ಸಿನಿವಾಣಿ

ಅಕಟಕಟ ಚಿತ್ರಕ್ಕೆ ಚೈತ್ರಾ ಆಚಾರ್; ತಾಯಿ-ಮಗನ ಸೆಂಟಿಮೆಂಟ್ ಚಿತ್ರ

ಬೆಂಗಳೂರು: ‘ಮಹಿರಾ’ ಚಿತ್ರದಲ್ಲಿ ಗಮನ ಸೆಳೆದ ಚೈತ್ರಾ ಆಚಾರ್​ಗೆ ಕನ್ನಡ ಚಿತ್ರರಂಗದಲ್ಲಿ ಅವಕಾಶಗಳು ಹೆಚ್ಚಾಗುತ್ತಿವೆ. ‘ಗಿಲ್ಕಿ’ ಮತ್ತು ‘ತಲೆದಂಡ’ ಚಿತ್ರಗಳಲ್ಲಿ ನಟಿಸಿದ ನಂತರ ಚೈತ್ರಾಗೆ ಇನೊಂದು ಚಿತ್ರ ಸಿಕ್ಕಿದೆ. ಅದೇ ‘ಅಕಟಕಟ’. ‘ಪುಗ್ಸಟ್ಟೆ ಲೈಫು’ ಚಿತ್ರವನ್ನು ನಿರ್ವಿುಸಿದ್ದ ನಾಗರಾಜ ಸೋಮಯಾಜಿ, ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಜಾನಕಿ ಎಂಬ ಪಾತ್ರವನ್ನು ಚೈತ್ರಾ ನಿರ್ವಹಿಸಲಿದ್ದು, ಸದಾ ಖುಷಿಖುಷಿಯಾಗಿ ಜೀವನ ಸಾಗಿಸುವ ಪಾಸಿಟಿವ್ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಮಧ್ಯಮ ವರ್ಗದ ಹುಡುಗಿಯಾಗಿ ಚೈತ್ರಾ ನಟಿಸುತ್ತಿದ್ದು, ನಾಯಕನ ಬದುಕಿಗೆ ಎಂಟ್ರಿ ಕೊಟ್ಟಾಗ ಏನೆಲ್ಲಾ ಆಗುತ್ತದೆ ಎಂಬುದನ್ನು ಚಿತ್ರದಲ್ಲಿ ಹೇಳಲಾಗುತ್ತದಂತೆ.

ಈ ಚಿತ್ರದ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡುವ ನಾಗರಾಜ ಸೋಮಯಾಜಿ, ‘ಇದೊಂದು ತಾಯಿ ಸೆಂಟಿಮೆಂಟ್ ಕುರಿತಾದ ಚಿತ್ರ. ಅಮ್ಮನೇ ಎಲ್ಲದಕ್ಕೂ ಕಾರಣ ಮತ್ತು ಪರಿಹಾರ ಎಂದು ನಂಬಿರುವ ಮಗನ ಕಥೆ ಇದು. ಮಗನ ಪಾತ್ರದಲ್ಲಿ ನರ್ತನ್ ಇದ್ದಾರೆ. ಇನ್ನು, ತಾಯಿ ಪಾತ್ರಕ್ಕೆ ಹುಡುಕಾಟ ನಡೆದಿದೆ. ಸದ್ಯಕ್ಕೆ ನರ್ತನ್, ಚೈತ್ರಾ ಮತ್ತು ಸಂಪತ್ ಮೈತ್ರೇಯ ಆಯ್ಕೆಯಾಗಿದ್ದಾರೆ. ಮಿಕ್ಕ ಕಲಾವಿದರು ಇನ್ನಷ್ಟೇ ಫೈನಲ್ ಆಗಬೇಕು. ಜೂನ್ 15ರ ನಂತರ ಚಿತ್ರೀಕರಣ ನಡೆಯಲಿದೆ. ಬೆಂಗಳೂರು ಮತ್ತು ಹಳ್ಳಿಯೊಂದರಲ್ಲಿ 45 ದಿನಗಳ ಚಿತ್ರೀಕರಣ ಮಾಡುತ್ತೇವೆ’ ಎಂದು ಮಾಹಿತಿ ಕೊಡುತ್ತಾರೆ. ಈ ಕಥೆಯನ್ನು ಅವರು ಮೂರು ವರ್ಷಗಳ ಹಿಂದೆಯೇ ಮಾಡಿಟ್ಟುಕೊಂಡಿದ್ದರಂತೆ. ಈಗ ಸಂಧ್ಯಾರಾಣಿ ಅವರ ಜತೆಗೆ ಸೇರಿ ಚಿತ್ರಕತೆ ಮಾಡಿ, ಚಿತ್ರ ನಿರ್ದೇಶನಕ್ಕೆ ಅಣಿಯಾಗುತ್ತಿದ್ದಾರೆ.