- ಬಹುನಿರೀಕ್ಷಿತ 'ಜನ ನಾಯಗನ್' ಸಿನಿಮಾದ ದೃಶ್ಯಗಳು ಆನ್ಲೈನ್ನಲ್ಲಿ ಲೀಕ್
- ಈ ಪ್ರಕರಣದಲ್ಲಿ ಮೂವರು ಆರೋಪಿಗಳು ಸೈಬರ್ ಪೊಲೀಸರ ಬಲೆಗೆ
- ಜನ ನಾಯಗನ್ ಚಿತ್ರದ ಎಡಿಟರ್ ಅನ್ನೇ ಸಸ್ಪೆಂಡ್ ಮಾಡಿದ SIFEA
ಚೆನ್ನೈ: ಪ್ರಸ್ತುತ ತಮಿಳುನಾಡು ಚುನಾವಣಾ ಕಣದಲ್ಲಿ ಗೆಲುವಿಗಾಗಿ ಕಾಯುತ್ತಿರುವ ಟಿವಿಕೆ ಪಕ್ಷದ ನಾಯಕ ವಿಜಯ್ಗೆ ತಮ್ಮ ಬಹುನಿರೀಕ್ಷಿತ ಚಿತ್ರ 'ಜನ ನಾಯಗನ್' (Jana Nayagan) ದೃಶ್ಯಗಳು ಲೀಕ್ ಆಗಿರುವುದು ಭಾರೀ ನೋವುಂಟು ಮಾಡಿದೆ. ನಟನ ಕೊನೆಯ ಸಿನಿಮಾಗೆ ಈಗಾಗಲೇ ಸಾಲು ಸಾಲು ಸಂಕಷ್ಟಗಳು ಹೆಗಲೇರಿದ್ದು, ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಬಹುಮುಖ್ಯ ದೃಶ್ಯಗಳು ಸೋರಿಕೆಯಾಯಿತು. ಮೊದಲೇ ರಿಲೀಸ್ಗೆ ಪರದಾಡುತ್ತಿರುವ ಚಿತ್ರತಂಡಕ್ಕೆ, ಆನ್‌ಲೈನ್ ಸೋರಿಕೆ ದೊಡ್ಡ ಸಂಕಷ್ಟಕ್ಕೆ ಸಿಲುಕಿಸಿದೆ. ಈ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ವೊಂದು ಲಭಿಸಿದೆ.
ಆನ್‌ಲೈನ್ ಸೋರಿಕೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಸೇರಿದಂತೆ ಮೂವರನ್ನು ಚೆನ್ನೈ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಸೆನ್ಸಾರ್ ಮಂಡಳಿಯಿಂದ ತೊಂದರೆಗೆ ಸಿಲುಕಿರುವ ವಿಜಯ್ ಚಿತ್ರವು ಕೆಲವು ತಿಂಗಳಿನಿಂದ ತೆರೆ ಕಾಣಲು ತೀರ ಪರದಾಡುತ್ತಿರುವ ಸಮಯದಲ್ಲೇ ಚಿತ್ರದ ದೃಶ್ಯಗಳನ್ನು ಜಾಲತಾಣಗಳಲ್ಲಿ ಹರಿಬಿಟ್ಟ ಕಿಡಿಗೇಡಿಗಳ ಕೆಲಸಕ್ಕೆ ಇಡೀ ತಮಿಳು ಚಿತ್ರರಂಗವೇ ಹಿಡಿಶಾಪ ಹಾಕಿದೆ. ಈ ಮಧ್ಯೆ, ಜನ ನಾಯಗನ್ ಚಿತ್ರದ ಮುಖ್ಯ ಎಡಿಟರ್ ಪ್ರದೀಪ್ ಇ ರಾಘವ್ರನ್ನು ಸೌತ್ ಇಂಡಿಯಾ ಫಿಲ್ಮ್ ಎಡಿಟರ್ಸ್ ಅಸೋಸಿಯೇಷನ್ (SIFEA) ಸಸ್ಪೆಂಡ್ ಮಾಡಿದೆ.
ಸಂಘದ ಮೂಲ ನಿಯಮಗಳ ಉಲ್ಲಂಘನೆ ಮತ್ತು ಚಿತ್ರದ ಬಹುಮುಖ್ಯ ದೃಶ್ಯಗಳ ಸೋರಿಕೆ ತಡೆಯಲು ವಿಫಲರಾದ ಆರೋಪದಡಿ ಅವರನ್ನು ಅಮಾನತುಗೊಳಿಸಲಾಗಿದೆ. ಏ.17ರಂದು ನಡೆದ ತುರ್ತು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು SIFEA ಸ್ಪಷ್ಟಪಡಿಸಿದೆ. ಸಮಿತಿಯಲ್ಲಿ ಹಿರಿಯ ಸಿನಿ ಸಂಪಾದಕರು ಮತ್ತು ಕಾರ್ಯಕಾರಿ ಸದಸ್ಯರು ಭಾಗವಹಿಸಿ, ಒಮ್ಮತದಿಂದ ಚರ್ಚಿಸಿ ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದ್ದಾರೆ.
ರಾಘವ್ ಅವರು ನೇರವಾಗಿ ಚಿತ್ರದ ದೃಶ್ಯಗಳ ಲೀಕ್‌ಗೆ ಕಾರಣವಲ್ಲ ಸಂಘ ತಿಳಿಸಿದ್ದರೂ, ತಮ್ಮ ಅಜಾಗರೂಕತೆಯಿಂದಲೇ ಈ ಘಟನೆ ಸಂಭವಿಸಿರುವುದು ಎಂದು ದೂರಲಾಗಿದೆ. ಅಧ್ಯಕ್ಷ ವಿ. ಗೋಪಿಕೃಷ್ಣ ಮತ್ತು ಪ್ರಧಾನ ಕಾರ್ಯದರ್ಶಿ ಎನ್.ಬಿ. ಉಮಾಶಂಕರ್ ಬಾಬು ಅವರು ಸಹಿ ಹಾಕಿರುವ ಪತ್ರದಲ್ಲಿ ಈ ವಿಷಯಗಳನ್ನು ಉಲ್ಲೇಖಿಸಲಾಗಿದೆ. ತಮಿಳಿನ ಹಲವು ಸೂಪರ್ಹಿಟ್ ಸಿನಿಮಾಗಳನ್ನೇ ಎಡಿಟ್ ಮಾಡಿರುವ ಪ್ರದೀಪ್, ಸ್ಟಾರ್ ನಟರ ಸಕ್ಸಸ್ಫುಲ್ ಚಿತ್ರಗಳನ್ನು ಸಿನಿಪ್ರಿಯರಿಗೆ ಅಚ್ಚುಕಟ್ಟಾಗಿ ತೋರಿಸುವ ಕೆಲಸ ಮಾಡಿರುವುದು ಗಮನಾರ್ಹ.
ತಮಿಳಿನ 'ಲವ್ ಟುಡೇ', 'ಡ್ರಾಗನ್', 'ಲವ್ ಇನ್ಶುರೆನ್ಸ್ ಕಂಪನಿ', 'ತಲೈವನ್ ತಲೈವಿ' ಮತ್ತು 'ಅನ್ನಾಬೆಲ್ಲೆ ಸೇತುಪತಿ', ನಯನತಾರಾ: ಬಿಯಾಂಡ್ ದಿ ಫೇರಿಟೇಲ್ ಸೇರಿದಂತೆ ಮುಂತಾದ ಹೈ-ಪ್ರೊಫೈಲ್ ಸಿನಿಮಾಗಳನ್ನು ಎಡಿಟ್ ಮಾಡಿ, ಶಭಾಷ್ಗಿರಿ ಪಡೆದಿರುವ ಸಂಕಲನಕಾರ ಈಗ ಕೆಲಸದಿಂದ ಸಸ್ಪೆಂಡ್ ಆಗಿರುವುದು ಹಲವರ ಅಚ್ಚರಿಗೆ ಕಾರಣವಾಗಿದೆ,(ಏಜೆನ್ಸೀಸ್).