ಹೈದರಾಬಾದ್: ಅಂತೂ ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ 'ಆರ್‌ಆರ್‌ಆರ್' ಚಿತ್ರದ ಕ್ಲೈಮ್ಯಾಕ್ಸ್ ಹಂತದ ಚಿತ್ರೀಕರಣ ಶುರುವಾಗಿದೆ. ಈ ಕ್ಲೈಮ್ಯಾಕ್ಸ್ನಲ್ಲಿ ಭೀಮ್ ಮತ್ತು ರಾಮರಾಜು ಪಾತ್ರಗಳು ಬ್ರಿಟಿಷರ ವಿರುದ್ಧ ದಂಡೆತ್ತಿ ಹೋಗಲಿದ್ದು, ಮುಂದೇನಾಗುತ್ತದೆ ಎಂಬುದನ್ನು ಚಿತ್ರದಲ್ಲೇ ನೋಡಬೇಕಿದೆ.
ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮರಾಜು ಮತ್ತು ಕೊಮರಂ ಭೀಮ್ ಇಬ್ಬರೂ ಬ್ರಿಟಿಷರ ವಿರುದ್ಧ ಹೋರಾಡುವ ಕಥೆ ಇರುವ ಚಿತ್ರ 'ಆರ್‌ಆರ್‌ಆರ್'. ಈ ಚಿತ್ರದ ಚಿತ್ರೀಕರಣ ಕೊನೆಯ ಹಂತಕ್ಕೆ ಬಂದಿದ್ದು, ಕ್ಲೈಮ್ಯಾಕ್ಸ್ ಚಿತ್ರೀಕರಣ ಶುರುವಾಗಿದೆ ಎಂದು ರಾಜಮೌಳಿ ಟ್ವೀಟ್ ಮಾಡಿದ್ದಾರೆ.
ಈ ಕ್ಲೈಮ್ಯಾಕ್ಸ್ನಲ್ಲಿ ಭೀಮ್ ಮತ್ತು ರಾಮರಾಜು ಇಬ್ಬರೂ ಮಹತ್ತರವಾದದ್ದೇನನ್ನೋ ಸಾಧಿಸುವ ನಿಟ್ಟಿನಲ್ಲಿ ಕೈಜೋಡಿಸುತ್ತಾರೆ ಎಂದು ರಾಜಮೌಳಿ ಹೇಳಿದ್ದಾರೆ. ಆದರೆ, ಏನು ಸಾಧಿಸುತ್ತಾರೆ ಎಂಬ ವಿಷಯವನ್ನು ಚಿತ್ರಮಂದಿಗಳಲ್ಲೇ ನೋಡಿ ಎಂದು ಹೇಳಿದ್ದಾರೆ.
'ಆರ್‌ಆರ್‌ಆರ್' ಚಿತ್ರದಲ್ಲಿ ಜ್ಯೂನಿಯರ್ ಎನ್ಟಿಆರ್, ರಾಮ್ಚರಣ್ ತೇಜ, ಆಲಿಯಾ ಭಟ್, ಅಜಯ್ ದೇವಗನ್, ಶ್ರೇಯಾ ಶರಣ್ ಮುಂತಾದವರು ನಟಿಸುತ್ತಿದ್ದು, ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಕಥೆ ರಚಿಸಿದ್ದಾರೆ.
ಈಗಾಗಲೇ ಹೈದರಾಬಾದ್ನಲ್ಲಿ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಈ ವರ್ಷದ ಕೊನೆಯಲ್ಲಿ ಚಿತ್ರೀಕರಣ ಮುಕ್ತಾಯವಾಗಿ, 2021ರ ಜುಲೈನಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.