ಸಿನಿವಾಣಿ

Prabhuthva Review; ಸಮಾಜ ರಿಪೇರಿ ಮಾಡುವ ಖಡಕ್​ ಮೆಕ್ಯಾನಿಕ್​

ಆತ ಮೆಕ್ಯಾನಿಕ್​ ಮನು ಅಲಿಯಾಸ್​ ಮನೋಹರ (ಚೇತನ್​ ಚಂದ್ರ). ವೃತ್ತಿಯಲ್ಲಿ ಮೆಕ್ಯಾನಿಕ್​ ಆದರೂ, ಪ್ರವೃತ್ತಿಯಲ್ಲಿ ದುಷ್ಟರ ವಿರುದ್ಧ ತನ್ನದೇ ರೀತಿಯಲ್ಲಿ ಸಮರ ಸಾರುವ ಜನ ಸಾಮಾನ್ಯರ ಸೂಪರ್​ ಹೀರೋ. ಆಕೆ ಪರಿಸರವಾದಿ ಅನು (ಪಾವನಾ ಗೌಡ). ಇಬ್ಬರ ಅನಿರೀಕ್ಷಿತ ಪರಿಚಯ, ಪ್ರೀತಿಗೆ ತಿರುಗುತ್ತದೆ. ಆದರೆ, ಅಷ್ಟರಲ್ಲಿ ಮನುವಿನ ಹೋರಾಟಗಳೇ ಆತನನ್ನು ಸಂಕಷ್ಟಕ್ಕೆ ಸಿಲುಕಿಸುತ್ತವೆ. ಮುಳ್ಳನ್ನು, ಮುಳ್ಳಿನಿಂದಲೇ ತೆಗೆಯಬೇಕು. ಹಿಂಸೆಯ ಸದ್ದನ್ನು ಹಿಂಸೆಯಿಂದಲೇ ಅಡಗಿಸಬೇಕು ಎಂಬ ನೀತಿ ಅನುಸರಿಸುವ ಮನು, ಎಂಎಲ್​ಎ ವಿಜಯಲಕ್ಷ್ಮಿ ಸಹೋದರ ರವಿ (ಹರೀಶ್​ ರಾಯ್​) ಕೊಲೆಯಲ್ಲಿ ಆರೋಪಿ ಸ್ಥಾನದಲ್ಲಿ ನಿಲ್ಲುತ್ತಾನೆ. ಖಡಕ್​ ಪೊಲೀಸ್​ ಅಧಿಕಾರಿ (ಶಶಿಕುಮಾರ್​) ಆತನನ್ನು ಬಂಧಿಸುತ್ತಾರೆ. ಮುಂದೆ? ಅಲ್ಲಿಗೆ ದುಷ್ಟರ ವಿರುದ್ಧದ ಮನು ಹೋರಾಟ ಕೊನೆಯಾಗುತ್ತಾ? ಅನು, ಮನು ಲವ್​ಸ್ಟೋರಿ ಏನಾಗುತ್ತೆ? ಗಾಡಿ ರಿಪೇರಿ ಮಾಡುವ ಮನು ಸಮಾಜದ ರಿಪೇರಿಗೆ ಇಳಿಯಲು ಕಾರಣವೇನು? ಆತನೇ ರವಿಯ ಕೊಲೆ ಮಾಡಿರುತ್ತಾನಾ? ಹೀಗೆ ಪ್ರೇಕ್ಷಕರಲ್ಲಿ ಮೂಡುವ ಹಲವು ಪ್ರಶ್ನೆಗಳಿಗೆ ಸಿನಿಮಾದಲ್ಲಿ ಉತ್ತರವಿದೆ.

ಲೇಟ್​ ಆದರೂ ಪ್ರಭುತ್ವ ಲೇಟೆಸ್ಟಾಗಿ ರಿಲೀಸ್​ ಆಗಿರುವ ಸಿನಿಮಾ. ಶಿಷ್ಟರನ್ನು ರಕ್ಷಿಸಿ, ದುಷ್ಟರನ್ನು ಶಿಕ್ಷಿಸುವ ಯೂನಿವರ್ಸಲ್​ ಸಬ್ಜೆಕ್ಟ್​ ಆಗಿರುವ ಕಾರಣ ಥಿಯೇಟರ್​ನಲ್ಲಿ ತಡವಾದರೂ ತಡೆದುಕೊಳ್ಳಬಹುದು. ಸಮಾಜದಲ್ಲಿನ ದುಷ್ಟ ಶಕ್ತಿಗಳ ಶಿಕಾರಿ ಮಾಡುವ ಆ್ಯಂಗ್ರಿ ಯಂಗ್​ ಮ್ಯಾನ್​ ಪಾತ್ರದಲ್ಲಿ ನಾಯಕ ಚೇತನ್​ ಚಂದ್ರ ಗಮನ ಸೆಳೆಯುತ್ತಾರೆ. ಫೈಟ್​ಗಳಲ್ಲಿ ಮಿಂಚುವ ಅವರು, ಡೈಲಾಗ್​ಗಳಲ್ಲೂ ಅಬ್ಬರಿಸಿದ್ದಾರೆ. ನಾಯಕಿ ಪಾವನಾ ಕೂಡ ಅವರಿಗೆ ಸರಿಸಮನಾಗಿ ಸಾಥ್​ ನೀಡಿದ್ದಾರೆ. ರಾಜೇಶ್​ ನಟರಂಗ, ನಾಸರ್​, ಶಶಿಕುಮಾರ್​, ವೀಣಾ ಸುಂದರ್​, ಆದಿ ಲೋಕೇಶ್​, ಶರತ್​ ಲೋಹಿತಾಶ್ವ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಸಿನಿಮಾ ಸ್ವಲ್ಪ ನಿಧಾನ ಎನಿಸಿದರೂ, ತಾಳ್ಮೆ ಪರೀಕ್ಷೆ ಮಾಡದೇ ನೋಡಿಸಿಕೊಂಡು ಹೋಗುತ್ತದೆ. ಅದಕ್ಕೆ ಕಾರಣ ಚಿತ್ರದ ಸಂಭಾಷಣೆ. ರೊಮ್ಯಾಂಟಿಕ್​ ಆ್ಯಕ್ಷನ್​ ಡ್ರಾಮಾ ಜಾನರ್​ ಅಭಿಮಾನಿಗಳಿಗೆ ಪ್ರಭುತ್ವ ಇಷ್ಟವಾಗಬಹುದು.