ವಿಜಯ್ ಅಭಿನಯದ 'ಜನ ನಾಯಗನ್' ಚಿತ್ರ
- ತಾತ್ಕಾಲಿಕ ಮುಂದೂಡಿಕೆ ಹಿನ್ನೆಲೆ ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಿದ್ದವರಿಗೆ ಹಣ ಮರುಪಾವತಿ
- ಸಿನಿಮಾ ಇತಿಹಾಸದಲ್ಲಿಯೇ ಅತಿ ದೊಡ್ಡ ರೀಫಂಡ್ ಇದು
- ಸುಮಾರು 3 ಲಕ್ಷ ಟಿಕೆಟ್‌ಗಳು ಮಾರಾಟ
ತಮಿಳುನಾಡು: ಕಾಲಿವುಡ್ ಸ್ಟಾರ್ ನಟ, ಟಿವಿಕೆ ಪಕ್ಷದ ನಾಯಕ ದಳಪತಿ ವಿಜಯ್ ಅಭಿನಯದ ಕೊನೆಯ ಬಹುನಿರೀಕ್ಷಿತ ಸಿನಿಮಾ 'ಜನನಾಯಗನ್' ರಿಲೀಸ್ಗೆ ಸದ್ಯ ಸೆನ್ಸಾರ್ ಮಂಡಳಿಯಿಂದ ಅಡಚಣೆ ಉಂಟಾಗಿದೆ. ಕೋರ್ಟ್ ಮೆಟ್ಟಿಲೇರಿದ ಚಿತ್ರತಂಡಕ್ಕೆ ಕಡೆಗೂ ಬಿಡುಗಡೆ ಭಾಗ್ಯ ಸಿಗದಿರುವುದು ಸದ್ಯ ಚಿತ್ರರಂಗದ ಸದಸ್ಯರು ಹಾಗೂ ನಟನ ಅಭಿಮಾನಿಗಳ ಪಿತ್ತ ನೆತ್ತಿಗೇರಿಸಿದೆ.
ರಾಜಕೀಯ ಪಿತೂರಿ ಆರೋಪ
ಎಚ್. ವಿನೋತ್ ನಿರ್ದೇಶನದ ಈ ಚಿತ್ರದಲ್ಲಿ ವಿಜಯ್ ಮತ್ತು ಪೂಜಾ ಹೆಗ್ಡೆ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದು, ನಟನ ಕೊನೆಯ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಸಿನಿಪ್ರಿಯರು ತುದಿಗಾಲಿನಲ್ಲಿದ್ದರು. ಆದರೆ, ಸೆನ್ಸಾರ್ ಮಂಡಳಿ ಅಡಚಣೆ ಉಂಟು ಮಾಡಿದ ಬೆನ್ನಲ್ಲೇ ಚಿತ್ರದ ನಿರ್ಮಾಪಕರು ಹೈಕೋರ್ಟ್ ಮೆಟ್ಟಿಲೇರಿದರು. ಅಲ್ಲಿಂದ ಕೋರ್ಟ್ ತೀರ್ಪು ಕೂಡ ಸಿನಿಮಾ ವಿರುದ್ಧ ಬಂದ ಬೆನ್ನಲ್ಲೇ ಜ.09ರಂದು ತೆರೆಗೆ ಬರಬೇಕಿದ್ದ ಜನನಾಯಗನ್ ಚಿತ್ರವು ಇದೀಗ ತಾತ್ಕಾಲಿಕವಾಗಿ ಮುಂದೂಡಿಕೆಯಾಗಿದೆ. ಇದರ ಹಿಂದೆ ರಾಜಕೀಯ ಸೇಡು, ಪಿತೂರಿಗಳಿವೆ ಎಂಬ ಆರೋಪಗಳು ಕೇಳಿಬಂದಿರುವುದು ಗಮನಾರ್ಹ.
ಫೆಬ್ರವರಿಯಲ್ಲಿ ರಿಲೀಸ್ ಭಾಗ್ಯ?
ನಿರೀಕ್ಷೆಗೂ ಮೀರಿ ಫಸ್ಟ್ ಶೋ ನೋಡಲು ಬುಕ್ ಮಾಡಿದ್ದ ಅಭಿಮಾನಿಗಳಿಗೆ ಚಿತ್ರದ ಮುಂದೂಡಿಕೆ ಸುದ್ದಿ ತೀವ್ರ ಬೇಸರ ತಂದೊಡ್ಡಿದೆ. ಈ ವಿಚಾರ ಸಿನಿಪ್ರಿಯರಿಗೆಷ್ಟು ಶಾಕಿಂಗ್ ಆಗಿತ್ತೋ, ಚಿತ್ರತಂಡಕ್ಕೂ ಅಷ್ಟೇ ಅಚ್ಚರಿ ಮೂಡಿಸಿತು. ರಿಲೀಸ್ ರದ್ದಾದ ಬೆನ್ನಲ್ಲೇ ಭಾರಿ ಮೊತ್ತದ ಹಣವನ್ನು ತಯಾರಕರು ಮರುಪಾವತಿಸಿದ್ದಾರೆ. ಅಸಲಿಗೆ, ಈ ರೀಫಂಡ್ ಸಿನಿಮಾ ಇತಿಹಾಸದಲ್ಲಿಯೇ ಅತಿದೊಡ್ಡ ಮರುಪಾವತಿ ಎನ್ನಲಾಗಿದೆ.
ವರದಿಗಳ ಪ್ರಕಾರ, 3 ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಮಾರಾಟವಾಗಿದೆ. ಈ ಮಾರಾಟವು 19 ಕೋಟಿ ರೂ.ಗೂ ಹೆಚ್ಚು ಆದಾಯವನ್ನು ತಂದುಕೊಟ್ಟಿತು. ಆದರೆ, ಸಿನಿಮಾ ಹಲವು ವಿಚಾರಗಳಿಂದ ಮುಂದೂಡಿಕೆಯಾದ ಹಿನ್ನೆಲೆ ನಿರ್ಮಾಪಕರು, ಮುಂಗಡ ಬುಕ್ಕಿಂಗ್ ಮಾಡಿದ್ದ ಸಿನಿಪ್ರಿಯರಿಗೆ ಟಿಕೆಟ್ ಹಣವನ್ನು ಸಂಪೂರ್ಣವಾಗಿ ವಾಪಾಸ್ ನೀಡಿದ್ದಾರೆ. ಸದ್ಯದ ಮಟ್ಟಿಗೆ ಚಿತ್ರದ ರಿಲೀಸ್ ದಿನಾಂಕ ಯಾವಾಗ ಎಂಬ ಖಚಿತ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಆದರೆ, ಫೆಬ್ರವರಿಯ ಮೊದಲ ವಾರದಲ್ಲಿ ಜನನಾಯಗನ್ ತೆರೆಗೆ ಬರಬಹುದು ಎಂಬ ನಿರೀಕ್ಷೆಗಳಿವೆ,(ಏಜೆನ್ಸೀಸ್).