ಹನ್ಸಿಕಾ ಮೊಟ್ವಾನಿ 
ಕಾಲಿವುಡ್

Hansika Motwani - ವಿಚ್ಛೇದನದ ಬಗ್ಗೆ ಮೌನ ಮುರಿದ ಹನ್ಸಿಕಾ ಮೊಟ್ವಾನಿ

Hansika Motwani -
ಬಾಲನಟಿಯಾಗಿ ಮತ್ತು ನಾಯಕಿಯಾಗಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡವರು ನಟಿ ಹನ್ಸಿಕಾ ಮೊಟ್ವಾನಿ. 25 ವರ್ಷಗಳ ಕರಿಯರ್​ನಲ್ಲಿ 10ಕ್ಕೂ ಹೆಚ್ಚು ಧಾರಾವಾಹಿಗಳು, ಕನ್ನಡದ "ಬಿಂದಾಸ್​' ಸೇರಿ 50ಕ್ಕೂ ಹೆಚ್ಚು ತಮಿಳು, ತೆಲುಗು, ಹಿಂದಿ ಸಿನಿಮಾಗಳಲ್ಲಿ ಮಿಂಚಿರುವ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ. ಆದರೆ, 34 ವರ್ಷದ ಹನ್ಸಿಕಾ ಮೊಟ್ವಾನಿ ವೈಯಕ್ತಿಕ ಜೀವನದ ಬಗ್ಗೆ ಹೀಗೆ ಹೇಳುವುದು ಕಷ್ಟ. ಏಕೆಂದರೆ ಅವರ ಮದುವೆ ನಾಲ್ಕು ವಸಂತ ಪೂರೈಸುವ ಮೊದಲೇ ಮುರಿದು ಬಿದ್ದಿದೆ. ಉದ್ಯಮಿ ಸೊಹೈಲ್​ ಕಠುರಿಯಾ ಜತೆ 2022ರಲ್ಲಿ ಹನ್ಸಿಕಾ ಲವ್​ ಮ್ಯಾರೇಜ್​ ಆಗಿದ್ದರು. ಆದರೆ, ಮದುವೆಯಾದ ಕೆಲವೇ ತಿಂಗಳಲ್ಲಿ ಜೋಡಿಯ ನಡುವೆ ಸಮಸ್ಯೆಗಳು ತಲೆದೋರಿದ ಕಾರಣ, ಹನ್ಸಿಕಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಕಳೆದ ಮೇ ತಿಂಗಳಲ್ಲಿ ವಿಚ್ಛೇದನ ಪಡೆದ ಹನ್ಸಿಕಾ, ಇದೇ ಮೊದಲ ಬಾರಿಗೆ ಆ ಬಗ್ಗೆ ಮೌನ ಮುರಿದಿದ್ದಾರೆ. "ನನ್ನ ವಿಚ್ಛೇದನದ ಬಗ್ಗೆ ಹಲವರು. ಹಲವಾರು ರೀತಿ ಮಾತನಾಡಿದರು. ನಾನದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನನಗೆ ನನ್ನ ಕುಟುಂಬದ ಬೆಂಬಲವಿದೆ. ವಿಚ್ಛೇದನದ ಬಗ್ಗೆ ವಿಷಾದವಿಲ್ಲ. ನಮ್ಮ ಜಾಗ ಬಿಟ್ಟು, ಬೇರೆಲ್ಲೋ ಹೋಗುವ, ಯಾವುದೋ ರೈಲು ಹತ್ತಿ, ಪಯಣದುದ್ದಕ್ಕೂ ಕಷ್ಟ ಅನುಭವಿಸುವುದಕ್ಕಿಂತ, ಮುಂದಿನ ನಿಲ್ದಾಣದಲ್ಲೇ ಇಳಿದು ಮುಂದಿನ ಪ್ರಯಾಣದ ಬಗ್ಗೆ ಯೋಚಿಸುವುದು ಉತ್ತಮ. ಪ್ರೀತಿ ಎಂಬುದು ಸುಂದರ ಅನುಭವ. ಅದು ನನಗೆ ಈಗಲೇ ಆಗಬೇಕು? ಆಮೇಲೆ ಆಗಬೇಕು? ಅಂತೇನಿಲ್ಲ. ನನ್ನ ಹಣೆಯಲ್ಲಿ ಅದು ಬರೆದಿದ್ದರೆ, ಮತ್ತೆ ಯಾವಾಗ ಬೇಕಾದರೂ ಆಗಬಹುದು' ಎಂದು ಹೇಳಿಕೊಂಡಿದ್ದಾರೆ.