- 10 ವರ್ಷಗಳ ಹಿಂದೆ ಫೇಸ್ಬುಕ್ನಿಂದ ದೂರವಾಗಿದ್ದ ವಿಜಯ್ ಸೇತುಪತಿ
- 'ಸೇತುಪತಿ' ಚಿತ್ರದ ರಿಲೀಸ್ ವೇಳೆ ಕಾರಣ ತಿಳಿಸಿದ್ದ ನಟ
Vijay Sethupathi: ಭಾರತೀಯ ಚಿತ್ರರಂಗದಲ್ಲಿ ತನ್ನದೇ ವಿಶೇಷ ಅಭಿಮಾನಿಗಳ ಬಳಗವನ್ನು ಹೊಂದಿರುವ ನಟ ವಿಜಯ್ ಸೇತುಪತಿ, ಸಿನಿಪ್ರೇಕ್ಷಕರು ಅತಿಯಾಗಿ ಇಷ್ಟಪಡುವ ಸ್ಟಾರ್ ನಟರಲ್ಲಿ ಒಬ್ಬರು. ಯಾವುದೇ ಕಥಾಹಂದರವಿರಲಿ, ಎಂತಹ ಪಾತ್ರವಿರಲಿ, ಕೊಟ್ಟ ಪಾತ್ರಕ್ಕೆ ಜೀವ ತುಂಬುವ ಕೆಲಸ ಮಾಡುವ ಸೇತುಪತಿ, ತಮ್ಮ ಅದ್ಭುತ ನಟನೆಯಿಂದ ಪ್ರತಿಬಾರಿ ನೋಡುಗರ ಮನಗೆಲ್ಲುತ್ತಾರೆ.
ಸರಳ ಅಭಿನಯ, ಪಾತ್ರ ಹಾಗೂ ಕಥೆಯ ಆಯ್ಕೆಯಲ್ಲೇ ಮೊದಲ ಗೆಲುವು ನೋಡುವ ವಿಜಯ್, ಸಿನಿಮಾ ರಿಲೀಸ್ ಆದ ನಂತರ ಅಭಿಮಾನಿಗಳ ಖುಷಿ, ಪ್ರಶಂಸೆಗಳನ್ನು ಪಡೆಯುವ ಮುಖೇನ ದೊಡ್ಡ ಗೆಲುವನ್ನು ಸಾಧಿಸುತ್ತಾರೆ. ಈ ವಿಷಯದಲ್ಲಿ ಅವರು ಸದಾ ಮುಂಚೂಣಿ. ಒಂದು ಸಮಯದಲ್ಲಿ ವಿಜಯ್, ತಮ್ಮ ಫೇಸ್ಬುಕ್ ಖಾತೆಯನ್ನು ಡಿಲೀಟ್ ಮಾಡಿದ್ದರು. ಅದಕ್ಕೆ ಕಾರಣವೇನು ಎಂಬುದನ್ನೂ ಚಿತ್ರದ ಸಂದರ್ಶನದ ವೇಳೆ ಹಂಚಿಕೊಂಡಿದ್ದರು. ಅಷ್ಟಕ್ಕೂ ಏನದು ಸಂಗತಿ? ಎಂಬುದರ ವಿವರ ಹೀಗಿದೆ ನೋಡಿ.
10 ವರ್ಷಗಳ ಹಿಂದೆ
ಇಂದು (ಜ.16) 48ನೇ ವಸಂತಕ್ಕೆ ಕಾಲಿಟ್ಟ ವಿಜಯ್ ಸೇತುಪತಿ, ಈಗ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಆದರೆ, ಅದೇ ಒಂದು ಕಾಲದಲ್ಲಿ ಸಾಮಾಜಿಕ ಜಾಲತಾಣದಿಂದ ದೂರ ಸರಿದಿದ್ದ ವಿಜಯ್, ತಮ್ಮ ಫೇಸ್ಬುಕ್ ಖಾತೆಯನ್ನು ಡಿಲೀಟ್ ಮಾಡಿದ್ದರು. ಈ ಕುರಿತು 10 ವರ್ಷಗಳ ಹಿಂದೆ 'ಸೇತುಪತಿ' ಚಿತ್ರದ ರಿಲೀಸ್ ವೇಳೆ ಸುದ್ದಿ ಪತ್ರಿಕೆಯೊಂದರ ಸಂದರ್ಶನದಲ್ಲಿ ಮಾತನಾಡಿದ್ದ ಅವರು, ಕೊಂಚ ಸಮಯದವರೆಗೆ ನಾನು ಫೇಸ್ಬುಕ್ನಲ್ಲಿ ಆಕ್ಟೀವ್ ಆಗಿದ್ದೆ ಎಂದಿದ್ದಾರೆ.
ಸೇತುಪತಿ ಮಾತು...
"ಈ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ನಲ್ಲಿ ಅಭಿಮಾನಿಗಳು ಮತ್ತು ಚಿತ್ರಪ್ರೇಮಿಗಳು ಕಳುಹಿಸುತ್ತಿದ್ದ ಕಮೆಂಟ್ಗಳಿಗೆ ಧನ್ಯವಾದ ತಿಳಿಸುತ್ತಿದ್ದೆ. ಆದರೆ, ಅದೇ ಫೇಸ್ಬುಕ್ ಫೀಡ್ಗಳು ಎಲ್ಲೋ ನನ್ನ ಭಾವನೆಗಳನ್ನು ಕಟ್ಟಿಹಾಕುತ್ತಿವೆ ಎಂದು ಅನಿಸಿತು. ಸಾಕಷ್ಟು ದುರಂತ ಸುದ್ದಿಗಳನ್ನು ನೋಡುತ್ತಿದ್ದೆ. ಕೆಲವೊಂದಕ್ಕೆ ನಾನು ಪ್ರತಿಕ್ರಿಯಿಸುವ ಮೊದಲೇ, ಅದರ ಕೆಳಗೊಂದು ಹಾಸ್ಯಮಯ ಮೀಮ್ಗಳು ಬಂದಿರುತ್ತಿತ್ತು. ಇವುಗಳು ನನ್ನನ್ನು ಇನ್ನಷ್ಟು ಗೊಂದಲಕ್ಕೆ ಸಿಲುಕಿಸುತ್ತಿತ್ತು. ಒಮ್ಮೊಮ್ಮೆ ನಾನು ಅಳಬೇಕೋ ಅಥವಾ ನಗಬೇಕೋ ಅನ್ನೋದೇ ತಿಳಿಯುತ್ತಿರಲಿಲ್ಲ. ಹೀಗಾಗಿ ನನ್ನ ಫೇಸ್ಬುಕ್ ಖಾತೆಯನ್ನು ಡಿಲೀಟ್ ಮಾಡಿದೆ" ಎಂದು ವಿಜಯ್ ಹೇಳಿಕೊಂಡಿದ್ದರು.
ಪ್ರಸ್ತುತ, ತಮಿಳಿನ ಬಿಗ್ ಬಾಸ್ ಸೀಸನ್ 9ರ ನಿರೂಪಕರಾಗಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಕಳೆದ ವರ್ಷ ವಿಜಯ್ ಅಭಿನಯದ ಏಸ್ ಮತ್ತು ತಲೈವನ್ ತಲೈವಿ ಎಂಬ ಎರಡು ತಮಿಳು ಚಿತ್ರಗಳು ತೆರೆಕಂಡು, ಸಿನಿಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳನ್ನು ಸ್ವೀಕರಿಸಿತು. ಈ ಮಧ್ಯೆ, ತಮ್ಮ ಮುಂದಿನ 'ಗಾಂಧಿ ಟಾಕ್ಸ್' ಚಿತ್ರದ ರಿಲೀಸ್ಗೆ ಸಜ್ಜಾಗುತ್ತಿದ್ದಾರೆ,(ಏಜೆನ್ಸೀಸ್).