ಸಿನಿವಾಣಿ

ಹೀಗೊಂದು ಆಪರೇಷನ್​ ಬೇಕಲ್ಲವೇ? ಭಾರತದಲ್ಲಿರುವ ಪಾಕ್​ ಪ್ರೇಮಿಗಳು, ಸಂಭ್ರಮಿಸುತ್ತಿರುವ ಅವಿವೇಕಿಗಳ ವಿರುದ್ಧ

| ಹರ್ಷವರ್ಧನ್​ ಬ್ಯಾಡನೂರು

"ಎಲ್ಲ ಉಗ್ರರನ್ನು ಬಲಿ ಪಡೆಯಬೇಕು. ದೇಶದ ಹೊರಗಿರುವವರು ಮಾತ್ರವಲ್ಲ ಭಾರತದಲ್ಲೇ ಇದ್ದು ಪಾಕಿಸ್ತಾನ್​ ಜಿಂದಾಬಾದ್​ ಎಂದು ಕೂಗುವವರೂ ಸಹ ಉಗ್ರಗಾಮಿಗಳೇ. ಅವರನ್ನೂಹೊಡೆದು ಮಟ್ಟ ಹಾಕಬೇಕು. ಭಾರತವನ್ನು ಕ್ಲೀನ್​ ಮಾಡಬೇಕು. ಭಾರತದಲ್ಲಿ ಅಂಥವರಿಗೆ ಜಾಗ ಇರಬಾರದು. ಇವತ್ತಲ್ಲ ನಾಳೆ ಭಾರತಕ್ಕೆ ಅಂಥವರಿಂದ ಅಪಾಯವೇ. ಆಪರೇಷನ್​ ಸಿಂಧೂರ ಬಳಿಕ, ಭಾರತೀಯ ಸೇನೆಯು ದೇಶದ ಒಳಗಿರುವ ಭಯೋತ್ಪಾದಕರನ್ನು ಬೇಟೆಯಾಡುವ ಕೆಲಸ ಮಾಡಬೇಕು' ಹೀಗೆ ಅಸಮಾಧಾನ ವ್ಯಕ್ತಪಡಿಸಿದ್ದರು ನಟ ಧ್ರುವ ಸರ್ಜಾ. ಅದಕ್ಕೆ ಕೆಲವರ ಪಾಕ್​ ಪ್ರೇಮ. ಹಾಗೇ ಯುದ್ಧ ಸಂದರ್ಭದಲ್ಲೂ ಸಂಭ್ರಮಾಚರಣೆಯಲ್ಲಿ ತೊಡಗಿರುವ ಕೆಲ ಅವಿವೇಕಿಗಳು.

ಶ್ರುತಿ ಪ್ರಕಾಶ್​ ಕಣ್ಣೀರು

ಬಿಗ್​ಬಾಸ್​ ಕನ್ನಡ ಸೀಸನ್​ 5ರಲ್ಲಿ ಭಾಗವಹಿಸಿದ್ದ "ಕಡಲ ತೀರದ ಭಾರ್ಗವ', "ಗ್ರೇ ಗೇಮ್ಸ್​ ' ಸೇರಿ ಕೆಲ ಚಿತ್ರಗಳಲ್ಲೂ ನಟಿಸಿರುವ ಶ್ರುತಿ ಪ್ರಕಾಶ್​ ಪಾಕ್​ ಪ್ರೇಮಿಗಳ ವಿರುದ್ಧ ಧ್ವನಿಯೆತ್ತಿದ್ದಾರೆ. ಜತೆಗೆ ಸೈನಿಕರಿಗೆ ಕೃತಜ್ಞತೆ ಹೇಳುತ್ತಾ ಭಾವುಕರಾಗಿರುವ ಅವರು, "ಸೇನಾಧಿಕಾರಿಯ ಮಗಳಾಗಿ ನನಗೆ ಕೋಪ ಬರುತ್ತಿದೆ. ನನ್ನ ಕೆಲ ಆ್ಯಕ್ಟರ್​ ಮತ್ತು ಸಿಂಗರ್​ ಫ್ರೆಂಡ್ಸ್​​ ಭಾರತದ ಪರ ಪೋಸ್ಟ್​ ಹಾಕಿರುವ ಕಾರಣ ತುಂಬ ಜನ ಫಾವರ್ಸ್​ ಅನ್​ಫಾಲೋ ಮಾಡುತ್ತಿದ್ದಾರೆ ಅಂತ ನನಗೆ ಹೇಳಿದರು. ನಾವು ನಮ್ಮ ದೇಶವನ್ನು ಸಪೋರ್ಟ್​ ಮಾಡುವುದು ತಪ್ಪಾ? ಈ ದೇಶದಲ್ಲಿದ್ದುಕೊಂಡು ಪಾಕಿಸ್ತಾನವನ್ನು, ಭಯೋತ್ಪಾದನೆಯನ್ನು ಬೆಂಬಲಿಸುತ್ತಿರುವ ಫಾಲೋವರ್ಸ್​ ನಮಗೆ ಬೇಡ. ಗಡಿಯಲ್ಲಿ ಸೈನಿಕರು ತಮ್ಮ ಜೀವದ ಹಂಗು ತೊರೆದು ನಮ್ಮನ್ನು ರಸುತ್ತಿದ್ದಾರೆ. ಅಂತಹ ಸೈನಿಕರಿಗೂ ಹೆಂಡತಿ, ಮಕ್ಕಳು, ತಂದೆ&ತಾಯಿ, ಕುಟುಂಬ, ಅವರದೇ ಆದ ಜೀವನವಿದೆ ಅಲ್ವಾ? ಅವರನ್ನು ನಾವು ಸಪೋರ್ಟ್​ ಮಾಡಬಾರದಾ? ಅವರಿಗಿಂತ ಫಾಲೋವರ್ಸ್​ ನಮಗೆ ಮುಖ್ಯವಾಗುತ್ತಾರಾ?' ಎಂದು ಪ್ರಶ್ನಿಸುತ್ತಾ ಕಣ್ಣೀರು ಹಾಕಿದ್ದಾರೆ.

ಯಾಕೀ ಸಂಭ್ರಮ?

ಮತ್ತೊಂದೆಡೆ ನಟಿ ಐಂದ್ರಿತಾ ರೇ ನಿವಾಸದ ಬಳಿ ಶನಿವಾರ ತಡರಾತ್ರಿ ಕೆಲವರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಐಂದ್ರಿತಾ, "ಕಳೆದ ರಾತ್ರಿ, ಜೋರು ಪಟಾಕಿ ಸಿಡಿತದ ಶಬ್ದಗಳಿಂದ ಎಚ್ಚರವಾಯಿತು. ಸದ್ಯದ ಪರಿಸ್ಥಿತಿಯಲ್ಲಿ ಜೋರು ಶಬ್ದ ಕೇಳಿದರೆ ಸಾಕು, ಆತಂಕವುಂಟಾಗುವುದು ಸಾಮಾನ್ಯ. ಮಾಜಿ ಸೇನಾಧಿಕಾರಿಯ ಮಗಳಾಗಿ ತಮ್ಮ ಜೀವ ಲೆಕ್ಕಿಸದೇ ಗಡಿಯಲ್ಲಿ ನಮ್ಮನ್ನು ರಸುತ್ತಿರುವ ರಕ್ಷಣಾ ಪಡೆಗಳ ಸೇವೆಗೆ ನಾನು ಸದಾ ಕೃತಜ್ಞಳು ಹಾಗೂ ಅವರ ಮೇಲೆ ನನಗೆ ಅತಿಯಾದ ಗೌರವವಿದೆ. ಮನೆಯ ಬಳಿ ಶಬ್ದ ಕೇಳಿ ನನಗೆ ಗಡಿಭಾಗದಲ್ಲಿ ನೆಲೆಸಿರುವ ಜನ ನೆನಪಾದರು. ಅವರ ಮನೆಗಳ ಮೇಲೆ ಬಾಂಬ್​ ದಾಳಿಯಾಗುತ್ತಿದೆ. ಅವರು ಆಚರಣೆಗಿಂತ ಹೆಚ್ಚಾಗಿ ಆತಂಕದಲ್ಲಿ ದಿನ ದೂಡುತ್ತಿದ್ದಾರೆ. ಹೀಗೆ ಇಡೀ ದೇಶವೇ ಅನಿಶ್ಚಿತತೆ, ಆತಂಕದಲ್ಲಿರುವಾಗ ಕೆಲವರು ಪಟಾಕಿ ಸಿಡಿಸಿ ಸಂಭ್ರಮಿಸುತ್ತಿರುವುದು ನೋಡಿ ನನಗೆ ತೀವ್ರ ಬೇಸರವಾಯಿತು' ಎಂದು ಹೇಳಿಕೊಂಡಿದ್ದಾರೆ.

ಮೌನ ಮುರಿಯದ ತಾರೆಯರು

ಇನ್ನು ಆಪರೇಷನ್​ ಸಿಂಧೂರ ಪ್ರಾರಂಭವಾದಾಗಿನಿಂದಲೂ ಕೆಲ ತಾರೆಯರು ಈ ಬಗ್ಗೆ ತುಟಿ ಪಿಟಕ್​ ಅಂದಿಲ್ಲ. ಸಲ್ಮಾನ್​ ಖಾನ್​, ಶಾರುಖ್​ ಖಾನ್​, ಆಮಿರ್​ ಖಾನ್​, ಸೈಫ್ ಅಲಿ ಖಾನ್​ ಸೇರಿ ಹಲವರು ಮೌನವಹಿಸಿದ್ದಾರೆ. ಕದನ ವಿರಾಮ ಘೋಷಣೆಯಾದ ಬಳಿಕ ಜಾಲತಾಣದಲ್ಲಿ "ಥ್ಯಾಂಕ್​ ಗಾಡ್​' ಎಂದು ಬರೆದು ಮತ್ತೆ ಡಿಲೀಟ್​ ಮಾಡುವ ಮೂಲಕ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಮತ್ತೊಂದೆಡೆ ಸೈಫ್​ ಅಲಿ ಖಾನ್​ ಕೂಡ ಸೀಸ್​ಫೈರ್​ ಬಳಿಕ ಕೈಮುಗಿದು ಭಾರತದ ಬಾವುಟವನ್ನು ಜಾಲತಾಣದಲ್ಲಿ ಹಾಕಿಕೊಂಡಿದ್ದಾರಷ್ಟೆ.

ಬಾಲಿವುಡ್​ಗೆ ನೋ ಎಂಟ್ರಿ

ಫವಾದ್​ ಖಾನ್​, ಮಹೀರಾ ಖಾನ್​, ಹಾನಿಯಾ ಆಮಿರ್​, ಮಾವ್ರಾ ಹೊಕೇನ್​ ಸೇರಿ ಕೆಲ ಪಾಕಿಸ್ತಾನದ ಕಲಾವಿದರು ಬಾಲಿವುಡ್​ನಲ್ಲಿ ನಟಿಸಿದ್ದಾರೆ. ಆದರೆ, ಆಪರೇಷನ್​ ಸಿಂಧೂರ ಮತ್ತು ಭಾರತೀಯ ಸೇನೆಯ ವಿರುದ್ಧ ಕಿಡಿಕಾರಿದ್ದಾರೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ರೂಪಾಲಿ ಗಂಗೂಲಿ, ಅವಿನಾಶ್​ ಮಿಶ್ರಾ, ಹೀನಾ ಖಾನ್​, ಸರಭಿ ಚಂದನಾ, ಡೆವೊಲೀನಾ ಭಟ್ಟಾಚಾರ್ಜಿ, ಫಲಕ್​ ನಾಜ್​, ಅಭಿನವ್​ ಶುಕ್ಲಾ ಸೇರಿ ಕೆಲ ಬಿಟೌನ್​ ತಾರೆಯರು ಬಾಲಿವುಡ್​ ಸ್ಟಾರ್​ಗಳ ಮೌನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಪಾಕ್​ ಕಲಾವಿದರಿಗೆ "ಮೊದಲು ನಿಮ್ಮ ಸರ್ಕಾರಕ್ಕೆ ಭಯೋತ್ಪಾದನೆ ನಿಗ್ರಹಿಸಲು ತಿಳಿಸಿ ಹಾಗೇ ಕೆಲಸ ಹುಡುಕಿಕೊಂಡು ಇಲ್ಲಿಗೆ ಬರಬೇಡಿ' ಎಂದು ಚಾಟಿ ಬೀಸಿದ್ದಾರೆ. ಇನ್ನು "ಸನಮ್​ ತೇರಿ ಕಸಮ್​' ಚಿತ್ರದಲ್ಲಿ ಹರ್ಷವರ್ಧನ್​ ರಾಣೆ ಜತೆ ಪಾಕ್​ ನಟಿ ಮಾವ್ರಾ ಹೊಕೇನ್​ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಕೆಲ ದಿನಗಳ ಹಿಂದಷ್ಟೇ ಚಿತ್ರದ ಸೀಕ್ವೆಲ್​ ಘೋಷಣೆಯಾಗಿತ್ತು. ಯಾವಾಗಾ ಮಾವ್ರಾ ಭಾರತ ವಿರೋಧಿ ಹೇಳಿಕೆ ನೀಡಿದರೋ, ರಾಣೆ ಕಿಡಿಯಾಗಿದ್ದಾರೆ. ""ಸನಮ್​ ತೇರಿ ಕಸಮ್​ 2'ನಲ್ಲಿ ಆ ನಟಿ ಇದ್ದರೆ, ನಾನು ಆ ಚಿತ್ರದ ಭಾಗವಾಗಲು ಇಷ್ಟಪಡುವುದಿಲ್ಲ' ಎಂದು ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ. ಹಾಗೇ ವಾದ್​ ಖಾನ್​ ನಟಿಸಿದ್ದ ಬಾಲಿವುಡ್​ ಸಿನಿಮಾ "ಅಬೀರ್​ ಗುಲಾಲ್​' ಬಿಡುಗಡೆಯನ್ನು ತಂಡ ಹಿಂಪಡೆದಿದೆ.

ಅಮಿತಾಭ್​ ಖಡಕ್​ ಸಂದೇಶ

ಪಹಲ್ಗಾಮ್​ ದಾಳಿ ನಡೆದಾಗಿನಿಂದ ಬಾಲಿವುಡ್​ ಮೆಗಾಸ್ಟಾರ್​ ಅಮಿತಾಭ್​ ಬಚ್ಚನ್​ ಜಾಲತಾಣದಲ್ಲಿ ಮೌನವಹಿಸಿದ್ದರು. ಪ್ರತಿದಿನ ಏನಾದರೊಂದು ಟ್ವೀಟ್​ ಮಾಡುತ್ತಿದ್ದ ಅವರು, ಕಳೆದ 19 ದಿನಗಳಿಂದ ಖಾಲಿ ಟ್ವೀಟ್​ ಸಂಖ್ಯೆಯನ್ನಷ್ಟೇ ಬರೆದು ಪೋಸ್ಟ್​ ಮಾಡುತ್ತಿದ್ದರು. ಈ ಬಗ್ಗೆ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಅಮಿತಾಭ್​ ಮೌನ ಮುರಿದಿದ್ದಾರೆ. ತಮ್ಮ ತಂದೆ ಹರಿವಂಶ್​ ರಾಯ್​ ಬಚ್ಚನ್​ ಬರೆದಿದ್ದ "ಅಗ್ನೀಪಥ್​' ಕವನದ ಸಾಲುಗಳ ಜತೆಗೆ ಆಪರೇಷನ್​ ಸಿಂಧೂರ ಕಾರ್ಯಾಚರಣೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.