ಮುಂಬೈ: ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನಪ್ಸ್ ಸಿನಿಮಾ ನಂತರ ರಾಕಿಂಗ್ ಸ್ಟಾರ್ ಯಶ್ (Rocking Star Yash) ನಿತೇಶ್ ತಿವಾರಿ ನಿರ್ದೇಶನದ ಬಹು ನಿರೀಕ್ಷಿತ ರಾಮಾಯಣ ಸಿನಿಮಾದಲ್ಲಿ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲು ಸಿದ್ಧರಾಗಿದ್ದಾರೆ.
ರಾವಣನ ಪಾತ್ರಕ್ಕಾಗಿ ಯಶ್ಗೆ ಸುಮಾರು 100 ಕೋಟಿ ಸಂಭಾವನೆ ನೀಡಲಾಗಿದೆ ಎಂದು ಈ ಮೊದಲು ಹೇಳಲಾಗಿತ್ತು. ಆದರೀಗ, ಯಶ್ ಈ ನೂರು ಕೋಟಿ ಸಂಭಾವನೆಯನ್ನು ತ್ಯಜಿಸಲು ಮುಂದಾಗಿದ್ದಾರೆಂಬ ವರದಿ ಕೇಳಿಬರುತ್ತಿದೆ.
ಸಂಭಾವನೆ ಬದಲು ಡಿಸ್ಟ್ರಿಬ್ಯೂಶನ್!
ನಿತೇಶ್ ತಿವಾರಿ ನಿರ್ದೇಶನ ಹಾಗೂ ನಮಿತ್ ಮಲೋತ್ರಾ ನಿರ್ಮಾಣದಲ್ಲಿ ಮೂಡಿಬರಲಿರುವ ರಾಮಾಯಣ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ಪಾತ್ರಕ್ಕಾಗಿ ನೂರು ಕೋಟಿ ನೀಡಲು ಸಿನಿತಂಡ ಒಪ್ಪಿಕೊಂಡಿದ್ದರೆ, ಯಶ್ ದಕ್ಷಿಣ ಭಾರತದ ಡಿಸ್ಟ್ರಿಬ್ಯೂಶನ್ ಹಕ್ಕನ್ನು ತಮಗೆ ನೀಡಬೇಕಾಗಿ ಬೇಡಿಕೆ ಇಟ್ಟಿದ್ದಾರೆಂದು ಹೇಳಲಾಗುತ್ತಿದೆ. ಇದರ ಬದಲಿಗೆ ಸಂಭಾವನೆ ತ್ಯಾಗಕ್ಕೆ ನಟ ಮುಂದಾಗಿದ್ದಾರೆಂದು ತಿಳಿದು ಬಂದಿದೆ.
ರಾಮಾಯಣ ಈ ಸಿನಿಮಾ ಎರಡು ಭಾಗಗಳಲ್ಲಿ ಮೂಡಿಬರುತ್ತಿದ್ದು, ಮೊದಲ ಭಾಗ ನವೆಂಬರ್ 6, 2026 ರಂದು ಬಿಡುಗಡೆಯಾದರೆ, ಮುಂದಿನ ಭಾಗ 2027 ರ ದೀಪಾವಳಿಗೆ ತೆರೆಕಾಣಲಿದೆ. ಹಿಂದಿ ಸೇರಿದಂತೆ ಕನ್ನಡ, ತೆಲುಗು, ತಮಿಳು, ಮಳಿಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಹೀಗಾಗಿ ಯಶ್ ದಕ್ಷಿಣ ಭಾರತದಲ್ಲಿ ಸಿನಿಮಾದ ಡಿಸ್ಟ್ರಿಬ್ಯೂಶನ್ ಜವಾಬ್ದಾರಿ ಕೇಳಿದ್ದಾರೆಂದು ಹೇಳಲಾಗುತ್ತಿದೆ.
ಅಧಿಕೃತ ಹೇಳಿಕೆ ಬಂದಿಲ್ಲ!
ಆದರೆ, ಈ ದಕ್ಷಿಣ ಭಾರತದ ಡಿಸ್ಟ್ರಿಬ್ಯೂಶನ್ ಹಕ್ಕನ್ನು ತಾವು ಪಡೆದ ಬಗ್ಗೆ ನಟ ಯಶ್ ಆಗಲೀ, ಯಶ್ಗೆ ಸಿನಿಮಾದ ಡಿಸ್ಟ್ರಿಬ್ಯೂಶನ್ ಹಕ್ಕನ್ನು ನೀಡಿದ್ದಾಗಿ ನಿರ್ಮಾಪಕರಾಗಲಿ ಈ ವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಹೀಗಾಗಿ ಇದನ್ನೊಂದು ಅಧಿಕೃತ ಮಾಹಿತಿ ಎನ್ನುವುದಕ್ಕಿಂತ ವದಂತಿ ಎಂದೇ ಪರಿಗಣಿಸುವುದು ಸೂಕ್ತವಾಗಿರುತ್ತದೆ.
ದೀಪಾವಳಿಗೆ 'ರಾಮಾಯಣ'!
ನಮಿತ್ ಮಲೋತ್ರಾ ನಿರ್ಮಾಣದ, ಮನೋಜ್ ತಿವಾರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ರಾಮಾಯಣ ಸಿನಿಮಾ ಎರಡು ಭಾಗದಲ್ಲಿ ಬಿಡುಗಡೆಯಾಗಲಿ ಎಂದು ಸಿನಿ ತಂಡ ಈಗಾಗಲೇ ತಿಳಿಸಿದೆ. 2026 ರ ದೀಪಾವಳಿಗೆ ಸಿನಿಮಾದ ಮೊದಲ ಭಾಗ ತೆರೆಕಂಡರೆ, 2027 ರ ದೀಪಾವಳಿಗೆ ಎರಡನೇ ಭಾಗ ಬಿಡುಗಡೆಯಾಗಲಿದೆ.
ಈ ಸಿನಿಮಾದಲ್ಲಿ ಪ್ರಭು ಶ್ರೀರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ಕಾಣಿಸಿಕೊಂಡರೆ, ರಾವಣನಾಗಿ ಯಶ್, ಸೀತೆಯಾಗಿ ಸಾಯಿ ಪಲ್ಲವಿ, ಹನುಮನಾಗಿ ಸನ್ನಿ ಡಿಯೋಲ್ ಮಿಂಚಲಿದ್ದಾರೆ. ಇವರು ಜೊತೆ ಪ್ರತಿಯೊಂದು ಪಾತ್ರದಲ್ಲಿ ಖ್ಯಾತನಾಮರೇ ಅಭಿನಯಿಸಲಿದ್ದು, ಈ ಸಿನಿಮಾದ ಬಜೆಟ್ ಸುಮಾರು 4,000 ಕೋಟಿ ಎಂದು ಹೇಳಲಾಗುತ್ತಿದೆ, (ಏಜನ್ಸೀಸ್).