ಜನನಾಯಗನ್ ಚಿತ್ರಕ್ಕೆ ಸೆನ್ಸಾರ್ ಸಂಕಷ್ಟ
- ದಳಪತಿ ವಿಜಯ್ ಕೊನೆಯ ಸಿನಿಮಾ 'ಜನನಾಯಗನ್' ರಿಲೀಸ್ಗೆ ಸಂಕಷ್ಟ
- ಸೆನ್ಸಾರ್ ಮಂಡಳಿ ಸಮಸ್ಯೆ ಬಗ್ಗೆ ಪ್ರತಿಕ್ರಿಯಿಸಿದ ನಟ ಜೀವಾ
- ನನ್ನ ಚಿತ್ರಕ್ಕೆ 48 ಕಟ್ಸ್, ಕೋವಿಡ್ ಸಮಸ್ಯೆ ಕಾಡಿತ್ತು ಎಂದ ನಟ
ತಮಿಳುನಾಡು: ಕಾಲಿವುಡ್ ಸ್ಟಾರ್ ನಟ, ಟಿವಿಕೆ ಪಕ್ಷದ ನಾಯಕ ದಳಪತಿ ವಿಜಯ್ ಅಭಿನಯದ ಕೊನೆಯ ಬಹುನಿರೀಕ್ಷಿತ ಸಿನಿಮಾ 'ಜನನಾಯಗನ್' ರಿಲೀಸ್ಗೆ ಸದ್ಯ ಸೆನ್ಸಾರ್ ಮಂಡಳಿಯಿಂದ ಅಡಚಣೆ ಉಂಟಾಗಿದೆ. ಕೋರ್ಟ್ ಮೆಟ್ಟಿಲೇರಿದ ಚಿತ್ರತಂಡಕ್ಕೆ ಸದ್ಯಕ್ಕೆ ಬಿಡುಗಡೆ ಭಾಗ್ಯ ಸಿಗದಿರುವುದು ಇದೀಗ ಚಿತ್ರರಂಗದ ಸದಸ್ಯರು ಹಾಗೂ ನಟನ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ತಮಿಳು ನಟ ಜೀವಾ ಪ್ರತಿಕ್ರಿಯಿಸಿದ್ದಾರೆ.
ಸೆನ್ಸಾರ್ ಮಂಡಳಿಯ ವಿವಾದದಿಂದಾಗಿ ವಿಜಯ್ ಅವರ 'ಜನ ನಾಯಗನ್' ಚಿತ್ರಕ್ಕೆ ಸಂಕಷ್ಟ ಎದುರಾಗಿದ್ದು, ಸದ್ಯದ ಮಟ್ಟಿಗೆ ರಿಲೀಸ್ ಮುಂದೂಡಿಕೆಯಾಗಿದೆ. ಇದರ ಲಾಭ ಪಡೆದುಕೊಂಡಿರುವ ಹಲವು ಚಿತ್ರಗಳು ಸಂಕ್ರಾಂತಿ ಹಬ್ಬದ ಸಾಲು ರಜಾ ದಿನಗಳನ್ನು ಸದುಪಯೋಗ ಪಡೆದುಕೊಳ್ಳಲು ಬಿಡುಗಡೆ ದಿನಾಂಕಗಳನ್ನು ದಿಢೀರ್ ಬದಲಿಸಿಕೊಂಡಿವೆ. ಆ ಪೈಕಿ ನಟ ಜೀವಾ ಅಭಿನಯದ 'ತಲೈವರ್ ತಂಬಿ ತಲೈಮೈಯಿಲ್' ಕೂಡ ಒಂದು. ಆರಂಭದಲ್ಲಿ ಜ.30ಕ್ಕೆ ನಿಗದಿಯಾಗಿದ್ದ ಈ ಚಿತ್ರ, ಈಗ ಜ.15ರಂದು ರಿಲೀಸ್ಗೆ ಸಜ್ಜಾಗಿದೆ.
ಚೆನ್ನೈನಲ್ಲಿ ಆಯೋಜಿಸಿದ್ದ ಚಿತ್ರದ ಸುದ್ದಿಗೋಷ್ಠಿ ವೇಳೆ ಮಾತನಾಡಿದ ಜೀವಾ, "ಸೆನ್ಸಾರ್ ಮಂಡಳಿಯ ತೊಂದರೆ ಕುರಿತು ತಮ್ಮ ಅಭಿಪ್ರಾಯ ಹಾಗೂ ಅನುಭವವನ್ನು ಹಂಚಿಕೊಂಡರು. ನನ್ನ ಚಿತ್ರಕ್ಕೂ ಸಿಬಿಎಫ್ಸಿಯಿಂದ ದೊಡ್ಡ ಮಟ್ಟದ ತೊಂದರೆಯಾಗಿದೆ. ಜಿಪ್ಸಿ ಎಂಬ ಚಿತ್ರದಲ್ಲಿ ನಾನು ಅಭಿನಯಿಸಿದ್ದೆ. ಈ ಸಿನಿಮಾಗೆ 48 ಕಟ್ಸ್ ವಿಧಿಸಿದ್ದರು. ಅಂತಿಮವಾಗಿ, ಎಲ್ಲಾ ಮುಗಿಸಿ ಕ್ಲಿಯರೆನ್ಸ್ ಪಡೆಯುವ ವೇಳೆಗೆ ಕೋವಿಡ್ ಬಂದಿತ್ತು. ಹಾಗೆ ನೋಡುವುದಾದರೆ, ಇದರಲ್ಲಿ ಅತಿ ಹೆಚ್ಚು ಅನುಭವ ನನಗೇ ಇರೋದು" ಎಂದು ಹೇಳಿದ್ದಾರೆ.
'ಜನನಾಯಗನ್' ರಿಲೀಸ್ಗೆ ರಾಜಕೀಯ ದ್ವೇಷ?
ಎಚ್. ವಿನೋತ್ ನಿರ್ದೇಶನದ ಈ ಚಿತ್ರದಲ್ಲಿ ವಿಜಯ್ ಮತ್ತು ಪೂಜಾ ಹೆಗ್ಡೆ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದು, ನಟನ ಕೊನೆಯ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಸಿನಿಪ್ರಿಯರು ತುದಿಗಾಲಿನಲ್ಲಿದ್ದರು. ಆದರೆ, ಸೆನ್ಸಾರ್ ಮಂಡಳಿ ಅಡಚಣೆ ಉಂಟು ಮಾಡಿದ ಬೆನ್ನಲ್ಲೇ ಚಿತ್ರದ ನಿರ್ಮಾಪಕರು ಹೈಕೋರ್ಟ್ ಮೆಟ್ಟಿಲೇರಿದರು. ಅಲ್ಲಿಂದ ಕೋರ್ಟ್ ತೀರ್ಪು ಕೂಡ ಸಿನಿಮಾ ವಿರುದ್ಧ ಬಂದ ಬೆನ್ನಲ್ಲೇ ಜ.09ರಂದು ತೆರೆಗೆ ಬರಬೇಕಿದ್ದ ಜನನಾಯಗನ್ ಚಿತ್ರವು ಇದೀಗ ತಾತ್ಕಾಲಿಕವಾಗಿ ಮುಂದೂಡಿಕೆಯಾಗಿದೆ. ಇದರ ಹಿಂದೆ ರಾಜಕೀಯ ಸೇಡು, ಪಿತೂರಿಗಳಿವೆ ಎಂಬ ಆರೋಪಗಳು ಕೇಳಿಬಂದಿರುವುದು ಗಮನಾರ್ಹ,(ಏಜೆನ್ಸೀಸ್).