- ಕಾಲಿವುಡ್ ಈ ವರ್ಷ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಲಾಭವನ್ನೇ ಕಂಡಿದೆ
- ಸ್ಟಾರ್ ನಟರ ಹಾಗೂ ಹೊಸಬರ ಚಿತ್ರಗಳು ಊಹೆಗೂ ಮೀರಿದ ಯಶಸ್ಸನ್ನು ಗಳಿಸಿವೆ
- ಕಡಿಮೆ ಬಜೆಟ್ನ ಚಿತ್ರಗಳು ನಿರೀಕ್ಷೆಗೂ ಮೀರಿ ದುಪ್ಪಟ್ಟು ಲಾಭ ಕಂಡಿವೆ
ತಮಿಳುನಾಡು: 2026ಕ್ಕೆ ದಿನಗಣನೆ ಆರಂಭವಾಗಿದ್ದು, 2025ರಲ್ಲಿ ಏನೆಲ್ಲ ನಡೆದಿದೆ? ಸಿಹಿ-ಕಹಿ ಘಟನೆ, ಕ್ಷಣಗಳನ್ನು ಜನರು ಮೆಲಕು ಹಾಕುತ್ತಿದ್ದಾರೆ. ಈ ಪೈಕಿ ಭಾರತೀಯ ಚಿತ್ರೋದ್ಯಮದಿಂದ ಹಲವಾರು ಸಿನಿಮಾಗಳು ಸೂಪರ್ಹಿಟ್ ಹಾಗೂ ಬಾಕ್ಸ್ ಆಫೀಸ್ನಲ್ಲಿ ಮಿಂಚಿದರೆ, ಬಹುತೇಕ ಚಿತ್ರಗಳು ಹೀನಾಯ ಸೋಲಿನಿಂದ ಫ್ಲಾಪ್ ಸಾಲಿಗೆ ಸೇರಿವೆ. ಇತರೆ ಚಿತ್ರರಂಗಗಳಿಗೆ ಹೋಲಿಸಿದರೆ, ಕಾಲಿವುಡ್ ಈ ವರ್ಷ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಲಾಭವನ್ನೇ ಕಂಡಿದೆ.
20 ಸಿನಿಮಾಗಳಷ್ಟೇ ಲಾಭ ಗಳಿಸುವಲ್ಲಿ ವಿಫಲ
ಸ್ಯಾಂಡಲ್ವುಡ್, ಟಾಲಿವುಡ್, ಬಾಲಿವುಡ್ಗೆ ಹೋಲಿಸಿದರೆ, ತಮಿಳು ಚಿತ್ರರಂಗದ ಸ್ಟಾರ್ ನಟರ ಹಾಗೂ ಹೊಸಬರ ಚಿತ್ರಗಳು ಊಹೆಗೂ ಮೀರಿದ ಯಶಸ್ಸನ್ನು ಗಳಿಸಿವೆ. ಈ ಪೈಕಿ ಯುವ ನಟ-ನಟಿಯರ ಸಿನಿಮಾಗಳೇ ಮೇಲುಗೈ ಎಂಬುದು ಇಲ್ಲಿ ಗಮನಾರ್ಹ. 2025ರಲ್ಲಿ ಬಿಡುಗಡೆಯಾದ 200ಕ್ಕೂ ಅಧಿಕ ಚಿತ್ರಗಳಲ್ಲಿ, ಕೇವಲ 20 ಸಿನಿಮಾಗಳಷ್ಟೇ ಲಾಭ ಗಳಿಸುವಲ್ಲಿ ವಿಫಲವಾಗಿವೆ ಎಂದು ಹೇಳಲಾಗಿದೆ. ಬಿಗ್ ಬಜೆಟ್ಗಿಂತಲೂ ಕಡಿಮೆ ಬಜೆಟ್ನ ಚಿತ್ರಗಳು ನಿರೀಕ್ಷೆಗೂ ಮೀರಿ ದುಪ್ಪಟ್ಟು ಲಾಭ ಕಂಡಿವೆ.
ಗಳಿಕೆಯಲ್ಲಿ ಮಾತ್ರವಲ್ಲ, ಕಥೆಯಲ್ಲಿಯೂ ಜಯ
ಒಂದಲ್ಲ, ಎರಡಲ್ಲ. ಸುಮಾರು ಹತ್ತು ಸಿನಿಮಾಗಳು ಪಾಸಿಟಿವ್ ವಿಮರ್ಶೆಗಳ ಜತೆಗೆ ಉತ್ತಮ ಕಲೆಕ್ಷನ್ ಮಾಡಿವೆ. ಇದಕ್ಕೆ ಅತ್ಯುತ್ತಮ ಉದಾಹರಣೆ: ಶೂನ್ಯ ನಿರೀಕ್ಷೆಗಳೊಂದಿಗೆ ತೆರೆಗೆ ಬಂದ 'ಟೂರಿಸ್ಟ್ ಫ್ಯಾಮಿಲಿ', ಸೆನ್ಸೇಷನಲ್ ಹಿಟ್ ಚಿತ್ರವಾಗಿ ಹೊರಹೊಮ್ಮಿತು. ಕೇವಲ 7 ಕೋಟಿ ರೂ.ನಲ್ಲಿ ನಿರ್ಮಾಣಗೊಂಡ ಈ ಚಿತ್ರವು, 90 ಕೋಟಿ ರೂ.ಗೂ ಅಧಿಕ ಲಾಭವನ್ನೇ ನೋಡಿತು. ಇದು ಚಿತ್ರತಂಡಕ್ಕೆ ದೊಡ್ಡ ಲಾಭವನ್ನು ತಂದುಕೊಟ್ಟಿತು. ಗಳಿಕೆ ವಿಷಯದಲ್ಲಿ ಮಾತ್ರವಲ್ಲದೇ ಕಥೆಯಲ್ಲಿಯೂ ಸಿನಿಮಾ ಗೆದ್ದಿತು.
'ಡ್ರ್ಯಾಗನ್', 'ಡ್ಯೂಡ್'
ಇನ್ನು ತಮಿಳಿನ ಸಿಂಪಲ್ ಹುಡುಗ ಎಂದೇ ಕರೆಯಲ್ಪಡುವ ನಟ ಪ್ರದೀಪ್ ರಂಗನಾಥನ್ ಅಭಿನಯದ ಎರಡು ಚಿತ್ರಗಳು, ಪ್ರಚಾರ ಹಾಗೂ ಬಿಡುಗಡೆಗೂ ಮುನ್ನ ಗಮನ ಸೆಳೆಯದೆಯೇ, ಬ್ಲಾಕ್ಬಸ್ಟರ್ ಹಿಟ್ ಸಾಲಿಗೆ ಸೇರಿಕೊಂಡಿದ್ದು ರೋಚಕ. 'ಜೂನಿಯರ್ ಧನುಷ್' ಎಂದೇ ಗುರುತಿಸಿಕೊಂಡಿರುವ ಈತ, 'ಡ್ರ್ಯಾಗನ್' ಮತ್ತು 'ಡ್ಯೂಡ್' ಮೂಲಕ ಕಾಲಿವುಡ್ ಸಿನಿಪ್ರಿಯರಿಗೆ ಚಿರಪರಿಚಿತರಾಗಿ, ಇದೀಗ ತಮ್ಮ ಸಂಭಾವನೆಯನ್ನೂ ಡಬಲ್ ಮಾಡಿಕೊಂಡಿದ್ದಾರೆ.
ಸುಮಾರು 35 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿಸಲಾದ ಈ ಎರಡು ಸಿನಿಮಾಗಳು 100ಕ್ಕೂ ಹೆಚ್ಚು ಕೋಟಿ ರೂ. ಲಾಭ ಪಡೆದಿವೆ ಎಂದು ಸಿನಿ ಮೂಲಗಳು ತಿಳಿಸಿವೆ. ಇದರೊಟ್ಟಿಗೆ ವಿಶಾಲ್ ನಟನೆಯ 'ಮದಗಜರಾಜ', ಧ್ರುವ ವಿಕ್ರಮ್ ಅವರ 'ಬೈಸನ್', 'ವೀರ ಧೀರ ಸೂರನ್', 'ಕುಡುಂಬಸ್ತಾನ್', 'ತಲೈವನ್ ತಲೈವಿ' ಸೇರಿದಂತೆ ಮುಂತಾದ ಸಿನಿಮಾಗಳು ನಿರ್ಮಾಪಕರಿಗೆ ಲಾಭ ತಂದುಕೊಡುವಲ್ಲಿ ಮೋಸ ಮಾಡಲಿಲ್ಲ.
ಇನ್ನು ಸಣ್ಣ ಬಜೆಟ್‌ನಲ್ಲಿ, ಸದ್ದಿಲ್ಲದೇ ಚಿತ್ರಮಂದಿರಗಳಲ್ಲಿ ತೆರೆಕಂಡ 'ಪೆರಾಸು', 'ಡಿಎನ್ಎ', 'ಆನ್ ಪಾವಂ ಪಲ್ಲಪೋತು', 'ಮಾಮನ್' ಮತ್ತು '3BHK' ಸಿನಿಮಾಗಳು ಉತ್ತಮ ಪ್ರತಿಕ್ರಿಯೆ ಪಡೆದು, ಲಾಭ ಗಳಿಸುವಲ್ಲಿ ಯಶಸ್ವಿಯಾಗಿವೆ. ಈ ಚಿತ್ರಗಳು ಕೇವಲ ಥಿಯೇಟರ್ಗಳಲ್ಲಿ ಮಾತ್ರವಲ್ಲ, ಒಟಿಟಿಯಲ್ಲೂ ಸದ್ದು ಮಾಡಿವೆ. ಬಿಗ್ ಬಜೆಟ್ ಹಾಗೂ ಸ್ಟಾರ್ ನಟರ ಚಿತ್ರಗಳಿಗಿಂತ ಹೊಸಬರ ಹಾಗೂ ಲೋ ಬಜೆಟ್ ಸಿನಿಮಾಗಳು ಈ ವರ್ಷ ಕಮಾಲ್ ಮಾಡುವಲ್ಲಿ ಯಶಸ್ವಿಯಾಗಿವೆ,(ಏಜೆನ್ಸೀಸ್).