ನಿರ್ದೇಶಕ ಕೆ. ಭಾಗ್ಯರಾಜ್​ (ಎಡ), ನಟಿ ಖುಷ್ಬೂ ಸುಂದರ್ ದಂಪತಿ (ಬಲ) 
ಕಾಲಿವುಡ್

ದುಃಖದ ಸಮಯದಲ್ಲಿ ಹೀಗೆಲ್ಲ ಮಾಡೋದು ಸರಿನಾ? ನೆಟ್ಟಿಗರ ಟ್ರೋಲ್​, ಟೀಕೆಗಳಿಗೆ ನಟಿ ಖುಷ್ಬೂ ಖಡಕ್​ ತಿರುಗೇಟು

ಪ್ರಮುಖ ಮುಖ್ಯಾಂಶಗಳು

  • ಇಡೀ ತಮಿಳು ಚಿತ್ರರಂಗವೇ ದುಃಖದಲ್ಲಿರುವಾಗ ಈ ಪೋಸ್ಟ್​ ಏಕೆ?
  • ನೆಟ್ಟಿಗರ ಟೀಕೆಗಳಿಗೆ ನಟಿ ಖುಷ್ಬೂ ಸುಂದರ್​ ಖಡಕ್​ ತಿರುಗೇಟು
ಚೆನ್ನೈ: ಕಾಲಿವುಡ್​ನ ದಿಗ್ಗಜ, ಹಿರಿಯ ನಿರ್ದೇಶಕ ಹಾಗೂ ನಟ ಕೆ. ಭಾಗ್ಯರಾಜ್ ಅವರ ನಿಧನದ ಸುದ್ದಿಗೆ ಇಡೀ ತಮಿಳು ಚಿತ್ರರಂಗ​ದ ಕಲಾವಿದರು ಮತ್ತು ರಾಜಕೀಯ ಗಣ್ಯರು, ಅಭಿಮಾನಿಗಳು ಸಂತಾಪ ಸೂಚಿಸಿದರು. ಇದೇ ಸಂದರ್ಭದಲ್ಲಿ ಮಗಳ ಅದ್ಧೂರಿ ಮದುವೆ ಸಂಭ್ರಮದಲ್ಲಿ ತೊಡಗಿದ್ದ ಹಿರಿಯ ನಟಿ, ರಾಜಕಾರಣಿ ಖುಷ್ಬೂ ಸುಂದರ್​ ವಿರುದ್ಧ ಟ್ರೋಲಿಗರು ಭಾರಿ ಅಸಮಾಧಾನ ಹೊರಹಾಕಿದ್ದಾರೆ.
ಇತ್ತೀಚೆಗಷ್ಟೇ ಖುಷ್ಬೂ ಅವರ ಹಿರಿಯ ಮಗಳು ಅವಂತಿಕಾ ಮತ್ತು ಶ್ರವಣ್ ಶ್ರೀನಿವಾಸನ್ ಅವರ ವಿವಾಹ ಮಹೋತ್ಸವವು ಗೋವಾದಲ್ಲಿ ಅದ್ಧೂರಿಯಾಗಿ ನೆರವೇರಿತು. ಮಗಳು, ಪತ್ನಿ ಜೊತೆಗಿನ ಸಂಭ್ರಮದ ಕ್ಷಣಗಳನ್ನು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಪೋಸ್ಟ್​ ಮಾಡಿಕೊಳ್ಳುವ ಮೂಲಕ ಖುಷಿಯನ್ನು ಹಂಚಿಕೊಂಡರು. ಇದೇ ಸಮಯದಲ್ಲಿ ತಮಿಳಿನ ದಿಗ್ಗಜರೊಬ್ಬರು ನಿಧನ ಹೊಂದಿರುವಾಗ ಇಂತಹ ಸಂಭ್ರಮದ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುವುದು ಎಷ್ಟು ಸರಿ? ಸಂತಾಪದ ಸಮಯದಲ್ಲಿ ಇದೆಲ್ಲವೂ ನಿಮಗೆ ಬೇಕಾ? ಎಂದು ಒಂದಷ್ಟು ನೆಟ್ಟಿಗರು ನಟಿಯನ್ನು ಕುಟುಕಿದ್ದಾರೆ.

ಟೀಕೆಗಳಿಗೆ ಖುಷ್ಬೂ ಖಡಕ್ ಪ್ರತಿಕ್ರಿಯೆ

ತಮ್ಮ ವೈಯಕ್ತಿಕ ಜೀವನದ ಬಗ್ಗೆ ನೆಗೆಟಿವ್ ಕಮೆಂಟ್ ಮಾಡಿದವರಿಗೆ ಖುಷ್ಬೂ ಸುಂದರ್ ಸುಮ್ಮನೆ ಬಿಟ್ಟಿಲ್ಲ. ಕುಟುಂಬದೊಂದಿಗೆ ಬಿಜಿಯಾಗಿದ್ದರೂ ಕಮೆಂಟ್ ಬಾಕ್ಸ್‌ನಲ್ಲಿ ಟೀಕಿಸಿದವರಿಗೆ ತಿರುಗೇಟು ನೀಡಿಯೇ ಸಮಾಧಾನ ತಂದುಕೊಂಡಿದ್ದಾರೆ. ಸಂತೋಷವಾಗಿರಲು ನನಗೆ ಸಂಪೂರ್ಣ ಹಕ್ಕಿದೆ ಎಂದಿದ್ದಾರೆ.
"ನಿಮಗೆ ನನ್ನ ಪೋಸ್ಟ್‌ಗಳನ್ನು ನೋಡುವುದು ಕಷ್ಟವಾದರೆ, ದಯವಿಟ್ಟು ನನ್ನನ್ನು ಅನ್​ಫಾಲೋ ಮಾಡಿಬಿಡಿ. ನಿಮ್ಮಂತಹ ಜನರು ಇಲ್ಲದಿದ್ದರೆ, ನಾನು ಇನ್ನೂ ಚೆನ್ನಾಗಿಯೇ ಇರುತ್ತೇನೆ. ನನಗೆ ಸಂತೋಷವಾಗಿರಲು ಸಂಪೂರ್ಣವಾದ ಹಕ್ಕಿದೆ" ಎಂದು ಟೀಕಿಸಿದವರಿಗೆ ಮುಖಕ್ಕೆ ಹೊಡೆದಂತೆ ಹೇಳಿದ್ದಾರೆ. ಇಷ್ಟೇ ಅಲ್ಲದೆ, ಪುತ್ರಿಯ ಮದುವೆ ಕಾರ್ಯಕ್ರಮಗಳು ಎರಡು ದಿನಗಳ ಹಿಂದೆಯಷ್ಟೇ ಮುಗಿಸಿದ್ದಾಗಿ ಕೆಲವರಿಗೆ ನೆನಪಿಸಿದರು.

ಗೋವಾದಲ್ಲಿ ಅದ್ಧೂರಿ ವಿವಾಹ

ಖುಷ್ಬೂ ಮತ್ತು ನಿರ್ದೇಶಕ, ನಟ ಸುಂದರ್ ಸಿ ದಂಪತಿಯ ಹಿರಿಯ ಪುತ್ರಿ ಅವಂತಿಕಾ ಅವರ ವಿವಾಹವು ಗೋವಾದಲ್ಲಿ ಗುರುವಾರ (ಜೂ.25) ಸಂಜೆ ಅದ್ಧೂರಿಯಾಗಿ ನೆರವೇರಿತು. ಈ ಸ್ಟಾರ್ ವಿವಾಹ ಸಮಾರಂಭದಲ್ಲಿ ದಕ್ಷಿಣ ಭಾರತ ಹಾಗೂ ಬಾಲಿವುಡ್‌ನ ಸ್ಟಾರ್ ಕಲಾವಿದರು ಭಾಗವಹಿಸಿದ್ದರು. ಮೆಗಾಸ್ಟಾರ್​ ಚಿರಂಜೀವಿ, ನಾಗಾರ್ಜುನ ಅಕ್ಕಿನೇನಿ, ವೆಂಕಟೇಶ್, ಅನಿಲ್ ಕಪೂರ್, ಜಾಕಿ ಶ್ರಾಫ್, ತ್ರಿಶಾ ಕೃಷ್ಣನ್, ಅಮಲಾ ಅಕ್ಕಿನೇನಿ ಸೇರಿ ಹಲವು ತಾರೆಯರು ಭಾಗವಹಿಸಿ ನವದಂಪತಿಗೆ ಶುಭ ಹಾರೈಸಿದರು,(ಏಜೆನ್ಸೀಸ್).