ಸಿನಿವಾಣಿ

ಇಂದಿನಿಂದ ಉದ್ಯಾನನಗರಿಯಲ್ಲಿ ಸಿನಿಮೋತ್ಸವ

ಬೆಂಗಳೂರು: ಬಹು ನಿರೀಕ್ಷಿತ ‘12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ ಫೆ. 26ರ ಸಂಜೆ 6ಕ್ಕೆ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ ಉದ್ಘಾಟನೆಗೊಳ್ಳಲಿದೆ. ಉದ್ಘಾಟನಾ ದಿನ ಪರ್ಷಿಯನ್ ಭಾಷೆಯ ಚಿತ್ರ ‘ಸಿನಿಮಾ ಖಾರ್(ಸಿನಿಮಾ ಡಾಂಕಿ)’ ಪ್ರದರ್ಶನಗೊಳ್ಳಲಿದೆ.

ಮಾ. 4ರವರೆಗೂ ನಡೆಯುವ ಈ ಚಿತ್ರೋತ್ಸವ ‘ಭಾರತೀಯ ಸಾಂಪ್ರದಾಯಿಕ ಸಂಗೀತ ಪರಂಪರೆ ಮತ್ತು ಸಿನಿಮಾ’ ಪರಿಕಲ್ಪನೆಯಡಿ ಆಯೋಜನೆಗೊಂಡಿದೆ. ಹಾಗಾಗಿ ‘ಮಲಯ ಮಾರುತ’ ‘ಸಂಧ್ಯಾರಾಗ’ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಇವುಗಳ ಜತೆಗೆ ದೇಶ-ವಿದೇಶಗಳ 225 ಚಿತ್ರಗಳನ್ನು ಸಿನಿ ಪ್ರೇಕ್ಷಕರು ಕಣ್ತುಂಬಿಕೊಳ್ಳಬಹುದು.

ಆಸ್ಕರ್ ವಿಜೇತ ಚಲನಚಿತ್ರ ‘ಪ್ಯಾರಸೈಟ್’ ಸೇರಿ ಕಾನ್, ಬರ್ಲಿನ್, ವೆನಿಸ್, ಟೊರೆಂಟೋ, ಗೋವಾ, ಮುಂಬೈ ಮತ್ತು ಕೇರಳ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಸಿನಿಮಾಗಳು ಈ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿವೆ.

ಇಂಡಿಯನ್ ಪ್ರೀಮಿಯರ್

ಈ ಸಲದ ಚಿತ್ರೋತ್ಸವದಲ್ಲಿ ಅತ್ಯುತ್ತಮ ಚಲನಚಿತ್ರಗಳು ಪ್ರದರ್ಶನಗೊಳ್ಳಲಿದ್ದು, ಅದರಲ್ಲಿ ಭಾರತೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಳ್ಳದ 40 ಚಿತ್ರಗಳು ಮೊದಲ ಬಾರಿಗೆ ಇಲ್ಲಿ ಪ್ರದರ್ಶನಗೊಳ್ಳಲಿವೆ. ಹಾಗಾಗಿ ಇವನ್ನು ಇಂಡಿಯನ್ ಪ್ರೀಮಿಯರ್ ಎನ್ನಬಹುದು ಎಂದು ಮಾಹಿತಿ ನೀಡಿದರು ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ವಿದ್ಯಾಶಂಕರ್. ಸ್ಕ್ರಿಪ್ಟ್ ಕ್ಲಾಸ್, ಒಟಿಟಿ ಪ್ಲ್ಯಾಟ್​ಫಾಮ್ರ್, ಸ್ಪೆಷಲ್ ಎಫೆಕ್ಟ್ ಬಗ್ಗೆ ಚರ್ಚೆ ಜತೆಗೆ ಇಂಟರ್​ನ್ಯಾಷನಲ್ ಫೆಡರೇಷನ್ ಆಫ್ ಫಿಲಂ ಕ್ರಿಟಿಕ್ಸ್ ವತಿಯಿಂದ ವಿಮರ್ಶೆ ಕುರಿತು ಕೂಡ ಒಂದು ಸೆಷನ್ ಈ ಬಾರಿ ಚಿತ್ರೋತ್ಸವದಲ್ಲಿ ಇರಲಿದೆ.

ಬ್ಯಾಂಕ್ವೆಟ್ ಹಾಲ್​ನಲ್ಲಿ ಸಮಾರೋಪ

ಸಿನಿಮೋತ್ಸವದ ಸಮಾರೋಪ ಸಮಾರಂಭ ಮಾ.4ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ನಡೆಯಲಿದ್ದು, ಮುಕ್ತಾಯದ ಚಿತ್ರವಾಗಿ ಇಸ್ರೇಲ್​ನ ಇವೆಗಿನಿ ರುಮಾನ್ ನಿರ್ದೇಶನದ ‘ಗೋಲ್ಡನ್ ವಾಯ್್ಸ ಚಲನಚಿತ್ರ ಪ್ರದರ್ಶಿಸಲಾಗುವುದು. ಹೆಚ್ಚು ಪ್ರಚಾರವಿಲ್ಲದ ಭಾಷೆಗಳ ಚಿತ್ರಗಳು ಈ ಬಾರಿಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ. ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು ಸೇರಿ ವಿವಿಧ ರಾಜ್ಯಗಳ ಚಿತ್ರೋತ್ಸವ ಸಂಘಟಕರು, ಪತ್ರಕರ್ತರು, ವಿಮರ್ಶಕರು ಮತ್ತು ವಿದೇಶಗಳ ನಿರ್ದೇಶಕರು, ತಂತ್ರಜ್ಞರು ಪಾಲ್ಗೊಳ್ಳಲಿದ್ದಾರೆ.

ಪ್ರದರ್ಶನ ಸ್ಥಳಗಳು

ರಾಜ್​ಕುಮಾರ್ ರಸ್ತೆಯ ಒರಾಯನ್ ಮಾಲ್​ನ ಪಿವಿಆರ್ ಸಿನಿಮಾಸ್​ನಲ್ಲಿರುವ 11 ಪರದೆ, ರಾಜಾಜಿನಗರದ ನವರಂಗ್ ಚಿತ್ರಮಂದಿರ, ಚಾಮರಾಜಪೇಟೆಯ ಚಲನಚಿತ್ರ ಕಲಾವಿದರ ಸಂಘ, ಬನಶಂಕರಿ ಎರಡನೇ ಹಂತದಲ್ಲಿರುವ ಸುಚಿತ್ರ ಫಿಲಂ ಸೊಸೈಟಿಯಲ್ಲಿ ಸಿನಿಮಾಗಳ ಪ್ರದರ್ಶನ ಇರಲಿದೆ.

ಈ ಬಾರಿಯ ಚಿತ್ರೋತ್ಸವಕ್ಕೆ 2019ರಲ್ಲಿ ತಯಾರಾದ ಅತ್ಯುತ್ತಮ ಚಿತ್ರಗಳನ್ನು ಆರಿಸಿದ್ದೇವೆ. ಅದರಲ್ಲಿ ಆಸ್ಕರ್ ಪ್ರಶಸ್ತಿ ಪಡೆದ ‘ಪ್ಯಾರಸೈಟ್’ ಸಿನಿಮಾ ಕೂಡ ಇದೆ. ಸಿನಿಮಾ ಪ್ರೇಮಿಗಳು ಬುಧವಾರದಿಂದ ಜಗತ್ತಿನ ಅತ್ಯುತ್ತಮ ಚಿತ್ರಗಳನ್ನು ಕಣ್ತುಂಬಿಕೊಳ್ಳಬಹುದು. | ವಿದ್ಯಾಶಂಕರ್ ಕಲಾತ್ಮಕ ನಿರ್ದೇಶಕ, ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ

ಉದ್ಘಾಟನಾ ಸಮಾರಂಭದಲ್ಲಿ ಯಾರ್ಯಾರು ಭಾಗಿ?

ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಡಿ.ವಿ. ಸದಾನಂದಗೌಡ, ಉಪಮುಖ್ಯಮಂತ್ರಿಗಳಾದ ಗೋವಿಂದ ಎಂ. ಕಾರಜೋಳ, ಡಾ.ಸಿ.ಎನ್. ಅಶ್ವತ್ಥನಾರಾಯಣ್, ಲಕ್ಷ್ಮಣ ಸವದಿ ಉಪಸ್ಥಿತರಿರಲಿದ್ದಾರೆ. ಚಿತ್ರೋತ್ಸವದ ಸ್ಮರಣ ಸಂಚಿಕೆಯನ್ನು ನಟ ಯಶ್ ಬಿಡುಗಡೆ ಮಾಡಲಿದ್ದಾರೆ. ಸಮಾರಂಭದ ಮುಖ್ಯ ಅತಿಥಿಗಳಾಗಿ ಬಾಲಿವುಡ್ ನಟಿ ಜಯಪ್ರದಾ, ಹಿಂದಿ ನಿರ್ವಪಕ ಬೋನಿ ಕಪೂರ್, ಗಾಯಕ ಸೋನು ನಿಗಮ್ ಇರಲಿದ್ದಾರೆ.

125 ವರ್ಷದ ಆಚರಣೆ

ವಿಶ್ವ ಚಲನಚಿತ್ರ-125 ಕೂಡ ಬೆಂಗಳೂರು ಚಿತ್ರೋತ್ಸವದಲ್ಲಿ ಆಚರಣೆ ಆಗಲಿದೆ. ಅದಕ್ಕಾಗಿ 125 ವರ್ಷಗಳಲ್ಲಿ ವಿಶ್ವಮಟ್ಟದಲ್ಲಿ ಹೆಸರು ಮಾಡಿರುವ ಪ್ರತಿ ದಶಕದ ಒಂದೊಂದು ಚಲನಚಿತ್ರ ಪ್ರದರ್ಶಿಸಲಾಗುತ್ತದೆ.

ನಂದಿನಿ ಲೇಔಟ್​ನಲ್ಲಿರುವ

ಚಲನಚಿತ್ರ ಅಕಾಡೆಮಿ ಕಚೇರಿಯಲ್ಲಿ

ಫೆ. 26ರ ಸಂಜೆಯವರೆಗೆ ಪಾಸ್ ಲಭ್ಯ.

ಹಿರಿಯರಿಗೆ 800 ರೂ., ವಿದ್ಯಾರ್ಥಿಗಳು, ಫಿಲಂ ಸೊಸೈಟಿ ಸದಸ್ಯರು ಮತ್ತು

ವಾಣಿಜ್ಯ ಮಂಡಳಿ ಸದಸ್ಯರಿಗೆ

400 ರೂ. ಶುಲ್ಕ ನಿಗದಿ.

ಹೆಚ್ಚಿನ ಮಾಹಿತಿಗೆ

www.biffes.in ವೀಕ್ಷಿಸಬಹುದು.