ಸಿನಿವಾಣಿ

ಇಂಡಿಯನ್ 2 ಚಿತ್ರದಿಂದ ಕೊಕ್; ಇನ್ನೊಂದು ಸಿನಿಮಾ ಕಳೆದುಕೊಂಡ ಕಾಜಲ್

ಕಾಜಲ್ ಅಗರ್​ವಾಲ್ ಗರ್ಭಿಣಿಯಾಗಿದ್ದಾರೆ, ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿಯೊಂದು ಎರಡ್ಮೂರು ತಿಂಗಳನಿಂದ ಟಾಲಿವುಡ್​ನಲ್ಲಿ ಕೇಳಿಬರುತ್ತಿದೆ. ಇದು ನಿಜವೋ, ಸುಳ್ಳೋ ಎಂದು ಕಾಜಲ್ ಎಲ್ಲೂ ಹೇಳಿಕೊಂಡಿಲ್ಲ. ಆದರೂ ಕೆಲವು ತಿಂಗಳುಗಳಿಂದ ಕಾಜಲ್ ಬಹಿರಂಗವಾಗಿ ಎಲ್ಲೂ ಕಾಣಿಸಿಕೊಳ್ಳದಿರುವುದರಿಂದ, ಅದು ನಿಜ ಎಂದೇ ನಂಬಲಾಗಿದೆ. ಈಗಾಗಲೇ ಅವರು ಗರ್ಭಿಣಿ ಎಂಬ ಕಾರಣಕ್ಕೆ, ನಾಗಾರ್ಜುನ ಅಭಿನಯದ ‘ದಿ ಘೋಸ್ಟ್’ ಚಿತ್ರದಿಂದ ಹೊರಬರಬೇಕಾಯಿತು. ತಮ್ಮ ಪಾತ್ರವನ್ನು ಅಮಲಾ ಪಾಲ್​ಗೆ ಬಿಟ್ಟುಕೊಡಬೇಕಾಯಿತು. ಈಗ ಇನ್ನೊಂದು ಚಿತ್ರದಿಂದಲೂ ಕಾಜಲ್​ಗೆ ಕೊಕ್ ನೀಡಲಾಗಿದೆ ಎಂಬ ಸುದ್ದಿ ಇದೆ.

ಎರಡು ವರ್ಷಗಳ ಹಿಂದೆ ಕಮಲ್ ಹಾಸನ್ ಅಭಿನಯದ ‘ಇಂಡಿಯನ್ 2’ ಪ್ರಾರಂಭವಾಗಿತ್ತು. ಶಂಕರ್ ನಿರ್ದೇಶನದ ಈ ಚಿತ್ರದಲ್ಲಿ ಕಾಜಲ್ ಅಗರ್​ವಾಲ್ ನಾಯಕಿಯಾಗಿ ಆಯ್ಕೆಯಾಗಿದ್ದರು. ಅಷ್ಟೇ ಅಲ್ಲ, ಒಂದಿಷ್ಟು ದಿನಗಳ ಕಾಲ ಚಿತ್ರೀಕರಣದಲ್ಲೂ ಭಾಗವಹಿಸಿದ್ದರಂತೆ. ಆದರೆ, ಆ ನಂತರ ಕರೊನಾ ಎದುರಾಯಿತು. ಅದು ಮುಗಿದರೂ ನಿರ್ವಪಕರು ಮತ್ತು ನಿರ್ದೇಶಕರ ವ್ಯಾಜ್ಯದಿಂದಾಗಿ ಚಿತ್ರ ನಿಂತುಹೋಗಿತ್ತು. ಈಗ ಆ ಸಮಸ್ಯೆ ಬಗೆಹರಿದಿದ್ದು, ಡಿಸೆಂಬರ್​ನಲ್ಲಿ ಚಿತ್ರೀಕರಣ ಪುನಃ ಪ್ರಾರಂಭವಾಗಲಿದೆೆ.

ಆದರೆ, ಕಾಜಲ್ ಗರ್ಭಿಣಿಯಾಗಿರುವುದರಿಂದ, ಅವರನ್ನು ಚಿತ್ರತಂಡದಿಂದ ಕೈಬಿಡಲಾಗಿದೆಯಂತೆ. ಈಗಾಗಲೇ ಚಿತ್ರತಂಡದವರು ಪರ್ಯಾಯ ನಾಯಕಿಗಾಗಿ ಹುಡುಕಾಟ ಶುರು ಮಾಡಿದ್ದು, ಚಿತ್ರೀಕರಣ ಪ್ರಾರಂಭವಾಗುವ ಹೊತ್ತಿಗೆ ಕಾಜಲ್ ಬದಲು ಇನ್ನೊಬ್ಬ ನಾಯಕಿ ಚಿತ್ರತಂಡಕ್ಕೆ ಸೇರ್ಪಡೆಯಾಗಲಿದ್ದಾರಂತೆ. ಕಾಜಲ್ ಬದಲು ಯಾರು ಸೇರ್ಪಡೆಯಾಗುತ್ತಾರೆ. ಈ ಕುತೂಹಲ ಎಲ್ಲರಿಗೂ ಇದ್ದು, ಸದ್ಯದಲ್ಲೇ ಪ್ರಶ್ನೆಗೆ ಉತ್ತರ ಸಿಗಲಿದೆ. (ಏಜೆನ್ಸೀಸ್)