ಉಬರ್​​ ಚಾಲಕನ ಮೇಲೆ ಮನಬಂದಂತೆ ದಾಳಿ ಮಾಡಿ ಫೋನ್​ ಕಸಿದು ಕಾಲ್ಕಿತ್ತ ಖ್ಯಾತ ಖಳನಟ ಸುಪ್ರೀತ್ ರೆಡ್ಡಿ..! Supreeth Reddy  
ಸಿನಿವಾಣಿ

ಉಬರ್​​ ಚಾಲಕನ ಮೇಲೆ ಮನಬಂದಂತೆ ದಾಳಿ ಮಾಡಿ ಫೋನ್​ ಕಸಿದು ಕಾಲ್ಕಿತ್ತ ಖ್ಯಾತ ಖಳನಟ ಸುಪ್ರೀತ್ ರೆಡ್ಡಿ..! Supreeth Reddy

ಪ್ರಮುಖ ಮುಖ್ಯಾಂಶಗಳು

  • ಹೈದರಾಬಾದ್‌ನಲ್ಲಿ ಸಿನಿಮಾ ನಟನೊಬ್ಬನ ವರ್ತನೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸ
  • ಕಾಟ್ರಾಜ್ ಎಂದೇ ಖ್ಯಾತಿಯಾಗಿರುವ ಜನಪ್ರಿಯ ನಟ ಸುಪ್ರೀತ್ ರೆಡ್ಡಿಯಿಂದ ನಡುರಸ್ತೆಯಲ್ಲೇ ಹುಚ್ಚಾಟ
  • ಸಾಮಾನ್ಯ ಉಬರ್ ಕ್ಯಾಬ್ ಚಾಲಕನ ಮೇಲೆ ಹಲ್ಲೆ ಮಾಡಿ, ಫೋನ್​ ಕಸಿದುಕೊಂಡು ದೌರ್ಜನ್ಯ
  • ಚಿತ್ರರಂಗ ಹಾಗೂ ಜಾಲತಾಣಗಳಲ್ಲಿ ಸುಪ್ರಿತ್​ ರೆಡ್ಡಿ ವರ್ತನೆಗೆ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ
Supreeth Reddy : ಹೈದರಾಬಾದ್‌ನಲ್ಲಿ ಸಿನಿಮಾ ನಟನೊಬ್ಬನ ವರ್ತನೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕಾಟ್ರಾಜ್ ಎಂದೇ ಖ್ಯಾತಿಯಾಗಿರುವ ಜನಪ್ರಿಯ ನಟ ಸುಪ್ರೀತ್ ರೆಡ್ಡಿ, ನಡುರಸ್ತೆಯಲ್ಲೇ ಸಾಮಾನ್ಯ ಉಬರ್ ಕ್ಯಾಬ್ ಚಾಲಕನ ಮೇಲೆ ಹಲ್ಲೆ ನಡೆಸಿರುವುದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಬಂಧ ಕೀಸರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಿತ್ರರಂಗ ಹಾಗೂ ಜಾಲತಾಣಗಳಲ್ಲಿ ಸುಪ್ರಿತ್​ ರೆಡ್ಡಿ ವರ್ತನೆಗೆ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ.
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಶನಿವಾರದಂದು ಕ್ಯಾಬ್ ಚಾಲಕ ಶ್ರೀಹರಿ ಎಂಬುವವರು ಹೈದರಾಬಾದ್​ನ ವನಸ್ಥಲಿಪುರಂನಿಂದ ಕುಂದನಪಲ್ಲಿಗೆ ಪ್ರಯಾಣಿಕರನ್ನು ತಮ್ಮ ವಾಹನದಲ್ಲಿ ಸುರಕ್ಷಿತವಾಗಿ ಕರೆತಂದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಪ್ರಯಾಣಿಕರನ್ನು ಬಿಟ್ಟ ನಂತರ ಚಾಲಕ ಶ್ರೀಹರಿ ಅವರು ನಾಗರಂ ಸಾಯಿಬಾಬಾ ದೇವಸ್ಥಾನದ ಬಳಿಯ ಗಲ್ಲಿಯೊಂದರಲ್ಲಿ ತಮ್ಮ ವಾಹನವನ್ನು ನಿಲ್ಲಿಸಿ, ಮುಂದಿನ ಬುಕಿಂಗ್‌ಗಾಗಿ ಕಾಯುತ್ತಿದ್ದರು. ಅದೇ ಸಮಯದಲ್ಲಿ ಅಲ್ಲಿಗೆ ಬಂದ ನಟ ಕಾಟ್ರಾಜ್, ಚಾಲಕನೊಂದಿಗೆ ಅನಾವಶ್ಯಕವಾಗಿ ಜಗಳ ತೆಗೆದು, ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ದಾಳಿಯ ಸಂದರ್ಭದಲ್ಲಿ ಕಾಟ್ರಾಜ್ ಅವರು ಚಾಲಕ ಶ್ರೀಹರಿ ಅವರ ಮೊಬೈಲ್ ಫೋನನ್ನೂ ಬಲವಂತವಾಗಿ ಕಿತ್ತುಕೊಂಡಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಅಲ್ಲಿಗೆ ಬಂದು ಆಕ್ಷೇಪ ವ್ಯಕ್ತಪಡಿಸಿದಾಗ, ನಟ ಕಾಟ್ರಾಜ್​ ಫೋನ್ ಮರಳಿ ನೀಡಿ ಅಲ್ಲಿಂದ ಎಸ್ಕೇಪ್​ ಆಗಿದ್ದಾರೆ.
ಸಂತ್ರಸ್ತ ಚಾಲಕ ಶ್ರೀಹರಿ ಈ ಕುರಿತು ಕೀಸರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಾರ್ವಜನಿಕ ರಸ್ತೆಯಲ್ಲೇ ನಡೆದಿರುವ ಈ ದೌರ್ಜನ್ಯದ ಘಟನೆಯು ಸಾರಿಗೆ ವಾಹನಗಳ ಚಾಲಕರ ಸುರಕ್ಷತೆಯ ಬಗ್ಗೆ ಸಾರ್ವಜನಿಕರಲ್ಲಿ ತೀವ್ರ ಕಳವಳವನ್ನು ಉಂಟುಮಾಡಿದೆ.
ಅಂದಹಾಗೆ, ನಟ ಸುಪ್ರೀತ್ ರೆಡ್ಡಿ ಅವರು ಪ್ರಮುಖವಾಗಿ ತೆಲುಗು ಚಿತ್ರರಂಗದಲ್ಲಿ ವಿಲನ್ ಹಾಗೂ ಪೋಷಕ ನಟನಾಗಿ ಗುರುತಿಸಿಕೊಂಡಿದ್ದಾರೆ. ಎಸ್.ಎಸ್. ರಾಜಮೌಳಿ ನಿರ್ದೇಶನದ, ಪ್ರಭಾಸ್ ನಟನೆಯ ಸೂಪರ್ ಹಿಟ್ ಸಿನಿಮಾ 'ಛತ್ರಪತಿ'ಯಲ್ಲಿ ಅವರು ನಿರ್ವಹಿಸಿದ ವಿಲನ್ ಪಾತ್ರ 'ಕಾಟ್ರಾಜು' ಅವರಿಗೆ ಚಿತ್ರರಂಗದಲ್ಲಿ ಭಾರಿ ದೊಡ್ಡ ಬ್ರೇಕ್ ಹಾಗೂ ಜನಪ್ರಿಯತೆಯನ್ನು ತಂದುಕೊಟ್ಟಿತು. ಅಂದಿನಿಂದ ಅವರ ಹೆಸರು ಕಾಟ್ರಾಜ್ ಸುಪ್ರೀತ್ ಎಂದೇ ಖ್ಯಾತಿಯಾಯಿತು.
ತೆಲುಗಿನ 'ಸೈ', 'ಮರ್ಯಾದಾ ರಾಮಣ್ಣ', 'ದೂಕುಡು', 'ಮಿರ್ಚಿ' ಮತ್ತು 'ಸಾಹೋ' ಚಿತ್ರಗಳಷ್ಟೇ ಅಲ್ಲದೆ, ಹಿಂದಿಯ ಸೂಪರ್ ಹಿಟ್ ಚಿತ್ರಗಳಾದ ಆಮಿರ್ ಖಾನ್ ನಟನೆಯ 'ಗಜಿನಿ' ಹಾಗೂ ಅಕ್ಷಯ್ ಕುಮಾರ್ ಅಭಿನಯದ 'ರೌಡಿ ರಾಥೋಡ್' ಚಿತ್ರಗಳಲ್ಲೂ ಖಳನಾಯಕನ ಪಾತ್ರಗಳಲ್ಲಿ ನಟಿಸಿ ಬಾಲಿವುಡ್‌ನಲ್ಲೂ ಸೈ ಎನಿಸಿಕೊಂಡಿದ್ದಾರೆ. ತಮ್ಮ ಕಟ್ಟುಮಸ್ತಾದ ದೇಹದಾರ್ಢ್ಯ ಹಾಗೂ ವಿಶಿಷ್ಟ ಧ್ವನಿಯ ಮೂಲಕ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಅತ್ಯಂತ ಬೇಡಿಕೆಯ ಖಳನಟರಾಗಿ ಅವರು ಗುರುತಿಸಿಕೊಂಡಿದ್ದಾರೆ, (ಏಜೆನ್ಸೀಸ್​).