ಬೆಂಗಳೂರು: ‘ಕೌಸಲ್ಯ ಸುಪ್ರಜಾ ರಾಮ’ ಯಶಸ್ಸಿನ ಬಳಿಕ ನಟ ಡಾರ್ಲಿಂಗ್ ಕೃಷ್ಣ- ನಿರ್ದೇಶಕ ಶಶಾಂಕ್ ‘ಬ್ರ್ಯಾಟ್’ ಮೂಲಕ ಒಂದಾಗಿರುವುದು ಗೊತ್ತೇ ಇದೆ. ಈಗಾಗಲೇ ಜವಾರಿ ‘ಗಂಗಿ ಗಂಗಿ’ ಹಾಗೂ ‘ನಾನೇ ನೀನಂತೆ’ ಎರಡು ಹಾಡುಗಳು ಮತ್ತು ಟೀಸರ್ ಮೂಲಕ ಸದ್ದು ಮಾಡಿರುವ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ನಟ ಕಿಚ್ಚ ಸುದೀಪ ಟ್ರೇಲರ್ ರಿಲೀಸ್ ಮಾಡಿ, ‘ಶಶಾಂಕ್ ಒಳ್ಳೆಯ ಕಥೆಗಾರ. ಡಾರ್ಲಿಂಗ್ ಕೃಷ್ಣ ಕೂಡ ಒಳ್ಳೆಯ ನಟ. ಇಬ್ಬರ ಕಾಂಬಿನೇಶನ್‌ನಲ್ಲಿ ಬಂದಿದ್ದ ‘ಕೌಸಲ್ಯ ಸುಪ್ರಜಾ ರಾಮ’ ಯಶಸ್ಸು ಗಳಿಸಿತ್ತು. ಅದರಂತೆ ಈ ಚಿತ್ರ ಕೂಡ ಸೂಪರ್ ಹಿಟ್ ಆಗಲಿದೆ’ ಎಂದು ಶುಭ ಹಾರೈಸಿದರು. ನಿರ್ದೇಶಕ ಶಶಾಂಕ್, ‘ನನಗೆ, ಕೃಷ್ಣನಿಗೆ ಸುದೀಪ್ ಸರ್ ತುಂಬಾ ಲಕ್ಕಿ. ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರದ ಟ್ರೇಲರ್ ಕೂಡ ಸುದೀಪ್ ಅವರಿಂದ ರಿಲೀಸ್ ಆಗಿತ್ತು. ಆ ಸಿನಿಮಾ ಹಿಟ್ ಆಗಿತ್ತು. ಈಗ ಅವರ ಕೈಯಿಂದ ‘ಬ್ರ್ಯಾಟ್’ ಟ್ರೇಲರ್ ರಿಲೀಸ್ ಆಗಿದ್ದು, ಇದು ಕೂಡ ಹಿಟ್ ಆಗುವ ನಂಬಿಕೆಯಿದೆ. ಈ ಚಿತ್ರವನ್ನು ನಾವು ಪ್ಯಾನ್ ಇಂಡಿಯಾ ರೂಪದಲ್ಲಿ ನಿರ್ಮಾಣ ಮಾಡಿದ್ದು, ಅದೇ ತರಹ ಈವರೆಗೂ ಟೀಸರ್ ಮತ್ತು ಹಾಡುಗಳನ್ನು ಎಲ್ಲ ಭಾಷೆಗಳಲ್ಲೂ ರಿಲೀಸ್ ಮಾಡಿದ್ದೆವು. ಆದರೆ, ಇಂದು ಕನ್ನಡದಲ್ಲಿ ಮಾತ್ರ ಟ್ರೇಲರ್ ಬಿಡುಗಡೆ ಮಾಡುತ್ತಿದ್ದೇವೆ. ಕೆಲ ದಿನಗಳಲ್ಲಿ ಬೇರೆ ಭಾಷೆಗಳ ಟ್ರೇಲರ್ ಅನಾವರಣವಾಗಲಿದೆ’ ಎಂದು ಮಾಹಿತಿ ನೀಡಿದರು. ನಾಯಕ ಡಾರ್ಲಿಂಗ್ ಕೃಷ್ಣ, ‘ಮೊದಲು ಶಶಾಂಕ್ ನಾಲ್ಕೈದು ಕಥೆಗಳನ್ನು ಹೇಳಿದ್ದರು. ಅದರಲ್ಲಿ ಇದು ನನಗೆ ಇಷ್ಟವಾಗಿದ್ದು’ ಎಂದರು. ಇಲ್ಲಿ ಕೃಷ್ಣಗೆ ಮನಿಷ ಕಂದಕೂರ್ ಜೋಡಿಯಾಗಿದ್ದಾರೆ. ರಮೇಶ್ ಇಂದಿರಾ, ಡ್ರ್ಯಾಗನ್ ಮಂಜು ಕಲಾಬಳಗದಲ್ಲಿದ್ದಾರೆ. ಮಂಜುನಾಥ್ ಕಂದಕೂರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ‘ಬ್ರ್ಯಾಟ್’ ಇದೇ ತಿಂಗಳ 31ರಂದು ತೆರೆಗೆ ಬರಲಿದೆ.