ಸಿನಿವಾಣಿ

ಸಾಮಾನ್ಯ ಮನುಷ್ಯನ ಹೃದಯವೈಶಾಲ್ಯ: ಬೈರಾಗಿ ನಿರಾಸೆ ಮಾಡಲ್ಲ ಅಂತಾರೆ ಶಿವರಾಜಕುಮಾರ್..

Webdesk - Ravikanth

‘ಎಷ್ಟರ ಮಟ್ಟಿಗೆ ಹೋಗುತ್ತದೆ ನನಗೆ ಗೊತ್ತಿಲ್ಲ. ಆದರೆ, ನಿರಾಸೆ ಮಾಡಲ್ಲ ಅಂತ ನಂಬಿಕೆ ಇದೆ ...’

ಶಿವರಾಜಕುಮಾರ್ ಹೀಗೆ ಹೇಳಿದ್ದು ತಮ್ಮ ಹೊಸ ಚಿತ್ರದ ಬಗ್ಗೆ. ‘ಬೈರಾಗಿ’ ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿನ ತಮ್ಮ ಪಾತ್ರದ ಕುರಿತು ಮಾತನಾಡಿರುವ ಶಿವರಾಜಕುಮಾರ್, ‘ನಾನಿಲ್ಲಿ ಒಬ್ಬ ಸಾಮಾನ್ಯ ಮನುಷ್ಯನಾಗಿ ಕಾಣಿಸಿಕೊಂಡಿದ್ದೇನೆ. ಸಾಮಾನ್ಯನಾದರೂ ಹೃದಯ ವೈಶಾಲ್ಯವಿರುವ ವ್ಯಕ್ತಿ. ಆತನ ಜೀವನದಲ್ಲಿ ಅಹಿತಕರ ಘಟನೆಯೊಂದು ನಡೆದಾಗ, ಹೇಗೆ ವ್ಯಘ್ರನಾಗುತ್ತಾನೆ ಎಂಬುದೇ ಕಥೆ’ ಎಂದು ಚಿತ್ರದ ಬಗ್ಗೆ ಹೇಳುತ್ತಾರೆ ಅವರು.

ಈ ಚಿತ್ರಕ್ಕೆ ಎಷ್ಟು ಬೇಕೋ ಅಷ್ಟು ಆಡಂಬರ ಖಂಡಿತಾ ಇದೆ ಎನ್ನುವ ಶಿವರಾಜಕುಮಾರ್, ‘ಇಷ್ಟು ಕೋಟಿ ಖರ್ಚು ಮಾಡಿದರೆ ಮಾತ್ರ ಆಡಂಬರ ಅಂತ ಹೇಳೋಕೆ ಆಗಲ್ಲ. ಈ ಸಿನಿಮಾಗೆ ಚೆನ್ನಾಗಿಯೇ ಖರ್ಚು ಮಾಡಿದ್ದಾರೆ. ನಿರ್ದೇಶಕರು ಛಾಯಾಗ್ರಾಹಕರೂ ಆಗಿರುವುದರಿಂದ ಅವರಿಗೆ ಬೇರೆಯದೇ ಕಲ್ಪನೆ ಇರುತ್ತದೆ. ಆ ಕಲ್ಪನೆಗೆ ನಿರ್ವಪಕರು ನ್ಯಾಯ ಒದಗಿಸಿದ್ದಾರೆ’ ಎನ್ನುತ್ತಾರೆ ಶಿವರಾಜಕುಮಾರ್. ಶಿವರಾಜಕುಮಾರ್ ಅಭಿನಯದ ಚಿತ್ರವೊಂದು ಎಂಟು ತಿಂಗಳ ನಂತರ ಬಿಡುಗಡೆಯಾಗುತ್ತಿದೆ. ಹಾಗಾಗಿ, ‘ಬೈರಾಗಿ’ಯನ್ನು ದೊಡ್ಡ ಮಟ್ಟದಲ್ಲೇ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ತಯಾರಿ ನಡೆಸಿದೆ.

ಚಿತ್ರವು ರಾಜ್ಯಾದ್ಯಂತ 400 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದ್ದು, ಶುಕ್ರವಾರ ಬೆಳಿಗ್ಗೆಯೇ ಸುಮಾರು 25 ಕೇಂದ್ರಗಳಲ್ಲಿ ಅಭಿಮಾನಿಗಳಿಗೆ ವಿಶೇಷ ಪ್ರದರ್ಶನ ಆಯೋಜಿಸಲಾಗಿದೆ. ಪ್ರಮುಖ ಚಿತ್ರಮಂದಿರಗಳಲ್ಲಿ ಬಿಡುಗಡೆಯ ದಿನ ಆರು ಪ್ರದರ್ಶನ ನಡೆಯಲಿದೆ. ಇನ್ನು, ಶಿವರಾಜಕುಮಾರ್ ಅವರ 60ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಮೈಸೂರಿನ ಸಂಗಮ್ ಚಿತ್ರಮಂದಿರದಲ್ಲಿ 60 ಅಡಿ ಕಟೌಟ್ ನಿಲ್ಲಿಸಲಾಗುತ್ತಿದೆ. ‘ಬೈರಾಗಿ’ ಚಿತ್ರದಲ್ಲಿ ಶಿವರಾಜಕುಮಾರ್ ಜತೆಗೆ ಧನಂಜಯ, ಪೃಥ್ವಿ ಅಂಬರ್, ಯಶಾ ಶಿವಕುಮಾರ್, ಅಂಜಲಿ ಮುಂತಾದವರು ನಟಿಸಿದ್ದು, ವಿಜಯ್ ಮಿಲ್ಟನ್ ನಿರ್ದೇಶನ ಮಾಡಿದ್ದಾರೆ. ಕೃಷ್ಣ ಸಾರ್ಥಕ್ ಚಿತ್ರ ನಿರ್ವಿುಸಿರುವ ‘ಬೈರಾಗಿ’, ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿರುವ 50ನೇ ಚಿತ್ರ.