- 2 ವರ್ಷಕ್ಕೊಂದು ಸಿನಿಮಾ ಮಾಡ್ತಿದ್ದಾರೆ ತಮಿಳು ನಟ ಅಜಿತ್
- ಬೈಕ್ ರೇಸಿಂಗ್ನಲ್ಲಿ ಬಿಜಿ ಹಿನ್ನೆಲೆ ಸಿನಿಮಾ ಕೆಲಸಗಳು ಮುಂದೂಡಿಕೆ
- ರೀ-ರಿಲೀಸ್ ಚಿತ್ರದಲ್ಲೂ ದಾಖಲೆ ಬರೆದ ಅಜಿತ್ ಕುಮಾರ್ ಸಿನಿಮಾ
ತಮಿಳುನಾಡು: ತಮಿಳು ಚಿತ್ರರಂಗದ ಹಿರಿಯ ನಟ, ಅಭಿಮಾನಿಗಳ ನೆಚ್ಚಿನ 'ತಲಾ' ಅಜಿತ್ ಕುಮಾರ್ ಅಭಿನಯದ 2011ರಲ್ಲಿ ತೆರೆಕಂಡ ಸೂಪರ್ಹಿಟ್ ಮಾಸ್-ಆ್ಯಕ್ಷನ್ 'ಮಂಕಥಾ' ಇದೀಗ ರೀ-ರಿಲೀಸ್ ಆಗಿದ್ದು, ಚಿತ್ರಮಂದಿರಗಳಲ್ಲಿ ಸಿನಿಪ್ರಿಯರಿಂದ ಶಿಳ್ಳೆಗಳನ್ನು ಸ್ವೀಕರಿಸಿದೆ. ಅಜಿತ್ ಅವರ ಹಳೆಯ ಚಿತ್ರವು ತೆರೆಕಂಡಿರುವುದು ಸದ್ಯ ಬಾಕ್ಸ್ ಆಫೀಸ್ನಲ್ಲಿ ಹೊಸ ಪೈಪೋಟಿಯನ್ನೇ ಹುಟ್ಟುಹಾಕಿದೆ.
'ಗಿಲ್ಲಿ' ದಾಖಲೆ ಮುರಿದ ಅಜಿತ್ ಸಿನಿಮಾ
ಚಿತ್ರದ ಬಿಡುಗಡೆಗೆ ಮುನ್ನವೇ ಮುಂಗಡ ಬುಕ್ಕಿಂಗ್ನಲ್ಲಿ ಭಾರೀ ಸದ್ದು ಮಾಡಿದ ಅಜಿತ್ ಸಿನಿಮಾ, ಕೇವಲ ತಮಿಳುನಾಡು ಮಾತ್ರವಲ್ಲದೇ ಬೆಂಗಳೂರಿನಲ್ಲಿ ಹೆಚ್ಚುವರಿ ಬುಕ್ಕಿಂಗ್ಗಳನ್ನು ಪಡೆದುಕೊಂಡಿದೆ. ವೆಂಕಟ್ ಪ್ರಭು ನಿರ್ದೇಶನದ ಈ ಚಿತ್ರವು ತಮಿಳುನಾಡಿನಲ್ಲಿ ಮೊದಲ ದಿನಕ್ಕೆ 2.20 ಕೋಟಿ ರೂ.ಗೂ ಹೆಚ್ಚು ಗಳಿಸಿದೆ. ಇದು 2009ರಲ್ಲಿ ದಳಪತಿ ವಿಜಯ್ ನಟನೆಯ ಬ್ಲಾಕ್ಬಸ್ಟರ್ 'ಗಿಲ್ಲಿ' ರೀ-ರಿಲೀಸ್ ಸಮಯದಲ್ಲಿ ದಾಖಲಿಸಿದ ಮುಂಗಡ ಬುಕ್ಕಿಂಗ್ ದಾಖಲೆಯನ್ನು ಹಿಂದಿಕ್ಕಿದೆ. ಗಿಲ್ಲಿ 2.15 ಕೋಟಿ ರೂ. ಗಳಿಸಿತ್ತು. ಆದರೀಗ, ಆ ರೆಕಾರ್ಡ್ ಅನ್ನು ಅಜಿತ್ ಸಿನಿಮಾ ಮುರಿದಿದೆ.
ಒಂದೆಡೆ ತಮ್ಮ ಸಿನಿಮಾ ಮರುಬಿಡುಗಡೆ ಆಗಿದ್ದರೆ, ಅತ್ತ ಅಜಿತ್ ತಮ್ಮ ಬಹು ಸಮಯವನ್ನು ಬೈಕ್ ರೇಸಿಂಗ್ನಲ್ಲೇ ಕಳೆಯುತ್ತಿದ್ದಾರೆ. ಎರಡು ವರ್ಷಕ್ಕೊಮ್ಮೆ ಒಂದು ಚಿತ್ರವನ್ನು ಅಭಿಮಾನಿಗಳಿಗೆ ಅರ್ಪಿಸುತ್ತಿರುವ ತಲಾ, ಈ ಹಿಂದೆ ವರ್ಷಕ್ಕೊಮ್ಮೆ ಒಂದು ಸಿನಿಮಾ ಮಾಡುತ್ತಿದ್ದರು. ಆದರೀಗ, ಆ ಪ್ರವೃತ್ತಿ ಮರೆಯಾಗುತ್ತಿದೆ. ಇದು ಅವರ ಅಭಿಮಾನಿಗಳಲ್ಲಿ ಒಂದು ರೀತಿ ಬೇಸರ ಮೂಡಿಸಿದ್ದೇ ಆದರೂ ನಟನನ್ನು ಕಣ್ತುಂಬಿಕೊಳ್ಳುವುದು, ಸಂಭ್ರಮಿಸುವುದೇ ಅವರಿಗೆ ದೊಡ್ಡದು.
ಅಜಿತ್ ಕೊನೆಯದಾಗಿ ಕಾಣಿಸಿಕೊಂಡಿದ್ದು, 'ಗುಡ್ ಬ್ಯಾಡ್ ಅಗ್ಲಿ' ಚಿತ್ರದ ಮೂಲಕ. ಇದು ಹಿಟ್ ಗಳಿಸಿ, ಬಾಕ್ಸ್ ಆಫೀಸ್ನಲ್ಲಿ 200 ಕೋಟಿ ರೂ. ಗಳಿಕೆಯನ್ನು ದಾಟಿತು. ನವೆಂಬರ್‌ನಲ್ಲಿ ಆರಂಭವಾದ ತಮ್ಮ ಮುಂದಿನ ಚಿತ್ರವನ್ನು 2026ರ ಬೇಸಿಗೆಗೆ ಬಿಡುಗಡೆ ಮಾಡುವುದಾಗಿ ಸಂದರ್ಶನವೊಂದರಲ್ಲಿ ಹೇಳಿದ್ದ ಅಜಿತ್, ಸದ್ಯ ಚಿತ್ರೀಕರಣದ ಸೆಟ್ಗೆ ಹಾಜರಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ರೇಸಿಂಗ್ ಸೀಸನ್‌ನಲ್ಲಿ ಸಖತ್ ಬಿಜಿಯಾಗಿರುವ ಅಜಿತ್, ಸಿನಿಮಾದಿಂದ ಸದ್ಯ ದೂರ ಉಳಿಯುವುದಾಗಿ ಹೇಳಿದ್ದಾರೆ. ಅದು ರೇಸಿಂಗ್ ಸಮಯದಲ್ಲಿ ಹೌದು. ಇದೇ ಕಾರಣಗಳಿಂದ ಅವರ ಮುಂಬರುವ ಸಿನಿಮಾಗಳ ಕೆಲಸ ವಿಳಂಬವಾಗುತ್ತಿದೆ. ರೇಸಿಂಗ್ ಸೀಸನ್‌ನಲ್ಲಿ ಸಿನಿಮಾ ಕೆಲಸಗಳಿಂದ ದೂರ ಸರಿಯುವುದಾಗಿ ಹೇಳಿದ್ದರಿಂದ, ಸಮಯಕ್ಕೆ ಸರಿಯಾಗಿ ಸಿನಿಮಾಗಳನ್ನು ಪೂರ್ಣಗೊಳಿಸುವುದು ಕಷ್ಟವಾಗುತ್ತಿದೆ ಎಂದು ಹೇಳಲಾಗಿದೆ,(ಏಜೆನ್ಸೀಸ್).