ತೆಲುಗಿನ ಖ್ಯಾತ ನಟರ ಪೈಕಿ ಚಿರಂಜೀವಿ ಹಾಗೂ ವೆಂಕಟೇಶ್ ತಮ್ಮದೇ ಆದ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಈಗಾಗಲೇ 150ಕ್ಕೂ ಅಧಿಕ ಸಿನಿಮಾಗಳ ನಟಿಸಿರುವ ಚಿರಂಜೀವಿ ಅದೇ ಉತ್ಸಾಹದಲ್ಲಿ ಮುಂದುವರಿದರೆ, ವೆಂಕಟೇಶ್ ಭಿನ್ನ, ವಿಭಿನ್ನ ಪಾತ್ರಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಆದರೆ, ಈ ಇಬ್ಬರು ಖ್ಯಾತ ನಟರು ಒಂದೇ ಸಿನಿಮಾದಲ್ಲಿ ಈವರೆಗೆ ನಟಿಸಿಲ್ಲ ಎಂಬುದು ಟಾಲಿವುಡ್‌ನಲ್ಲಿ ಕೊರಗಾಗಿತ್ತು. ಇದೀಗ ಈ ಕೊರಗು ನೀಗುತ್ತಿದೆ. ಹೌದು, ನಟ ಚಿರಂಜೀವಿ ಅಭಿನಯದ ‘ಮನಶಂಕರ ವರಪ್ರಸಾದಗಾರು’ ಚಿತ್ರದಲ್ಲಿ ನಟ ವೆಂಕಟೇಶ್ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಚಿತ್ರತಂಡವು ವಿಡಿಯೋ ಬಿಡುಗಡೆ ಮಾಡಿದ್ದು, ಅದರಲ್ಲಿ ಚಿರಂಜೀವಿ, ವೆಂಕಟೇಶ್‌ರನ್ನು ಸ್ವಾಗತಿಸಿದ್ದಾರೆ. ಇಲ್ಲಿ ಅವರು ಅತಿಥಿ ಪಾತ್ರದಲ್ಲಿರಲಿದ್ದಾರೆ. ಆದರೆ, ಪಾತ್ರ ಹಾಗೂ ಲುಕ್ ಬಗ್ಗೆ ಚಿತ್ರತಂಡ ಗುಟ್ಟುಬಿಟ್ಟುಕೊಟ್ಟಿಲ್ಲ. ಇದೇ ಮೊದಲ ಬಾರಿಗೆ ಈ ಇಬ್ಬರು ನಟರು ತೆರೆ ಮೇಲೆ ಒಂದಾಗುತ್ತಿದ್ದಾರೆ. ಈ ಕಾರಣಕ್ಕಾಗಿ ಈ ಸಿನಿಮಾ ನಿರೀಕ್ಷೆ ಹೆಚ್ಚಿಸಿದೆ. ಚಿರಂಜೀವಿ ಅಭಿನಯದ 157ನೇ ಸಿನಿಮಾ ಇದಾಗಿದ್ದು, ಅವರಿಗೆ ನಯನತಾರಾ ಜೋಡಿಯಾಗಿದ್ದಾರೆ. ‘ಭಗವಂತ ಕೇಸರಿ’ ನಿರ್ದೇಶಕ ಅನಿಲ್ ರವಿಪುಡಿ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಭರದಿಂದ ಸಾಗಿದ್ದು, ಮುಂದಿನ ಸಂಕ್ರಾಂತಿಗೆ ತೆರೆ ಮೇಲೆ ಬರಲು ಸಿನಿಮಾ ಸಿದ್ಧವಾಗುತ್ತಿದೆ. -ಏಜೆನ್ಸೀಸ್