ಸಿನಿವಾಣಿ

ಮೌನ ಮುರಿದ ಮಾಜಿ ದಂಪತಿ...

ಏಳು ವರ್ಷಗಳ ಪ್ರೀತಿ, ನಾಲ್ಕು ವರ್ಷಗಳ ದಾಂಪತ್ಯ ಜೀವನದ ಬಳಿಕ ಸಮಂತಾ ಮತ್ತು ನಾಗಚೈತನ್ಯ ದೂರಾಗಿ ಒಂದು ವರ್ಷವಾಗಿದೆ. 2021ರ ಅಕ್ಟೋಬರ್ 2ರಂದು ಸಾಮಾಜಿಕ ಜಾಲತಾಣದಲ್ಲಿ ಇಬ್ಬರೂ ದೂರವಾಗುತ್ತಿರುವ ಬಗ್ಗೆ ಬರೆದುಕೊಂಡಿದ್ದ ಮಾಜಿ ದಂಪತಿ, ಮತ್ತೆ ಆ ಬಗ್ಗೆ ಎಲ್ಲೂ ತುಟಿ ಪಿಟಕ್ ಎಂದಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಸಮಂತಾ ಹಾಗೂ ನಾಗ್ ಮುರಿದುಬಿದ್ದ ಮದುವೆ ಬಗ್ಗೆ ಮೌನ ಮುರಿದಿದ್ದಾರೆ.

ಸಮಂತಾ ನಿರ್ದೇಶಕ ಕರಣ್ ಜೋಹರ್​ರ ಟಾಕ್​ಶೋನಲ್ಲಿ ನಾಗಚೈತನ್ಯ ಬಗ್ಗೆ ಕೇಳಿದಾಗ, ‘ನಮ್ಮಿಬ್ಬರನ್ನೂ ಒಂದು ಕೋಣೆಯೊಳಗೆ ಕೂಡಿ ಹಾಕಿದರೆ, ಅಲ್ಲಿ ಹರಿತವಾದ ವಸ್ತುಗಳು ಕೈಗೆ ಸಿಗದಂತೆ ನೋಡಿಕೊಳ್ಳಬೇಕಾಗುತ್ತದೆ’ ಎಂದಿದ್ದಾರೆ. ಹಾಗೆಯೇ ಮದುವೆಯ ಬಗ್ಗೆ ಮಾತನಾಡುತ್ತಾ, ‘ಅದರ ಬಗ್ಗೆ ದೂರುವುದಿಲ್ಲ. ನಾನು ಏನೂ ಮುಚ್ಚಿಟ್ಟಿಲ್ಲ. ದೂರಾಗುವ ಸಂದರ್ಭ ಬಂದಾಗಲೂ ಸಹ ಮುಕ್ತವಾಗಿಯೇ ಇದ್ದೆ. ಹೆಚ್ಚು ಬೇಸರವನ್ನೂ ಮಾಡಿಕೊಳ್ಳಲಿಲ್ಲ. ಈಗ ನಾನು ಹಿಂದೆಂದಿಗಿಂತಲೂ ಗಟ್ಟಿಯಾಗಿದ್ದೇನೆ’ ಎಂದಿದ್ದಾರೆ.

250 ಕೋಟಿ ರೂ. ಜೀವನಾಂಶ ಪಡೆದ ಸುದ್ದಿ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ‘ಆದಾಯ ತೆರಿಗೆ ಅಧಿಕಾರಿಗಳು ಬಂದು ಪರಿಶೀಲಿಸಲಿ’ ಎಂದು ನಕ್ಕಿದ್ದಾರೆ. ಮತ್ತೊಂದೆಡೆ ನಟ ನಾಗಚೈತನ್ಯ ಕೂಡ ‘ನಾನೀಗ ಸಂಪೂರ್ಣವಾಗಿ ಬದಲಾಗಿದ್ದೇನೆ. ಕುಟುಂಬ ಹಾಗೂ ಗೆಳೆಯರಿಗೆ ಮತ್ತಷ್ಟು ಹತ್ತಿರವಾಗಿದ್ದೇನೆ. ನನ್ನನ್ನು ನಾನು ಹೊಸ ವ್ಯಕ್ತಿಯನ್ನಾಗಿ ನೋಡುತ್ತಿರುವುದು ಬಹಳ ಖುಷಿ ನೀಡಿದೆ’ ಎಂದಿದ್ದಾರೆ. -ಏಜೆನ್ಸೀಸ್