38ನೇ ವಸಂತಕ್ಕೆ ಕಾಲಿಟ್ಟ ಯಾಮಿ ಗೌತಮ್ WEB
ಬಾಲಿವುಡ್

38ನೇ ವಸಂತಕ್ಕೆ ಕಾಲಿಟ್ಟ ಯಾಮಿ ಗೌತಮ್: ಆದಿತ್ಯ ಧರ್ ಪ್ರೀತಿಯ ಸಂದೇಶ ವೈರಲ್! Yami Gautam

ಬಾಲಿವುಡ್ ನಟಿ ಯಾಮಿ ಗೌತಮ್ ಇಂದು ತಮ್ಮ 38ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ವಿಶೇಷ ದಿನದಂದು ಪತಿ ಹಾಗೂ ಖ್ಯಾತ ನಿರ್ದೇಶಕ ಆದಿತ್ಯ ಧರ್ ಪ್ರೀತಿಯ ಶುಭಾಶಯಗಳನ್ನು ತಿಳಿಸಿದ್ದು, ಪತ್ನಿಗಾಗಿ ಬರೆದಿರುವ ಭಾವುಕ ಸಂದೇಶ ಇದೀಗ ಅಭಿಮಾನಿಗಳ ಗಮನ ಸೆಳೆದಿದೆ. ಯಾಮಿಯನ್ನು ತಾನು ಕಂಡ ಅತ್ಯಂತ ಸುಂದರ ಮಹಿಳೆ ಎಂದು ಬಣ್ಣಿಸಿರುವ ಆದಿತ್ಯ, ಆಕೆ ತಮ್ಮ ಬದುಕಿನಲ್ಲಿ ವಹಿಸಿರುವ ಪಾತ್ರವನ್ನು ಮನದಾಳದ ಮಾತುಗಳ ಮೂಲಕ ವ್ಯಕ್ತಪಡಿಸಿದ್ದಾರೆ.

ಮುಂಬೈ: ಬಾಲಿವುಡ್ ನಟಿ ಯಾಮಿ ಗೌತಮ್ ಇಂದು ತಮ್ಮ 38ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ವಿಶೇಷ ದಿನದಂದು ಪತಿ ಹಾಗೂ ಖ್ಯಾತ ನಿರ್ದೇಶಕ ಆದಿತ್ಯ ಧರ್ ಪ್ರೀತಿಯ ಶುಭಾಶಯಗಳನ್ನು ತಿಳಿಸಿದ್ದು, ಪತ್ನಿಗಾಗಿ ಬರೆದಿರುವ ಭಾವುಕ ಸಂದೇಶ ಇದೀಗ ಅಭಿಮಾನಿಗಳ ಗಮನ ಸೆಳೆದಿದೆ. ಯಾಮಿಯನ್ನು ತಾನು ಕಂಡ ಅತ್ಯಂತ ಸುಂದರ ಮಹಿಳೆ ಎಂದು ಬಣ್ಣಿಸಿರುವ ಆದಿತ್ಯ, ಆಕೆ ತಮ್ಮ ಬದುಕಿನಲ್ಲಿ ವಹಿಸಿರುವ ಪಾತ್ರವನ್ನು ಮನದಾಳದ ಮಾತುಗಳ ಮೂಲಕ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಯಾಮಿ ಜೊತೆಗಿನ ಹಲವು ವೈಯಕ್ತಿಕ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿರುವ ಆದಿತ್ಯ, ಹುಟ್ಟುಹಬ್ಬದ ಶುಭಾಶಯಗಳು ಯಾಮಿ. ನಾನು ಕಂಡ ಅತ್ಯಂತ ಸುಂದರ ಮಹಿಳೆ ನೀನು. ನಿನ್ನ ನಗು ಕೇವಲ ಒಂದು ಕೊಠಡಿಯನ್ನು ಬೆಳಗಿಸುವುದಿಲ್ಲ, ನನ್ನ ಇಡೀ ಜಗತ್ತಿಗೇ ಬೆಳಕು ನೀಡುತ್ತದೆ. ನೀನು ನನ್ನ ಮನೆ, ನನ್ನ ದೊಡ್ಡ ಶಕ್ತಿ, ನನ್ನ ಪ್ರಬಲ ಬೆಂಬಲ. ಇಂದು ನಾನು ಯಾವ ವ್ಯಕ್ತಿಯಾಗಿದ್ದೇನೋ ಅದಕ್ಕೆ ನೀನೇ ಕಾರಣ ಎಂದು ಬರೆದುಕೊಂಡಿದ್ದಾರೆ.

ಕುಟುಂಬದ ಮೇಲೆ ಯಾಮಿ ತೋರುವ ಪ್ರೀತಿ ಹಾಗೂ ಪ್ರತಿಯೊಂದು ಕೆಲಸದಲ್ಲೂ ಆಕೆ ನೀಡುವ ಶ್ರಮವನ್ನು ಕೊಂಡಾಡಿರುವ ಅವರು, ನೀನು ಎಲ್ಲವನ್ನೂ ಹೇಗೆ ನಿಭಾಯಿಸುತ್ತೀಯೋ ನನಗೆ ಇಂದಿಗೂ ಅಚ್ಚರಿಯಾಗುತ್ತದೆ. ಅಷ್ಟೆಲ್ಲದರ ನಡುವೆ ನನ್ನನ್ನೂ ಸಹಿಸಿಕೊಳ್ಳುತ್ತೀಯಲ್ಲ ಎಂದು ಪ್ರೀತಿಯಿಂದ ತಮಾಷೆ ಮಾಡಿದ್ದಾರೆ.

ನಿನ್ನ ಕೈ ಹಿಡಿದು ಜೀವನಪೂರ್ತಿ ನಡೆಯಲು, ನಿನ್ನನ್ನು ಪ್ರೋತ್ಸಾಹಿಸಲು ಮತ್ತು ಮತ್ತೆ ಮತ್ತೆ ನಿನ್ನ ಪ್ರೀತಿಯಲ್ಲಿ ಬೀಳಲು ಕಾಯುತ್ತಿದ್ದೇನೆ ಎಂದು ಆದಿತ್ಯ ಬರೆದುಕೊಂಡಿದ್ದಾರೆ. ಕೊನೆಯಲ್ಲಿ ತಮ್ಮನ್ನು ತಾವು ಯಾಮಿ ಪಗ್ಲು ಎಂದು ಕರೆದುಕೊಂಡಿರುವುದು ಅಭಿಮಾನಿಗಳಲ್ಲಿ ಮತ್ತಷ್ಟು ಮೆಚ್ಚುಗೆ ಮೂಡಿಸಿದೆ.

38ನೇ ವಸಂತಕ್ಕೆ ಕಾಲಿಟ್ಟ ಯಾಮಿ ಗೌತಮ್

ಉರಿ ಸಿನಿಮಾದಲ್ಲಿ ಶುರುವಾದ ಪರಿಚಯ

ಯಾಮಿ ಗೌತಮ್ ಮತ್ತು ಆದಿತ್ಯ ಧರ್ ಅವರ ಪರಿಚಯಕ್ಕೆ ಕಾರಣವಾಗಿದ್ದು 2019ರಲ್ಲಿ ಬಿಡುಗಡೆಯಾದ 'ಉರಿ: ದಿ ಸರ್ಜಿಕಲ್ ಸ್ಟ್ರೈಕ್' ಸಿನಿಮಾ. ಇದು ಆದಿತ್ಯ ಧರ್ ನಿರ್ದೇಶಕರಾಗಿ ಮೊದಲ ಬಾರಿಗೆ ಕೆಲಸ ಮಾಡಿದ ಚಿತ್ರವಾಗಿತ್ತು. ವಿಕ್ಕಿ ಕೌಶಲ್ ನಾಯಕನಾಗಿ ನಟಿಸಿದ್ದ ಈ ಸಿನಿಮಾದಲ್ಲಿ ಯಾಮಿ ರಹಸ್ಯ ಕಾರ್ಯಾಚರಣೆ ನಡೆಸುವ RAW ಏಜೆಂಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು. ಈ ಸ್ನೇಹ ಕ್ರಮೇಣ ಪ್ರೀತಿಗೆ ತಿರುಗಿ, ಇಬ್ಬರೂ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು. ತಮ್ಮ ಪ್ರೇಮಕಥೆಯ ಬಗ್ಗೆ ಹಿಂದೆ ಮಾತನಾಡಿದ್ದ ಯಾಮಿ, ಯಾವುದೇ ಅದ್ಧೂರಿ ಪ್ರಪೋಸಲ್ ಅಥವಾ ಸಿನಿಮೀಯ ಪ್ರೇಮದ ಕ್ಷಣಗಳು ಇರಲಿಲ್ಲ. ಮಾತುಕತೆಯಿಂದ ಆರಂಭವಾದ ಸ್ನೇಹವೇ ಮುಂದೆ ದಾಂಪತ್ಯಕ್ಕೆ ಕಾರಣವಾಯಿತು ಎಂದು ಹೇಳಿಕೊಂಡಿದ್ದರು.

ನನ್ನ ಪಾಲಿಗೆ ಅದೇ ಸಂಭಾವನೆ ಎಂದಿದ್ದ ಯಾಮಿ

ಆದಿತ್ಯ ನಿರ್ದೇಶನದ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದಕ್ಕಾಗಿ ಯಾಮಿ ದೊಡ್ಡ ಮೊತ್ತದ ಸಂಭಾವನೆ ಪಡೆದಿದ್ದಾರೆ ಎಂಬ ವರದಿಗಳೂ ಈ ಹಿಂದೆ ಹರಿದಾಡಿದ್ದವು. ಈ ಬಗ್ಗೆ ಮಾತನಾಡಿದ್ದ ಅವರು, ಖ್ಯಾತ ನಿರ್ದೇಶಕರೊಬ್ಬರ ನಿರ್ದೇಶನದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದ್ದೇ ತಮ್ಮ ಪಾಲಿನ ದೊಡ್ಡ ಸಂಭಾವನೆ ಎಂದು ಹೇಳಿ ವದಂತಿಗಳಿಗೆ ನಗುತ್ತಲೇ ಉತ್ತರಿಸಿದ್ದರು.

'ಉರಿ: ದಿ ಸರ್ಜಿಕಲ್ ಸ್ಟ್ರೈಕ್', 'ಆರ್ಟಿಕಲ್ 370' ಸೇರಿದಂತೆ ಹಲವು ಸಿನಿಮಾಗಳ ಮೂಲಕ ಯಾಮಿ ಗುರುತಿಸಿಕೊಂಡಿದ್ದಾರೆ. ಇತ್ತ ಆದಿತ್ಯ ಧರ್ 'ಧುರಂಧರ್' ಫ್ರಾಂಚೈಸಿ ಮೂಲಕ ನಿರ್ದೇಶಕರಾಗಿ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಯಾಮಿ ತಮ್ಮ ಜೀವನಕ್ಕೆ ಬಂದ ನಂತರ ಅದೃಷ್ಟವೇ ಬದಲಾಗಿದೆ ಎಂದು ಆದಿತ್ಯ ಈ ಹಿಂದೆಯೂ ಪತ್ನಿಯನ್ನು ತಮ್ಮ ಲೇಡಿ ಲಕ್ ಎಂದು ಕರೆದಿದ್ದರು. ಇದೀಗ ಹುಟ್ಟುಹಬ್ಬದಂದು ಹಂಚಿಕೊಂಡಿರುವ ಪ್ರೀತಿಯ ಸಂದೇಶ ಮತ್ತೊಮ್ಮೆ ಈ ಜೋಡಿಯ ಸುಂದರ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ.