ಹೈದರಾಬಾದ್: 'ಮೆಗಾಸ್ಟಾರ್' ಚಿರಂಜೀವಿ ಅಭಿನಯದ 'ಆಚಾರ್ಯ' ಚಿತ್ರದ ಚಿತ್ರೀಕರಣ ಡಿಸೆಂಬರ್ನಿಂದಲೇ ಪ್ರಾರಂಭವಾಗಿದ್ದು, ಇದೀಗ ಭರದಿಂದ ಸಾಗುತ್ತಿದೆ. ಈ ಚಿತ್ರಕ್ಕಾಗಿ ಹೈದರಾಬಾದ್ನ ಹೊರವಲಯದಲ್ಲಿ ಒಂದು ದೊಡ್ಡ ದೇವಸ್ಥಾನದ ಸೆಟ್ ಹಾಕಲಾಗಿದ್ದು, ಅಲ್ಲಿ ಸದ್ಯ ಚಿತ್ರೀಕರಣ ನಡೆಯುತ್ತಿದೆ.
'ಆಚಾರ್ಯ' ಚಿತ್ರದ ಬಹಳಷ್ಟು ಭಾಗ ಒಂದು ಸಣ್ಣ ನಗರದಲ್ಲಿ ನಡೆಯುತ್ತದಂತೆ. ಬೃಹತ್ ದೇವಸ್ಥಾನವಿರುವ ಈ ಪಟ್ಟಣಕ್ಕಾಗಿ ಚಿತ್ರತಂಡ ಸಾಕಷ್ಟು ಹುಡುಕಾಟ ನಡೆಸಿದ್ದು, ಕೊನೆಗೆ ಹೈದರಾಬಾದ್ನ ಹೊರವಲಯದಲ್ಲಿ 20 ಎಕರೆ ಜಾಗದಲ್ಲಿ ಒಂದು ಬೃಹತ್ ದೇವಸ್ಥಾನ ಸೇರಿದಂತೆ ಹಲವು ಸೆಟ್ಗಳ ನಿರ್ಮಾಣ ಮಾಡಲಾಗಿದೆ.
ಚಿತ್ರೀಕರಣದಲ್ಲಿ ಭಾಗವಹಿಸುವುದಕ್ಕೆ ಹೋಗಿದ್ದ ಚಿರಂಜೀವಿ ಅವರೇ ಈ ಸೆಟ್ ನೋಡಿ ಬೋಲ್ಡ್ ಆಗಿದ್ದಾರೆ. ಇದು ಎಲ್ಲರಿಗೂ ಗೊತ್ತಾಗಬೇಕು ಎಂಬ ನಿಟ್ಟಿನಲ್ಲಿ ಒಂದು ವೀಡಿಯೋ ಮಾಡಿ, ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಹಾಕಿಕೊಂಡಿದ್ದಾರೆ. ಸಾಮಾನ್ಯವಾಗಿ ಸ್ಟಾರ್ ನಟ-ನಟಿಯರು ತಮ್ಮ ಪಾತ್ರ ಅಥವಾ ಗೆಟಪ್ಗಳ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದು ವಾಡಿಕೆ. ಆದರೆ, ಕಲಾ ನಿರ್ದೇಶಕರ ಕೆಲಸವನ್ನು ತುಂಬಾ ಮೆಚ್ಚಿಕೊಂಡಿರುವ ಮೆಗಾಸ್ಟಾರ್, ಆ ಕೆಲಸದ ಬಗ್ಗೆ ಇತರರಿಗೂ ಗೊತ್ತಾಗಲಿ ಎಂಬ ಕಾರಣಕ್ಕೆ ವೀಡಿಯೋ ಮಾಡಿ ಹಾಕಿದ್ದಾರಂತೆ.
ಈ ಕುರಿತು ಮಾತನಾಡಿರುವ ಅವರು. 'ಆಚಾರ್ಯ ಚಿತ್ರಕ್ಕಾಗಿ ಒಂದು ಬೃಹತ್ ದೇವಸ್ಥಾನದ ಸೆಟ್ ಹಾಕಲಾಗಿದೆ. 20 ಎಕರೆ ಪ್ರದೇಶದಲ್ಲಿ ಈ ಸೆಟ್ ನಿರ್ಮಾಣವಾಗಿದೆ. ಇಂಥದ್ದೊಂದು ಬೃಹತ್ ದೇವಸ್ಥಾನದ ಕನಸು ಕಾಣುವುದರ ಜತೆಗೆ ಸೆಟ್ ಹಾಕಿಸಿದ ಸುರೇಶ್ ಮತ್ತು ಕೊರಟಾಲ ಶಿವ ಅವರನ್ನು ಎಷ್ಟು ಹೊಗಳಿದರೂ ಸಾಲದು' ಎಂದು ಬರೆದುಕೊಂಡಿದ್ದಾರೆ.
'ಆಚಾರ್ಯ' ಚಿತ್ರದಲ್ಲಿ ಚಿರಂಜೀವಿ ಅವರಿಗೆ ಕಾಜಲ್ ಅಗರ್ವಾಲ್ ನಾಯಕಿಯಾಗಿ ನಟಿಸಿದ್ದು, ಮಿಕ್ಕಂತೆ ರಾಮ್ಚರಣ್ ತೇಜ, ಸೋನು ಸೂದ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೊರಟಾಲ ಶಿವ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಮೇ ತಿಂಗಳಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.