ಸಿನಿವಾಣಿ

ಕರೊನಾ ಎರಡನೇ ಅಲೆ ಆತಂಕ, ಗೊಂದಲದಲ್ಲಿ ಕನ್ನಡ ಚಿತ್ರರಂಗ...

ಬೆಂಗಳೂರು: ಕನ್ನಡ ಚಿತ್ರರಂಗ ನಿಟ್ಟುಸಿರು ಬಿಟ್ಟಿದೆ. ಕರ್ನಾಟಕದಲ್ಲಿ ಕರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಂತೆಯೇ, ಸರ್ಕಾರ ಎಲ್ಲಿ ಲಾಕ್​ಡೌನ್ ಘೋಷಿಸುತ್ತದೋ ಅಥವಾ ಶೇ.50ರಷ್ಟು ಹಾಜರಾತಿಗೆ ಆದೇಶ ನೀಡುತ್ತದೋ ಎಂಬ ಭಯ ಚಿತ್ರರಂಗದಲ್ಲಿತ್ತು. ಸೋಮವಾರ ಸಂಜೆಯ ಸಭೆಯಲ್ಲಿ ಯಾವ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೋ ಎಂಬ ಆತಂಕ ಇದ್ದೇ ಇತ್ತು. ಆದರೆ, ಸರ್ಕಾರವು ಲಾಕ್​ಡೌನ್ ಆಗಲೀ, ಶೇ. 50ರಷ್ಟು ಹಾಜರಾತಿಯಾಗಲೀ ಘೋಷಿಸಿಲ್ಲ. ಸದ್ಯದ ಮಟ್ಟಿಗೆ ಚಿತ್ರರಂಗದ ವತಿಯಿಂದ ಯಾವುದೇ ಸಾರ್ವಜನಿಕ ಸಮಾರಂಭಗಳನ್ನು ಮಾಡುವಂತಿಲ್ಲ ಎಂದು ಆದೇಶಿಸಿದೆ. ಸರ್ಕಾರದ ಈ ಆದೇಶಕ್ಕೆ ಚಿತ್ರರಂಗವು ನಿಟ್ಟುಸಿರುಬಿಟ್ಟಿದೆಯಾದರೂ, ಒಳಗೊಳಗೇ ಆತಂಕ ಕಾಡುತ್ತಿದೆ. ಏಕೆಂದರೆ, ಚಿತ್ರರಂಗ ಈಗಷ್ಟೇ ಚೇತರಿಸಿಕೊಳ್ಳುತ್ತಿದೆ. ‘ಪೊಗರು’, ‘ರಾಬರ್ಟ್’ ಚಿತ್ರಗಳಿಂದ ಜನ ಕ್ರಮೇಣ ಚಿತ್ರಮಂದಿರಕ್ಕೆ ದೊಡ್ಡ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ‘ಸಲಗ’, ‘ಕೋಟಿಗೊಬ್ಬ 3’, ‘ಭಜರಂಗಿ 2’ ಸೇರಿದಂತೆ ಹಲವು ಬಿಗ್ ಬಜೆಟ್ ಚಿತ್ರಗಳು ಬಿಡುಗಡೆಯಾಗುತ್ತಿವೆ. ಈಗಾಗಲೇ ಈ ಚಿತ್ರಗಳ ಬಿಡುಗಡೆ ದಿನಾಂಕಗಳು ಘೋಷಣೆಯಾಗಿವೆ. ಹೀಗಿರುವಾಗ ಕರೊನಾ ಎರಡನೆ ಅಲೆ ತಹಬದಿಗೆ ಬರದಿದ್ದರೆ ಗತಿಯೇನು ಗತಿ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ಇಂತಹ ಸಂದರ್ಭದಲ್ಲಿ ಚಿತ್ರಗಳನ್ನು ಬಿಡುಗಡೆ ಮಾಡಿ ರಿಸ್ಕ್ ತೆಗೆದುಕೊಳ್ಳಬೇಕಾ ಎಂಬ ಭಯ ಹಲವರಲ್ಲಿದೆ. ಹಾಗಂತ ಯಾರೂ ಚಿತ್ರದ ಬಿಡುಗಡೆಯನ್ನು ಮುಂದೂಡುವುದಾಗಲೀ ಅಥವಾ ಈಗ ಘೋಷಣೆಯಾಗಿರುವ ದಿನಾಂಕವನ್ನು ರದ್ದು ಮಾಡುವುದಾಗಲೀ ಮಾಡಿಲ್ಲ. ಆದರೆ, ಎಲ್ಲರಲ್ಲೂ ಮುಂದೇನು ಎಂಬ ಸಣ್ಣ ಭಯವಂತೂ ಇದ್ದೇ ಇದೆ. ಅದೇ ಕಾರಣಕ್ಕೆ ಎಲ್ಲರೂ ಸದ್ಯಕ್ಕೆ ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿದ್ದಾರೆ. ಇನ್ನೂ ಸಮಯವಿರುವುದರಿಂದ, ಪರಿಸ್ಥಿತಿಯನ್ನು ಅವಲೋಕಿಸಿ, ಆ ನಂತರ ಚಿತ್ರವನ್ನು ಬಿಡುಗಡೆ ಮಾಡಬೇಕೋ ಅಥವಾ ತಾತ್ಕಲಿಕವಾಗಿ ಮುಂದೂಡಬೇಕೋ ಎಂಬ ತೀರ್ವನವನ್ನು ತೆಗೆದುಕೊಳ್ಳುವ ಚಿಂತನೆಯಲ್ಲಿದ್ದಾರೆ.

ಪ್ರೀ-ಇವೆಂಟ್​ಗಳಿಗೆ ಗ್ರಹಣ: ಮುಂದಿನ ಎರಡು ವಾರಗಳ ಕಾಲ ಜನ ದೊಡ್ಡ ಮಟ್ಟದಲ್ಲಿ ಸೇರುವಂತಹ ರ್ಯಾಲಿ, ಪ್ರತಿಭಟನೆ, ಧಾರ್ವಿುಕ ಕಾರ್ಯಕ್ರಮ ... ಸೇರಿ ಯಾವ ಕಾರ್ಯಕ್ರಮವನ್ನೂ ಆಯೋಜಿಸುವಂತಿಲ್ಲ ಎಂಬ ಆದೇಶವನ್ನು ಸೋಮವಾರದ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಈಗಾಗಲೇ ‘ರಾಬರ್ಟ್’ ಚಿತ್ರದ ವಿಜಯ ಯಾತ್ರೆ ರದ್ದಾಗಿದೆ. ಮುಂದಿನ ದಿನಗಳಲ್ಲಿ ‘ಸಲಗ’ ಮತ್ತು ‘ಕೋಟಿಗೊಬ್ಬ 3’ ಚಿತ್ರಗಳ ಪ್ರೀ-ಇವೆಂಟ್​ಗಳು ಹೊಸಪೇಟೆ ಮತ್ತು ಚಿತ್ರದುರ್ಗದಲ್ಲಿ ನಡೆಯಬೇಕಿದ್ದು, ಈಗ ಜನ ದೊಡ್ಡ ಮಟ್ಟದಲ್ಲಿ ಸೇರಬಾರದು ಎಂದು ಸರ್ಕಾರ ಆದೇಶಿಸಿರುವುದರಿಂದ, ಈ ಕಾರ್ಯಕ್ರಮಗಳು ನಡೆಯುವುದು ಸಂಶಯ ಎನ್ನಲಾಗುತ್ತಿದೆ.