ನಾಯಗನ್ ಸಿನಿಮಾ ತಂಡಕ್ಕೆ ಸುಪ್ರೀಂ ಕೊರ್ಟ್ನಲ್ಲೂ ಹಿನ್ನಡೆ
- ತಮಿಳು ನಟ ವಿಜಯ್ ನಟನೆಯ ಕೊನೆಯ ಸಿನಿಮಾ ಜನ ನಾಯಗನ್ ಬಿಡುಗಡೆಗೆ ಸಾಕಷ್ಟು ಅಡೆತಡೆ
- ಜನ ನಾಯಗನ್ ಸಿನಿಮಾ ತಂಡಕ್ಕೆ ಸುಪ್ರೀಂಕೋರ್ಟ್ನಲ್ಲೂ ಭಾರಿ ನಿರಾಸೆ
- ವಾಪಸ್ ಮದ್ರಾಸ್ ಹೈಕೋರ್ಟ್ಗೆ ಹೋಗುವಂತೆ ಹೇಳಿದ ದೇಶದ ಉನ್ನತ ನ್ಯಾಯಾಲಯ
ನವದೆಹಲಿ: ತಮಿಳಿಗ ವೆಟ್ರಿ ಕಳಗಂ (TVK) ಪಕ್ಷವನ್ನು ಸ್ಥಾಪಿಸಿ ಪೂರ್ಣ ಪ್ರಮಾಣದ ರಾಜಕಿಯಕ್ಕೆ ಧುಮುಕಿರುವ ಕಾಲಿವುಡ್ ಸೂಪರ್ ಸ್ಟಾರ್ ವಿಜಯ್ ನಟನೆಯ ಕೊನೆಯ ಸಿನಿಮಾ ಜನ ನಾಯಗನ್ ( Jana Nayagan ) ಬಿಡುಗಡೆಗೆ ಸಾಕಷ್ಟು ಅಡೆತಡೆಗಳು ಎದುರಾಗುತ್ತಿವೆ. ಇದೀಗ ಜನ ನಾಯಗನ್ ಸಿನಿಮಾ ತಂಡಕ್ಕೆ ಸುಪ್ರೀಂಕೋರ್ಟ್ನಲ್ಲೂ ಭಾರಿ ನಿರಾಸೆ ಉಂಟಾಗಿದೆ.
ಸುಪ್ರೀಂಕೋರ್ಟ್ ಹೇಳಿದ್ದೇನು?
ತ್ವರಿತ ವಿಚಾರಣೆ ನಡೆಸಬೇಕೆಂದು ಕೋರಿ ಜನ ನಾಯಗನ್ ಸಿನಿಮಾದ ನಿರ್ಮಾಪಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ತ್ವರಿತ ವಿಚಾರಣೆ ಸಾಧ್ಯವಿಲ್ಲ ಎಂದಿರುವ ದೇಶದ ಉನ್ನತ ನ್ಯಾಯಾಲಯ, ಅರ್ಜಿಯನ್ನು ವಜಾಗೊಳಿಸಿ, ವಾಪಸ್ ಮದ್ರಾಸ್ ಹೈಕೋರ್ಟ್ಗೆ ಹೋಗುವಂತೆ ಹೇಳಿದೆ. ಅಲ್ಲದೆ, ಜನವರಿ 20ರಂದು ಈ ಪ್ರಕರಣ ಸಂಬಂಧ ಅಂತಿಮ ನಿರ್ಧಾರ ತೆಗೆದುಕೊಳ್ಳುವಂತೆ ಮದ್ರಾಸ್ ಹೈಕೋರ್ಟ್ಗೂ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ಈ ಅರ್ಜಿಯನ್ನು ಆಲಿಸಲು ನಮಗೆ ಒಲವು ಇಲ್ಲ ಎಂದು ವಿಚಾರಣೆಯ ಸಮಯದಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ. ಜನ ನಾಯಗನ್ ನಿರ್ಮಾಪಕರ ಪರ ವಾದ ಮಂಡನೆ ಮಾಡಿದ ಸುಪ್ರೀಂ ಕೋರ್ಟ್, ಹಿರಿಯ ವಕೀಲ ಮುಕುಲ್ ರೋಹ್ಟಗಿ, ನಾವು ಜನವರಿ 9ರಂದು ಬಿಡುಗಡೆ ದಿನವನ್ನು ನಿಗದಿ ಮಾಡಿದ್ದೆವು. ಭಾರತದಾದ್ಯಂತ 5 ಸಾವಿರ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಗೆ ವೇದಿಕೆ ಸಜ್ಜಾಗಿತ್ತು. ಹೇಳಿದ ದೃಶ್ಯಗಳನ್ನು ತೆಗೆದರೆ ಸೆನ್ಸಾರ್ ಪ್ರಮಾಣ ಪತ್ರವನ್ನು ನೀಡುವುದಾಗಿಯೂ ನಮಗೆ ತಿಳಿಸಿದ್ದರು. ಹೇಳಿದಂತೆ ಮಾಡಿದರು ಕೂಡ ನಮಗೆ ಪ್ರಮಾಣ ಪತ್ರ ಸಿಗಲಿಲ್ಲ ಎಂದು ರೋಹ್ಟಗಿ ವಾದಿಸಿದರು.
ರೋಹ್ಟಗಿ ವಾದಕ್ಕೆ ಉತ್ತರ ನೀಡಿದ ಸುಪ್ರೀಂ ಕೊರ್ಟ್, ಈಗಾಗಲೇ ರದ್ದುಗೊಳಿಸಿದ ಆದೇಶವನ್ನು ಪ್ರಶ್ನಿಸಲು ಸಾಧ್ಯವಿಲ್ಲ ಎಂದಿತು. ಜನವರಿ 20 ರಂದು ವಿಭಾಗೀಯ ಪೀಠದ ಮುಂದೆ ಈ ವಿಷಯ ನಿಗದಿಯಾಗಿದ್ದು, ರದ್ದುಪಡಿಸಲಾದ ಆದೇಶವನ್ನು ನೀವು ಪ್ರಶ್ನಿಸಲು ಆಗದು. ನೀವು ವಿಭಾಗೀಯ ಪೀಠಕ್ಕೆ ಹಿಂತಿರುಗಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಇತ್ತೀಚೆಗೆ, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಜನ ನಾಯಗನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿ, ಮೊದಲು ತಮ್ಮ ಮಾತನ್ನು ಕೇಳದೆ ಯಾವುದೇ ಆದೇಶವನ್ನು ಹೊರಡಿಸಬಾರದು ಎಂದು ವಿನಂತಿಸಿತ್ತು. ಇದೀಗ ಸುಪ್ರೀಂ ಕೋರ್ಟ್ ತೀರ್ಪು ಕೂಡ ಜನ ನಾಯಗನ್ ತಂಡಕ್ಕೆ ಹಿನ್ನಡೆಯಾಗಿದ್ದು, ಸಿನಿಮಾ ಬಿಡುಗಡೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಜನ ನಾಯಗನ್ ಸಿನಿಮಾ ಜನವರಿ 9ರಂದು ಬಿಡುಗಡೆಯಾಗಬೇಕಿತ್ತು. ಆದರೆ, ಸೆನ್ಸಾರ್ ಮಂಡಳಿ ಹಾಗೂ ಸಿನಿಮಾ ತಂಡದ ನಡುವಿನ ವಿವಾದದಿಂದಾಗಿ ಸೆನ್ಸಾರ್ ಪ್ರಮಾಣ ಪತ್ರ ದೊರೆಯದೇ ಜನ ನಾಯಗನ್ ಸಿನಿಮ ಬಿಡುಗಡೆ ತುಂಬಾ ವಿಳಂಬವಾಗುತ್ತಿದೆ. ಇತ್ತೀಚೆಗೆ ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್ನ ಏಕ ಸದಸ್ಯ ಪೀಠ, ಜನ ನಾಯಗನ್ ಸಿನಿಮಾಗೆ U/A ಪ್ರಮಾಣ ಪತ್ರ ನೀಡುವಂತೆ ಸೂಚನೆ ನೀಡಿತ್ತು. ಆದರೆ, ಕೆಲವೇ ಕ್ಷಣಗಳಲ್ಲಿ ಆ ಆದೇಶಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ತಡೆಹಿಡಿಯಿತು. ಇದಾದ ಬಳಿಕ ಚಿತ್ರತಂಡ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು, (ಏಜೆನ್ಸೀಸ್).