗ ವೆಟ್ರಿ ಕಳಗಮ್) ಪಕ್ಷದ ನಾಯಕ ದಳಪತಿ ವಿಜಯ್ ಅಭಿನಯದ ಕೊನೆಯ ಸಿನಿಮಾ 'ಜನನಾಯಗನ್' ಟ್ರೇಲರ್ ಇದೀಗ ಅಧಿಕೃತವಾಗಿ ಹೊರಬಿದ್ದಿದೆ. ಆ್ಯಕ್ಷನ್, ಮಾಸ್ ಪ್ಯಾಕ್ಡ್ ಚಿತ್ರದ ಟ್ರೇಲರ್ನ ಒಂದೊಂದು ದೃಶ್ಯವು ನಟನ ಅಭಿಮಾನಿಗಳ ಕುತೂಹಲವನ್ನು ಕೆರಳಿಸಿದ್ದು, ಕಾಲಿವುಡ್ ಅಂಗಳದಲ್ಲಿ ಭಾರೀ ಸದ್ದು ಮಾಡಲಾರಂಭಿಸಿದೆ.
ಇತ್ತೀಚೆಗಷ್ಟೇ 'ಜನನಾಯಗನ್' ಆಡಿಯೋ ಲಾಂಚ್ ಅದ್ಧೂರಿಯಾಗಿ ಮಲೇಷ್ಯಾದ ಬುಕಿತ್ ಜೈಲ್ ಸ್ಟೇಡಿಯಂನಲ್ಲಿ ನಡೆಯಿತು. ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಬೃಹತ್ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳತ್ತ ವಿಜಯ್ ಕೈಬಿಸಿ, ಧನ್ಯವಾದ ಅರ್ಪಿಸಿ, ಚಿತ್ರರಂಗಕ್ಕೆ ವಿದಾಯ ಹೇಳಿದ್ದು ನಟನ ಅಭಿಮಾನಿಗಳ ಕಣ್ಣಂಚಲ್ಲಿ ನೀರು ತರಿಸಿತು. ಆದರೆ, ತಮ್ಮ ಕೊನೆಯ ಸಿನಿಮಾ ಮೂಲಕ ಮನರಂಜನೆಯನ್ನು ಜಬರ್ದಸ್ತ್ ಆಗಿ ನೀಡುವ ಭರವಸೆಯನ್ನು ನೀಡಿದ್ದ ವಿಜಯ್, ಟ್ರೇಲರ್ ಮೂಲಕ ಮೊದಲ ಹಂತದಲ್ಲಿ ಈಡೇರಿಸಿದ್ದಾರೆ ಎಂಬುದಂತು ಸ್ಪಷ್ಟ.
ಒನ್ ಲಾಸ್ಟ್ ಫಿಲಂ, ಟ್ರೇಲರ್...
ಮಾಸ್ ಅಂಶಗಳನ್ನು ಹೆಚ್ಚಾಗಿ ಒಳಗೊಂಡಿರುವ ಟ್ರೇಲರ್, ಹಲವು ರೋಚಕ ಹಾಗೂ ಕುತೂಹಲ ಕೆರಳಿಸುವ ವಿಷಯಗಳನ್ನೇ ಒಳಗೊಂಡಿದೆ. ದಳಪತಿ ಹೆಸರಿನಿಂದಲೇ ಶುರುವಾಗುವ ವಿಜಯ್ ಎಂಟ್ರಿ, ಡೈಲಾಗ್, ಆ್ಯಕ್ಷನ್ ದೃಶ್ಯಗಳು ಥ್ರಿಲ್ ನೀಡಿದರೆ, ಸಂಬಂಧ ಮತ್ತು ಭಾವನೆಗಳು ಕಥೆಯ ಮತ್ತೊಂದು ಆಯಾಮವನ್ನು ಹೇಳುತ್ತಿವೆ. ಟ್ರೇಲರ್ ಹೊರಬಿದ್ದ ಕೆಲವೇ ಕ್ಷಣಗಳಲ್ಲಿ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ವಿಜಯ್ ಅಭಿಮಾನಿಗಳ ಖುಷಿ-ಬೇಸರಕ್ಕೆ ಕಾರಣವಾಗಿದೆ.
ಬಹುನಿರೀಕ್ಷಿತ ಚಿತ್ರದಲ್ಲಿ ವಿಜಯ್, ಪೂಜಾ ಹೆಗ್ಡೆ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ಮಮತಾ ಬಿಜ್ಜು, ಬೇಬಿ ಡಿಯೋಲ್, ಮೋನಿಷಾ ಬ್ಲೆಸ್ಸಿ, ಪ್ರಕಾಶ್ ರಾಜ್, ಪ್ರಿಯಾಮಣಿ ಸೇರಿದಂತೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ತಮಿಳಿನ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ದಳಪತಿ ವಿಜಯ್ ಅವರ ಹಿಂದಿನ ಸಿನಿಮಾಗಳಿಗೂ ಸಂಗೀತ ನೀಡಿದ್ದ ಅನಿರುದ್ಧ್ ಅವರೇ 'ಜನನಾಯಗನ್'ಗೂ ನೀಡಿರುವುದು ಫ್ಯಾನ್ಸ್ಗಳ ಫೇವರೇಟ್ ಆಗಿದೆ,(ಏಜೆನ್ಸೀಸ್).