ಅಂತೂ ಇಂತೂ ವಿಜಯ್ ಕೊನೇ ಸಿನಿಮಾ ಜನ ನಾಯಗನ್ ಬಿಡುಗಡೆಗೆ ಕೂಡಿಬಂತು ಕಾಲ! ಯಾವಾಗ ತೆರೆಗೆ ಅಪ್ಪಳಿಸಲಿದೆ? Jana Nayagan
- ಅಂತೂ ಇಂತೂ ವಿಜಯ್ ನಟನೆಯ ಕೊನೇ ಸಿನಿಮಾ 'ಜನ ನಾಯಗನ್' ಬಿಡುಗಡೆಗೆ ಕಾಲ ಕೂಡಿಬಂದಿದೆ
- ಸುಮಾರು ಮೂರು ತಿಂಗಳಿನಿಂದ ವಿವಾದದಲ್ಲಿ ಸುಳಿಯಲ್ಲಿ ಸಿಲುಕಿ ಸಿನಿಮಾ ಮುಂದೂಡಿಕೆಯಾಗಿತ್ತು
- ಇದೀಗ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಬೆಳ್ಳಿ ಪರದೆಯ ಮೇಲೆ ಅಬ್ಬರಿಸಲು ಜನನಾಯಗನ್ ಸಜ್ಜಾಗುತ್ತಿದೆ
- ತಮಿಳುನಾಡು ವಿಧಾನಸಭಾ ಚುನಾವಣೆಯ ನಂತರ ಅಂದರೆ ಏಪ್ರಿಲ್ 24 ರಂದು ಬಿಡುಗಡೆಯಾಗುವ ಸಾಧ್ಯತೆ ಇದೆ
Jana Nayagan : ಅಂತೂ ಇಂತೂ ಕಾಲಿವುಡ್ ಸೂಪರ್ ಸ್ಟಾರ್ ವಿಜಯ್ ನಟನೆಯ 'ಜನ ನಾಯಗನ್' ಸಿನಿಮಾದ ಬಿಡುಗಡೆಗೆ ಕಾಲ ಕೂಡಿ ಬಂದಿದೆ. ಸುಮಾರು ಮೂರು ತಿಂಗಳಿನಿಂದ ವಿವಾದದಲ್ಲಿ ಸುಳಿಯಲ್ಲಿ ಸಿಲುಕಿ, ಮುಂದೂಡಿಕೆಯಾಗಿದ್ದ ಈ ಸಿನಿಮಾ, ಇದೀಗ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಬೆಳ್ಳಿ ಪರದೆಯ ಮೇಲೆ ಅಬ್ಬರಿಸಲು ಸಜ್ಜಾಗುತ್ತಿದೆ.
ನಟ ವಿಜಯ್ ಅವರ ವೃತ್ತಿಜೀವನದ ಕೊನೆಯ ಸಿನಿಮಾ ಇದಾಗಿದೆ. ತಮಿಳಿಗ ವೆಟ್ರಿ ಕಳಗಂ ( TVK ) ಪಕ್ಷವನ್ನು ಸ್ಥಾಪಿಸಿ, ಪೂರ್ಣ ಪ್ರಮಾಣದ ರಾಜಕೀಯಕ್ಕೆ ಧುಮುಕಿರುವ ನಟ ವಿಜಯ್, ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆಗೆ ಇಳಿದಿದ್ದಾರೆ. ಇದೇ ತಿಂಗಳ 23ರಂದು ತಮಿಳುನಾಡಿನಲ್ಲಿ ಮತದಾನ ನಡೆಯಲಿದೆ. ಟಿವಿಕೆ ಪಕ್ಷದ ಅಬ್ಯರ್ಥಿಗಳ ಪಟ್ಟಿಯನ್ನೂ ಬಿಡುಗಡೆ ಮಾಡಲಾಗಿದ್ದು, ನಟ ವಿಜಯ್ ಅವರು ಟಿವಿಕೆ ಪಕ್ಷದಿಂದ ಭರ್ಜರಿ ಜಯಗಳಿಸಿ, ತಮಿಳುನಾಡಿನ ಮುಖ್ಯಮಂತ್ರಿ ಆಗುವ ಕನಸು ಕಂಡಿದ್ದಾರೆ. ಹೀಗಾಗಿ, ಭರ್ಜರಿ ಪ್ರಚಾರದಲ್ಲೂ ತೊಡಗಿಕೊಂಡಿದ್ದಾರೆ.
ಜನ ನಾಯಗನ್ ವಿಜಯ್ ಅವರ ಕೊನೆಯ ಸಿನಿಮಾ ಆಗಿರುವುದರಿಂದ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆಗಳಿವೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈ ಸಿನಿಮಾ ಈ ವರ್ಷದ ಸಂಕ್ರಾಂತಿ ಉಡುಗೊರೆಯಾಗಿ ಜನವರಿ 9 ರಂದು ತೆರೆಗೆ ಬರಬೇಕಿತ್ತು. ಆದರೆ, ಸೆನ್ಸಾರ್ ಮಂಡಳಿಯು ಚಿತ್ರದಲ್ಲಿನ ಕೆಲವು ವಿವಾದಾತ್ಮಕ ರಾಜಕೀಯ ಸಂಭಾಷಣೆಗಳು ಮತ್ತು ದೃಶ್ಯಗಳಿಗೆ ಆಕ್ಷೇಪಣೆಗಳನ್ನು ವ್ಯಕ್ತಪಡಿಸಿತ್ತು. ಬಳಿಕ ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಸಾಕಷ್ಟು ವಿಳಂಬವಾಯಿತು. ಹೀಗಾಗಿ, ಜನ ನಾಯಗನ್ ಸಿನಿಮಾವನ್ನು ಸಮಯಕ್ಕೆ ಸರಿಯಾಗಿ ಬಿಡುಗಡೆ ಮಾಡಲು ಸಾಧ್ಯವಾಗಲಿಲ್ಲ. ಇದು ವಿಜಯ್ ಅಭಿಮಾನಿಗಳನ್ನು ನಿರಾಶೆಗೊಳಿಸಿತು.
ವಿಜಯ್ ಫ್ಯಾನ್ಸ್ಗೆ ಕೊನೆಗೂ ಸಿಹಿ ಸುದ್ದಿ
ಪ್ರಸ್ತುತ ಬಂದಿರುವ ಮಾಹಿತಿಯ ಪ್ರಕಾರ, ಜನ ನಾಯಗನ್ ಸಿನಿಮಾ ಬಿಡುಗಡೆಗೆ ಕಾಲ ಕೂಡಿ ಬಂದಿದೆ. ಸಿನಿಮಾಗೆ ಇದ್ದ ಎಲ್ಲ ಸಮಸ್ಯೆಗಳು ನಿವಾರಣೆಯಾಗಿದ್ದು, ತಮಿಳುನಾಡು ವಿಧಾನಸಭಾ ಚುನಾವಣೆಯ ನಂತರ, ಅಂದರೆ ಏಪ್ರಿಲ್ 24 ರಂದು 'ಜನ ನಾಯಗನ್' ಚಿತ್ರವನ್ನು ಬಿಡುಗಡೆ ಮಾಡಲು ನಿರ್ಮಾಪಕರು ಯೋಜಿಸುತ್ತಿದ್ದಾರೆ ಎನ್ನಲಾಗಿದೆ. ಈ ವಿಷಯದ ಬಗ್ಗೆ ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆಯಿದೆ.
ಇನ್ನೂ ವಿಜಯ್ ಅವರ ಚಿತ್ರ ಬಿಡುಗಡೆಯಾದ ಆರು ದಿನಗಳಲ್ಲಿ, ಸ್ಟಾರ್ ಹೀರೋ ಧನುಷ್ ಅವರ 'ಕಾರಾ' ಚಿತ್ರವು ಕೂಡ ಪ್ರೇಕ್ಷಕರ ಮುಂದೆ ಬರಲಿದೆ. ಕಾರಾ ಸಿನಿಮಾ ಏಪ್ರಿಲ್ 30 ರಂದು ಬಿಡುಗಡೆಯಾಗಲಿದೆ. ಈ ಕಾರಣದಿಂದಾಗಿ, ಏಪ್ರಿಲ್ ಕೊನೆಯ ವಾರದಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಇಬ್ಬರು ಟಾಪ್ ಹೀರೋಗಳ ನಡುವೆ ಕಠಿಣ ಸ್ಪರ್ಧೆ ನಡೆಯಲಿದೆ.
ಪ್ರಸ್ತುತ, ಸೆನ್ಸಾರ್ ಸಮಸ್ಯೆಗಳನ್ನು ನಿವಾರಿಸಿಕೊಂಡಿರುವ ಜನ ನಾಯಗನ್ ಸಿನಿಮಾ ತಂಡ, ಏಪ್ರಿಲ್ 24ರಂದು ಸಿನಿಮಾ ಬಿಡುಗಡೆ ಮಾಡಲಿದೆ ಎಂದು ಎಲ್ಲರು ಎದುರು ನೋಡುತ್ತಿದ್ದಾರೆ. ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಯಾವ ರೀತಿಯ ಯಶಸ್ಸನ್ನು ಸೃಷ್ಟಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ, (ಏಜೆನ್ಸೀಸ್).