Celina Jaitly ಚಿತ್ರ Instagram 
ಸಿನಿವಾಣಿ

ಅಮ್ಮಾ ಇದು ಡಿವೋರ್ಸ್ ಪೇಪರ್ಸ್! ಆನಿವರ್ಸರಿ ದಿನವೇ ನಟಿ ಸೆಲಿನಾಗೆ ಶಾಕ್ ಕೊಟ್ಟ ಮಕ್ಕಳು; ಆಸ್ಟ್ರಿಯಾದಲ್ಲಿ ನಡೆದಿದ್ದೇನು? Celina Jaitly

ಪ್ರಮುಖ ಮುಖ್ಯಾಂಶಗಳು

  • ಬಾಲಿವುಡ್‌ ನಟಿ ಸೆಲಿನಾ ಜೇಟ್ಲಿ ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ನಡೆದಂತಹ ಅತ್ಯಂತ ಆಘಾತಕಾರಿ ಘಟನೆ
  • 15ನೇ ವಿವಾಹ ವಾರ್ಷಿಕೋತ್ಸವದಂದೇ ನಟಿ ಸೆಲಿನಾಗೆ ಸಿಕ್ತು ಡಿವೋರ್ಸ್ ನೋಟಿಸ್ ಉಡುಗೊರೆ
  • ವಿವಾಹ ವಾರ್ಷಿಕೋತ್ಸವದ ಸನಿಹದಲ್ಲಿದ್ದಾಗ ಜರ್ಮನ್ ಭಾಷೆಯಲ್ಲಿದ್ದ ಅಧಿಕೃತ ಪತ್ರವೊಂದು ಅವರಿಗೆ ತಲುಪಿತ್ತು
  • ಮಕ್ಕಳನ್ನು ನೋಡಬೇಕಾದರೆ ಇಲ್ಲೇ ಸೂಪರ್‌ಮಾರ್ಕೆಟ್‌ನಲ್ಲಿ ಕ್ಲೀನರ್ ಕೆಲಸ ಹುಡುಕಿಕೊಡುತ್ತೇನೆ
Celina Jaitly: ಬಾಲಿವುಡ್‌ ನಟಿ ಸೆಲಿನಾ ಜೇಟ್ಲಿ ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ನಡೆದಂತಹ ಅತ್ಯಂತ ಆಘಾತಕಾರಿ ಘಟನೆಯೊಂದನ್ನು ಮುಕ್ತವಾಗಿ ಬಿಚ್ಚಿಟ್ಟಿದ್ದಾರೆ. ತಮ್ಮ 15ನೇ ವಿವಾಹ ವಾರ್ಷಿಕೋತ್ಸವದ ಉಡುಗೊರೆಯಂತೆ ತಮಗೆ ಬಂದಿದ್ದ ವಿಚ್ಛೇದನ ನೋಟಿಸ್, ಪತಿಯಿಂದ ಅನುಭವಿಸಿದ ಕಿರುಕುಳ ಮತ್ತು ತಾಯ್ನಾಡಿಗೆ ಮರಳಿ ಜೀವನವನ್ನು ಮರುರೂಪಿಸಿಕೊಂಡ ಕಥೆಯನ್ನು ಇಂಡಿಯಾ ಟುಡೇಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ವಿವಾಹ ವಾರ್ಷಿಕೋತ್ಸವದಂದೇ ಕಾದಿತ್ತು ಆಘಾತ!

2010ರಲ್ಲಿ ಆಸ್ಟ್ರಿಯಾದ ಉದ್ಯಮಿ ಪೀಟರ್ ಹಾಗ್ ಅವರನ್ನು ವಿವಾಹವಾಗಿದ್ದ ಸೆಲಿನಾ ಅಲ್ಲಿಯೇ ವಾಸವಾಗಿದ್ದರು. ವಿವಾಹ ವಾರ್ಷಿಕೋತ್ಸವದ ಸನಿಹದಲ್ಲಿದ್ದಾಗ ಜರ್ಮನ್ ಭಾಷೆಯಲ್ಲಿದ್ದ ಅಧಿಕೃತ ಪತ್ರವೊಂದು ಅವರಿಗೆ ತಲುಪಿತ್ತು. ಆರಂಭದಲ್ಲಿ ಅದು ಪುರಸಭೆಯಿಂದ ಬಂದಿರಬಹುದು ಅಥವಾ ನಿವಾಸದ ಹಕ್ಕಿಗೆ ಸಂಬಂಧಿಸಿದ್ದಿರಬಹುದು ಎಂದು ಭಾವಿಸಿ, ಸರ್ಕಾರ ನಮಗೆನಾದರೂ ಹಣ ಕಳುಹಿಸಿದೆಯೇ? ಎಂದು ಪತಿಯೊಂದಿಗೆ ತಮಾಷೆ ಮಾಡಿದ್ದರು.
ಆದರೆ, ಪತ್ರವನ್ನು ತಾವೇ ಭಾಷಾಂತರಿಸಲು ಸಮಯವಿಲ್ಲದ ಕಾರಣ, ಮನೆಯಲ್ಲೇ ಹೋಮ್‌ವರ್ಕ್ ಮಾಡುತ್ತಿದ್ದ ತಮ್ಮ ಅವಳಿ ಪುತ್ರರಾದ ವಿನ್‌ಸ್ಟನ್ ಮತ್ತು ವಿರಾಜ್ ಕೈಗೆ ಕೊಟ್ಟು ಓದಲು ಹೇಳಿದರು. ಅಮ್ಮಾ, ಇದು ಡಿವೋರ್ಸ್ ನೋಟಿಸ್ ಎಂದು ಮಕ್ಕಳು ಓದಿದಾಗ ಸೆಲಿನಾ ಒಂದು ಕ್ಷಣ ಗಾಬರಿಯಾಗಿದ್ದರು. ಆ ನೋಟಿಸ್‌ನಲ್ಲಿ ದಾಂಪತ್ಯ ಜೀವನವು ಸರಿಪಡಿಸಲಾಗದ ಹಂತಕ್ಕೆ ತಲುಪಿದೆ ಎಂದು ಉಲ್ಲೇಖಿಸಿ, ಸೆಲಿನಾ ವಿರುದ್ಧ ಹಲವು ಆರೋಪಗಳನ್ನು ಮಾಡಲಾಗಿತ್ತು. ಆ ಕರಾಳ ನೋಟಿಸ್ ಅನ್ನು ಸ್ವತಃ ತನ್ನ ಮಕ್ಕಳೇ ಓದಬೇಕಾಗಿ ಬಂದಿದ್ದಕ್ಕೆ ನಟಿ ಇಂದಿಗೂ ಭಾವುಕರಾಗುತ್ತಾರೆ.

ಪ್ರತ್ಯೇಕತೆ, ಮಕ್ಕಳ ಕಸ್ಟಡಿ ಮತ್ತು ನಿಯಂತ್ರಣದ ಕಹಿ ದಿನಗಳು

ನ್ಯಾಯಾಲಯದ ಮೊದಲ ವಿಚಾರಣೆಯ ನಂತರ, ನವೆಂಬರ್‌ವರೆಗೆ ಸೌಹಾರ್ದಯುತವಾಗಿ ಪ್ರತ್ಯೇಕಗೊಳ್ಳಲು ಜಡ್ಜ್ ಸೂಚಿಸಿದ್ದರು. ಆ ಸಮಯದಲ್ಲಿ ಸೆಲಿನಾ ಅವರ ಬ್ಯಾಂಕ್ ಖಾತೆಯಲ್ಲಿ ತೀರಾ ಕಡಿಮೆ ಹಣವಿತ್ತು. ಒಂದು ಹಂತದಲ್ಲಿ ತಾವು ಅನುಭವಿಸುತ್ತಿದ್ದ ಹಿಂಸಾತ್ಮಕ ದಾಂಪತ್ಯದಿಂದ ಮುಕ್ತಿ ಸಿಕ್ಕಿತು ಎಂಬ ಸಮಾಧಾನವಿದ್ದರೂ, ಮುಂದೇನು ಎಂಬ ಆತಂಕ ಅವರನ್ನು ಕಾಡುತ್ತಿತ್ತು. ಮಕ್ಕಳ ಹಿತದೃಷ್ಟಿಯಿಂದ ಜಂಟಿ ಕಸ್ಟಡಿ ಮತ್ತು ತಾವು ಹೂಡಿಕೆ ಮಾಡಿದ್ದ ಹಣ ಹಾಗೂ ಆಸ್ತಿಯನ್ನು ಮಾತ್ರ ಮರಳಿ ಕೇಳಿ ಪತಿಯ ವಕೀಲರಿಗೆ ಮನವಿ ಮಾಡಿದ್ದರು.
ಆದರೆ, ಆ ಬಳಿಕ ಅವರ ಮೇಲೆ ತೀವ್ರ ನಿಯಂತ್ರಣ ಹೇರಲಾಯಿತು. ಒಂದೇ ಮನೆಯ ಮೇಲಿನ ಮಹಡಿಯಲ್ಲಿ ಪತಿ ವಾಸವಿದ್ದರೆ, ಮಧ್ಯದ ಮಹಡಿಯಲ್ಲಿ ಸೆಲಿನಾ ಮಕ್ಕಳೊಂದಿಗೆ ಇರಬೇಕಾಯಿತು. ತಾವು ಆರ್ಥಿಕವಾಗಿ ಸ್ಥಿರಗೊಳ್ಳುವವರೆಗೆ ಅಲ್ಲಿರಲು ಅನುಮತಿ ಕೇಳಿದಾಗ, ಮಕ್ಕಳನ್ನು ನೋಡಬೇಕಾದರೆ ಇಲ್ಲೇ ಸೂಪರ್‌ಮಾರ್ಕೆಟ್‌ನಲ್ಲಿ ಕ್ಲೀನರ್ ಕೆಲಸ ಹುಡುಕಿಕೊಡುತ್ತೇನೆ ಎಂದು ಪತಿ ಹೇಳಿದ್ದಾಗಿ ಸೆಲಿನಾ ನೆನೆದಿದ್ದಾರೆ.

ಮಧ್ಯರಾತ್ರಿಯಲ್ಲಿ ಭಾರತಕ್ಕೆ ಪಲಾಯನ: ಪ್ರೀತಿ ಜಿಂಟಾ ನೀಡಿದ ಆಸರೆ!

ಇದೇ ಸಮಯದಲ್ಲಿ ಭಾರತದಲ್ಲಿದ್ದ ತಮ್ಮ ಸ್ವಂತ ಆಸ್ತಿಗಳನ್ನು ಮಾರಾಟ ಮಾಡಲು ಪ್ರಯತ್ನಗಳು ನಡೆಯುತ್ತಿವೆ ಎಂಬ ವಿಷಯ ಸೆಲಿನಾಗೆ ತಿಳಿಯಿತು. ತಾವು ಸಂಪೂರ್ಣವಾಗಿ ಎಲ್ಲವನ್ನೂ ಕಳೆದುಕೊಳ್ಳಬಹುದು ಎಂಬ ಭಯದಿಂದ ಅವರು ತಮ್ಮ ನೆರೆಹೊರೆಯವರ ಸಹಾಯ ಪಡೆದು ಮಧ್ಯರಾತ್ರಿಯಲ್ಲಿ ಮಕ್ಕಳೊಂದಿಗೆ ಆಸ್ಟ್ರಿಯಾದಿಂದ ಭಾರತಕ್ಕೆ ಮರಳಿ ಬಂದರು.
ಭಾರತಕ್ಕೆ ಬಂದಾಗ ಅವರಿಗೆ ಸ್ವಂತ ಮನೆಯೂ ಇರಲಿಲ್ಲ. ಸುಮಾರು 10 ದಿನಗಳ ಕಾಲ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಆ ಕಷ್ಟದ ದಿನಗಳಲ್ಲಿ ಬಾಲಿವುಡ್ ನಟಿ ಪ್ರೀತಿ ಜಿಂಟಾ ಸೇರಿದಂತೆ ಕೆಲವೇ ಕೆಲವು ಆಪ್ತ ಸ್ನೇಹಿತರ ವಲಯ ಸೆಲಿನಾ ಬೆನ್ನಿಗೆ ನಿಂತು, ಅವರ ಜೀವನವನ್ನು ಮರುರೂಪಿಸಲು ಸಹಾಯ ಮಾಡಿದರು ಎಂದು ಸೆಲಿನಾ ತಿಳಿಸಿದ್ದಾರೆ.

ಮುಂಬೈ ಕೋರ್ಟ್ ಮೆಟ್ಟಿಲೇರಿದ ನಟಿ

ಸೆಲಿನಾ ಮತ್ತು ಪೀಟರ್ ದಂಪತಿಗೆ 2012ರಲ್ಲಿ ಜನಿಸಿದ ಅವಳಿ ಮಕ್ಕಳಾದ ವಿನ್‌ಸ್ಟನ್-ವಿರಾಜ್ ಹಾಗೂ 2017ರಲ್ಲಿ ಜನಿಸಿದ ಆರ್ಥರ್ ಸೇರಿ ಮೂವರು ಮಕ್ಕಳಿದ್ದಾರೆ. 
ಮದುವೆಯಾದ ಕೆಲವೇ ದಿನಗಳಲ್ಲಿ ತಮಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ಆರಂಭವಾಗಿತ್ತು ಎಂದು ಆರೋಪಿಸಿರುವ ನಟಿ ಸೆಲಿನಾ ಜೇಟ್ಲಿ, ಕಳೆದ 2025ರ ನವೆಂಬರ್‌ನಲ್ಲಿ ಮುಂಬೈನ ಅಂಧೇರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಪತಿಯ ವಿರುದ್ಧ ಕೌಟುಂಬಿಕ ದೌರ್ಜನ್ಯ ಮತ್ತು ಕ್ರೌರ್ಯದ ಪ್ರಕರಣ ದಾಖಲಿಸಿರುವ ಅವರು, ಸೂಕ್ತ ಆರ್ಥಿಕ ಪರಿಹಾರಕ್ಕಾಗಿ ಈವರೆಗೂ ಕಾನೂನು ಹೋರಾಟ ನಡೆಸುತ್ತಿದ್ದಾರೆ (ಏಜೆನ್ಸೀಸ್​).