ದಳಪತಿ ವಿಜಯ್ ಅಭಿನಯದ ಕೊನೆಯ ಸಿನಿಮಾ 'ಜನ ನಾಯಗನ್'
- ದಳಪತಿ ವಿಜಯ್ ಕೊನೆಯ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಅಡಚಣೆ
- ಇನ್ನೂ ಫಿಕ್ಸ್ ಆಗಿಲ್ಲ ಜನ ನಾಯಗನ್ ಅಧಿಕೃತ ರಿಲೀಸ್ ಡೇಟ್
- ವಿಜಯ್ ಚಿತ್ರದಿಂದ ಉಳಿದ ತಮಿಳಿನ ಚಿತ್ರಗಳಿಗೂ ಸಂಕಷ್ಟ
ಚೆನ್ನೈ: ಸ್ಟಾರ್ ಹೀರೋಗಳ ಸಿನಿಮಾ ತೆರೆಕಾಣಲು ಸಿದ್ಧವಾಗಿದೆ ಎಂದಾದರೆ, ಅದೇ ವಾರದಲ್ಲಿ ಇನ್ನೊಬ್ಬ ಸ್ಟಾರ್ ನಟನ ಚಿತ್ರ ತೆರೆಗೆ ಬರುವುದು ಅಪರೂಪ. ಕೆಲವೇ ಕೆಲವು ನಿರ್ಮಾಪಕರು ಮಾತ್ರ ರಿಲೀಸ್ ಕ್ಲ್ಯಾಶ್ ಬಗ್ಗೆ ಹೆಚ್ಚು ಚಿಂತಿಸದೆ, ಧೈರ್ಯದಿಂದ ರಿಲೀಸ್ಗೆ ಮುಂದಾಗುತ್ತಾರೆ. ಆದರೆ, ಹೊಸಬರ ತಂಡಗಳು ಮತ್ತು ಹೊಸ ನಟರ ಚಿತ್ರಗಳನ್ನು ಈ ಸಮಯದಲ್ಲಿ ಬಿಡುಗಡೆಗೊಳಿಸಲು ಇಷ್ಟಪಡುವುದಿಲ್ಲ. ಬದಲಿಗೆ ತಮ್ಮ ಸಿನಿಮಾದ ದಿನಾಂಕವನ್ನು ಒಂದು ವಾರ ಹಿಂದೆ ಅಥವಾ ಮುಂದಕ್ಕೆ ಹಾಕಿಕೊಳ್ಳಲಾಗುತ್ತೆ. ಸದ್ಯ ಇದೇ ಪರಿಸ್ಥಿತಿ ತಮಿಳು ಚಿತ್ರರಂಗದ ಹಲವು ಚಿತ್ರಗಳಿಗೆ ಆಗುತ್ತಿವೆ. ಅದಕ್ಕೆ ಕಾರಣ, ಬಹುನಿರೀಕ್ಷಿತ 'ಜನನಾಯಗನ್' ರಿಲೀಸ್ ಗೊಂದಲ!
ಕೋರ್ಟ್ ಮೆಟ್ಟಿಲೇರಿದ್ದ ಚಿತ್ರತಂಡ...
ಕಾಲಿವುಡ್ ಸ್ಟಾರ್ ನಟ, ಟಿವಿಕೆ ಪಕ್ಷದ ನಾಯಕ ದಳಪತಿ ವಿಜಯ್ ಅಭಿನಯದ ಕೊನೆಯ ಬಹುನಿರೀಕ್ಷಿತ ಸಿನಿಮಾ 'ಜನನಾಯಗನ್' ರಿಲೀಸ್ಗೆ ಸೆನ್ಸಾರ್ ಮಂಡಳಿ ಮಾಡಿದ ಅಡಚಣೆಯೇ ಇಂದು ಇಷ್ಟೆಲ್ಲ ಸಮಸ್ಯೆಗೆ ಮೂಲ ಕಾರಣ. ಕೋರ್ಟ್ ಮೆಟ್ಟಿಲೇರಿದ ಚಿತ್ರತಂಡಕ್ಕೆ ಅಂದುಕೊಂಡ ದಿನದಂದೇ ಬಿಡುಗಡೆ ಭಾಗ್ಯ ನೀಡದಂತೆ ಮಾಡಿದ್ದು ಸಿಬಿಎಫ್ಸಿ. ಇದು ಚಿತ್ರರಂಗದ ಸದಸ್ಯರು ಹಾಗೂ ಸಿನಿಪ್ರಿಯರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಜ.09ರಂದು ಬಹುತೇಕ ಚಿತ್ರಮಂದಿರಗಳಲ್ಲಿ ತೆರೆ ಕಾಣಬೇಕಿದ್ದ ವಿಜಯ್ ಚಿತ್ರ, ಇಂದಿಗೂ ರಿಲೀಸ್ ಆಗದೆ ಇರುವುದು ಹಲವು ಕಾಲಿವುಡ್ ಚಿತ್ರಗಳಿಗೆ ಸಂಕಷ್ಟ ತಂದೊಡ್ಡಿದೆ.
'ಜನನಾಯಗನ್' ರಿಲೀಸ್ಗೆ ಕಾತರ
ವಿಜಯ್ ಅವರ ಜನನಾಯಗನ್ ಚಿತ್ರದ ರಿಲೀಸ್ ಯಾವಾಗ ಎಂಬ ಸ್ಪಷ್ಟ ಮಾಹಿತಿ ತಮಿಳು ಚಿತ್ರರಂಗಕ್ಕೆ ಇನ್ನೂ ಲಭ್ಯವಾಗಿಲ್ಲ. ಇದು ರಿಲೀಸ್ಗೆ ಎದುರುನೋಡುತ್ತಿರುವ ಇನ್ನಿತರ ಚಿತ್ರಗಳಿಗೆ ದೊಡ್ಡ ಗೊಂದಲ ತಂದಿಟ್ಟಿದೆ. ತಮಿಳಿನಲ್ಲಿ ಬಹುನಿರೀಕ್ಷಿತ ಸಿನಿಮಾವಾಗಿರುವ ಜನನಾಯಗನ್ ನೋಡಲು ಸದ್ಯ ಸಿನಿಪ್ರಿಯರು ತುದಿಗಾಲಿನಲ್ಲಿ ನಿಂತಿದ್ದಾರೆ. ಹೀಗಿರುವಾಗ, ವಿಜಯ್ ಚಿತ್ರದ ದಿನಾಂಕದಂದೇ ತಮ್ಮ ಸಿನಿಮಾವನ್ನು ರಿಲೀಸ್ ಮಾಡಿದ್ರೆ, ಖಂಡಿತ ನಷ್ಟ ಕಟ್ಟಿಟ್ಟಬುತ್ತಿ ಎಂಬ ಭಯ ಆಯಾ ಚಿತ್ರತಂಡಕ್ಕೆ ಕಾಡತೊಡಗಿದೆ.
ಒಂದು ಸಿನಿಮಾ ಉಳಿದವರಿಗೆ ತೊಂದರೆ
ಈ ನಿಟ್ಟಿನಲ್ಲಿ ಮೊದಲು ವಿಜಯ್ ಚಿತ್ರ ಮುಂದೂಡಿಕೆಯಾದ ಮರುದಿನವೇ ಹಲವು ತಂಡಗಳು ತಮ್ಮ ಸಿನಿಮಾದ ರಿಲೀಸ್ ದಿನಾಂಕವನ್ನು ಬದಲಿಸಿಕೊಂಡವು. ಆದರೆ, ಇತ್ತೀಚಿನ ವರದಿಯ ಪ್ರಕಾರ, ಜನನಾಯಗನ್ ಫೆ.19 ಅಥವಾ 20ರಂದು ರಿಲೀಸ್ ಆಗುವ ಸಾಧ್ಯತೆಗಳು ಹೆಚ್ಚಿವೆ ಎನ್ನಲಾಗಿದೆ. ಆದರೆ, ಈ ಮಾಹಿತಿ ಕೂಡ ಇನ್ನೂ ಖಚಿತವಾಗಿಲ್ಲ. ಸದ್ಯ ಇದೇ ತಮಿಳಿನ ಇನ್ನಿತರ ಸಿನಿಮಾಗಳ ರಿಲೀಸ್ಗೆ ತಡೆ ನೀಡಿದೆ. ವಿಜಯ್ ಚಿತ್ರದ ಅಧಿಕೃತ ರಿಲೀಸ್ ದಿನಾಂಕ ಯಾವಾಗ ಅಂತ ಗೊತ್ತಾದರೆ ಸಾಕಪ್ಪ ಎನ್ನುವಂತಾಗಿದೆ ಉಳಿದವರ ಪರಿಸ್ಥಿತಿ.