ಸಿನಿವಾಣಿ

ರಕ್ಷಿತ್​ ಶೆಟ್ಟಿಗೆ ಕರೆ ಮಾಡಿದ್ದರಂತೆ ತಮಿಳು ನಟ ಚಿಯಾನ್​ ವಿಕ್ರಮ್​ ! ಯಾಕೆ ಗೊತ್ತಾ?

ತಮಿಳು ನಟ ಚಿಯಾನ್​ ವಿಕ್ರಮ್​, ಪಾರ್ವತಿ, ಮಾಳವಿಕಾ ಮೋಹನನ್​ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ, ಪ. ರಂಜಿತ್​ ನಿರ್ದೇಶಿಸಿರುವ ಸಿನಿಮಾ "ತಂಗಲಾನ್​'. ಬ್ರೀಟಿಷರ ಆಳ್ವಿಕೆಯ ಸಮಯದಲ್ಲಿ ಕೋಲಾರದ ಕೆಜಿಎಫ್​​ನಲ್ಲಿ ಚಿನ್ನದ ನಿಕ್ಷೇಪ ಪತ್ತೆ ಹಚ್ಚಲು ಹೋದಾಗ ನಡೆಯುವ ಸಂರ್ಷದ ಸುತ್ತ ಕಥೆ ಸಾಗುತ್ತದೆ. ಇದೇ ತಿಂಗಳ 15ರಂದು ಸಿನಿಮಾ ರಿಲೀಸ್​ ಆಗಲಿದ್ದು, ಚಿತ್ರತಂಡ ಇತ್ತೀಚೆಗಷ್ಟೆ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿತ್ತು. ಆಗ ನಾಯಕ ಚಿಯಾನ್​ ವಿಕ್ರಮ್​, "ರಾತ್ರಿ 10 ಗಂಟೆಗೆ ನಾನು "ಸಪ್ತಸಾಗರದಾಚೆ ಎಲ್ಲೋ ಸೈಡ್​ ಎ' ನೋಡಲು ಪ್ರಾರಂಭಿಸಿದೆ. ಆದರೆ, ಚಿತ್ರ ಮುಗಿದ ಬಳಿಕ ಮಧ್ಯರಾತ್ರಿ ಹೋಗಲು ಮಲಗಲು ಆಗಲಿಲ್ಲ. ಮುಂದೆ ಏನಾಗುತ್ತೆ ಅಂತ ಕಥೆ ಕಾಡತೊಡಗಿತು. ಹೀಗಾಗಿ ಮತ್ತೆ ಬಂದು ಕುಳಿತು "ಸೈಡ್​ ಬಿ' ನೋಡಿ ಮುಗಿಸಿದೆ. ಮಾರನೇ ದಿನ ರಕ್ಷಿತ್​ ಶೆಟ್ಟಿಗೆ ಕರೆ ಮಾಡಿ ಅಭಿನಂದಿಸಿದೆ' ಎಂದರು.

ಕನ್ನಡ ಚಿತ್ರಗಳಿಂದ ಮಾರುಕಟ್ಟೆ ವಿಸ್ತಾರ
ಇದೇ ಸಮಯದಲ್ಲಿ ಕನ್ನಡ ಚಿತ್ರರಂಗವನ್ನು ಹಾಡಿ ಹೊಗಳಿದ ವಿಕ್ರಮ್​, ""ಬಾಹುಬಲಿ' ದಣ ಭಾರತದ ಚಿತ್ರರಂಗವನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಪರಿಚಯಿಸಿತು. ಆ ಬಳಿಕ ಕನ್ನಡದ "ಕೆಜಿಎಫ್​​' ಇನ್ನೂ ದೊಡ್ಡ ಮಟ್ಟದಲ್ಲಿ ವಿಸ್ತರಿಸಿತು. ಇನ್ನು "ಕಾಂತಾರ' ಕಡಿಮೆ ಬಜೆಟ್​ನ ಕಂಟೆಂಟ್​ ಸಿನಿಮಾ ಕೂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೆಲ್ಲಬಹುದು ಅಂತ ತೋರಿಸಿತು. ಮಂಗಳೂರಿನ ಆಚರಣೆಯ ವಿಶ್ವಾದ್ಯಂತ ಜನರಿಗೆ ಗೊತ್ತಾಯಿತು. ಇತ್ತೀಚಿನ ಕನ್ನಡದಲ್ಲಿ ಬರುತ್ತಿರುವ ಸಿನಿಮಾಗಳು ನನಗೆ ತುಂಬ ಇಷ್ಟ. ತೆಲುಗು, ಮಲಯಾಳಂನಲ್ಲಿ ಸಿನಿಮಾ ಮಾಡಿದ್ದೀನಿ. ಕನ್ನಡದಲ್ಲಿ ಮಾಡಿಲ್ಲವಲ್ಲಾ ಅನ್ನೋ ಬೇಸರವಿದೆ. ಉತ್ತಮ ಕಥೆ ಸಿಕ್ಕರೆ ಖಂಡಿತ ಕನ್ನಡದಲ್ಲೂ ನಟಿಸುತ್ತೇನೆ' ಎಂದು ಹೇಳಿಕೊಂಡರು. ಜತೆಗೆ ಯಶ್​, ಶ್ರೀನಿಧಿ ಶೆಟ್ಟಿ, ರತ್​ ಶೆಟ್ಟಿ ಮತ್ತು ಪ್ರಶಾಂತ್​ ನೀಲ್​ ಜತೆ ಕೆಲಸ ಮಾಡುವ ಇಂಗಿತ ವ್ಯಕ್ತಪಡಿಸಿದರು.

ಅತ್ಯಂತ ಸವಾಲಿನ ಸಿನಿಮಾ
"ತಂಗಲಾನ್​' ಬಗ್ಗೆ ನಾಯಕ ವಿಕ್ರಮ್​, "ನಾನು ಈ ಹಿಂದೆ "ಪಿತಾಮಗನ್​', "ಅನಿಯನ್​', "ಐ' ಸೇರಿ ಹಲವು ಸವಾಲಿನ ಚಿತ್ರಗಳಲ್ಲಿ ನಟಿಸಿದ್ದೇನೆ. ಆದರೆ, ಈ ಚಿತ್ರಕ್ಕೆ ಹೋಲಿಸಿದರೆ, ಆ ಸಿನಿಮಾಗಳ ಶ್ರಮ ಶೇಕಡಾ 8ರಷ್ಟು ಮಾತ್ರ. "ತಂಗಲಾನ್​' ನನ್ನ ಇದುವರೆಗಿನ ಅತ್ಯಂತ ಸವಾಲಿನ, ಕಷ್ಟದ ಸಿನಿಮಾ. ಉಡುಗೆ, ತೊಡುಗೆ ಮಾತ್ರವಲ್ಲ ಆಗಿನ ಕಾಲದ ಬುಡಕಟ್ಟು ಜನರಂತೆ ಜೀವಿಸಿದ್ದೇನೆ' ಎಂದರು. ನಾಯಕಿ ಮಾಳವಿಕಾ, "ನನ್ನನ್ನು ನೋಡಿ ನನ್ನಿಂದಲೂ ಮಾಟಗಾತಿ ಪಾತ್ರ ಮಾಡಿಸಬಹುದು ಅಂತ ಯಾವತ್ತೂ ಅಂದುಕೊಂಡಿರಲಿಲ್ಲ. ಇದೊಂದು ಅದ್ಭುತ ಅನುಭವ. ಈ ಚಿತ್ರಕ್ಕಾಗಿ ಬೆವರು, ರಕ್ತ, ಹಾವು, ಚೇಳುಗಳ ಕಾಟ, ಬಿಸಿಲು, ಪೆಟ್ಟುಗಳು, ಮೂಳೆ ಮುರಿತ… ಹೀಗೆ ಎಲ್ಲವನ್ನೂ ಎದುರಿಸಿದ್ದೇನೆ' ಎಂದರು. ಬ್ರಿಟಿಷ್​ ಸೇನಾಧಿಕಾರಿ ಕ್ಲೆಮೆಂಟ್​ ಪಾತ್ರ ನಿರ್ವಹಿಸಿರುವ ಇಂಗ್ಲೆಂಡನ್​ ಡೇನಿಯಲ್​ ಕಾಲ್ಟಗಿರೋನ್​, "ಇದೊಂದು ಅತ್ಯಂತ ಸಾಹಸಮಯ ಚಿತ್ರ. ಕಥೆ ಓದದೇ ಒಪ್ಪಿಕೊಂಡೆ. ಕೆಜಿಎಫ್​ ಎಂಬ ಜಾಗ ನನ್ನ ನೆನಪಿನಲ್ಲಿ ಉಳಿಯಲಿದೆ. ಆ್ಯಕ್ಷನ್​ ಸನ್ನಿವೇಶಗಳ ಸಮಯದಲ್ಲಿ ಹಲವು ಬಾರಿ ಪೆಟ್ಟು ತಿಂದೆ' ಎಂದು ಅನುಭವ ಹಂಚಿಕೊಂಡರು.