ಲೋಕೇಶ್ ಕನಗರಾಜ್ ನಿರ್ದೇಶನದ ಹಾಗೂ ರಜಿನಿಕಾಂತ್ ನಟನೆಯಲ್ಲಿ ಮೂಡಿಬರುತ್ತಿರುವ ತಮಿಳಿನ ‘ಕೂಲಿ’ ಚಿತ್ರ ನಾಳೆ ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ. ದಕ್ಷಿಣ ಹಾಗೂ ಉತ್ತರ ಭಾರತದ ದೊಡ್ಡ ಕಲಾವಿದರು ಈ ಚಿತ್ರದಲ್ಲಿ ಇರುವುದು ವಿಶೇಷ. ಇನ್ನು ಸ್ಯಾಂಡಲ್‌ವುಡ್‌ನ ಉಪೇಂದ್ರ ಮತ್ತು ರಚಿತಾ ರಾಮ್ ಕೂಡ ‘ಕೂಲಿ’ಯಲ್ಲಿ ಅಭಿನಯಿಸಿದ್ದಾರೆ. ಇತ್ತೀಚೆಗೆ ಚೆನ್ನೈನಲ್ಲಿ ಚಿತ್ರದ ಪ್ರಿ-ರಿಲೀಸ್ ಇವೆಂಟ್ ನಡೆದಿದ್ದು, ಅಲ್ಲಿ ಎಲ್ಲ ಕಲಾವಿದರ ಸಂಗಮವಾಗಿದೆ. ಚಿತ್ರತಂಡದ ಬಗ್ಗೆ ಮಾತನಾಡುತ್ತಾ ರಜಿನಿಕಾಂತ್ ವಿಶೇಷವಾಗಿ ಉಪೇಂದ್ರ ಕುರಿತು ಮೆಚ್ಚುಗೆ ಮಾತಗಳನ್ನಾಡಿದ್ದು, ‘ಭಾರತದ ಎಲ್ಲ ಭಾಷೆಯ ನಿರ್ದೇಶಕರಿಗೆ ಉಪೇಂದ್ರ ಸ್ಫೂರ್ತಿ ಮತ್ತು ಮಾದರಿ. ಹಿಂದಿ, ತೆಲುಗು, ತಮಿಳು, ಮಲಯಾಳಂ ಎಲ್ಲ ಭಾಷೆಯ ನಿರ್ದೇಶಕರು ಉಪೇಂದ್ರ ಕೆಲಸದ ಬಗ್ಗೆ ಮಾತನಾಡುತ್ತಾರೆ. ಉಪೇಂದ್ರಗೆ ನಟನೆಗಿಂತ ನಿರ್ದೇಶನದಲ್ಲಿಯೇ ಹೆಚ್ಚು ಆಸಕ್ತಿ. ಅವರ ನಿರ್ದೇಶನದ ‘ಓಂ’ ಸಿನಿಮಾ ನನ್ನ ‘ಬಾಷಾ’ ಚಿತ್ರದ ಹತ್ತು ಪಟ್ಟು ಹೆಚ್ಚು. ಈಗ ಲೋಕೇಶ್ ಕನಗರಾಜ್ ಹೇಳುವ ನಾನ್-ಲೀನಿಯರ್ ಎಂಬ ಪರಿಕಲ್ಪನೆಯನ್ನು ಅವರು ಆ ಕಾಲದಲ್ಲೇ ಹೇಳಿದ್ದರು’ ಎಂದು ಉಪೇಂದ್ರ ಕೌಶಲ್ಯವನ್ನು ತಲೈವಾ ಕೊಂಡಾಡಿದ್ದಾರೆ. -ಏಜೆನ್ಸೀಸ್
ನಟ ಉಪೇಂದ್ರ ಕೂಡ ರಜಿನಿಕಾಂತ್ ಜತೆಗಿನ ಸಂಬಂಧವನ್ನು ಸ್ಮರಿಸಿ, ಅವರನ್ನು ದ್ರೋಣಾಚಾರ್ಯರಿಗೆ ಹೋಲಿಕೆ ಮಾಡಿದ್ದಾರೆ. ‘ಕಳೆದ 25 ವರ್ಷಗಳಿಂದ ನನ್ನ ಹಾಗೂ ರಜಿನಿ ಸರ್‌ದು ದ್ರೋಣಾಚಾರ್ಯ ಮತ್ತು ಏಕಲವ್ಯ ಸಂಬಂಧವಿದ್ದಂತೆ. ಏಕಲವ್ಯ ಗುರುಗಳನ್ನು ಹೇಗೆ ಅನುಸರಿಸಿದನೋ ಹಾಗೆಯೇ ನಾನು ಕೂಡ ದೂರದಿಂದಲೇ ರಜಿನಿ ಅವರನ್ನು ಅನುಸರಿಸುತ್ತೇನೆ. ಆ ಗುರು ದ್ರೋಣರು ಶಿಷ್ಯನ ಹೆಬ್ಬೆರಳು ಕೇಳಿದರೆ, ರಜಿನಿ ಅವರು ನನ್ನ ಕೈಬೆರಳು ಹಿಡಿದು, ‘ಕೂಲಿ’ ಪ್ರಪಂಚಕ್ಕೆ ಕರೆತಂದರು’ ಎಂದಿದ್ದಾರೆ.
ಸಿಂಗಾಪುರದ ಎರಡು ಕಂಪನಿಗಳು ‘ಕೂಲಿ’ ವೀಕ್ಷಿಸಲು ತಮಿಳು ನೌಕರರಿಗೆ ರಜೆ ನೀಡಿವೆ. ಸಿಂಗಾಪುರದ ಫಾರ್ಮರ್ ಕನ್‌ಸ್ಟ್ರಕ್ಷನ್ ಕಂಪನಿ ನಾಳೆ ರಜಿನಿಕಾಂತ್ ಸಿನಿಮಾ ನೋಡಲು ತಮಿಳು ನೌಕರರಿಗೆ ರಜೆ ನೀಡಿದೆ. ಹಾಗೇ ಟಿಕೆಟ್ ಮೊತ್ತವನ್ನು ಭರಿಸುವ ಜತೆಗೆ ಖರ್ಚಿಗೆ 30 ಡಾಲರ್ ಹಣ ನೀಡಲು ಮುಂದಾಗಿದೆ. ಹಾಗೆಯೇ ಎಸ್‌ಬಿ ಮಾರ್ಟ್ ಎಂಬ ಕಂಪನಿ ತನ್ನ ನೌಕರರು ‘ಕೂಲಿ’ ನೋಡಲೆಂದೇ, ಬೆಳಗ್ಗೆ 7ರಿಂದ 11.30ರವರೆಗೆ ಕಚೇರಿ ಬಂದ್ ಮಾಡುವುದಾಗಿ ಪ್ರಕಟಣೆ ಹೊರಡಿಸಿದೆ.