ಬಾಲಿವುಡ್

ಆರ್ಯನ್ ಖಾನ್ ಜೊತೆ ಬ್ರೆಜಿಲಿಯನ್ ಚೆಲುವೆಯ ಡೇಟಿಂಗ್​ ವದಂತಿ; ಯಾರೀ ಲಾರಿಸ್ಸಾ ಬೊನೆಸಿ?..Aryan Khan

  • ಶಾರುಖ್​ ಖಾನ್ ಪುತ್ರ ಆರ್ಯನ್​ ಖಾನ್​ ಜೊತೆಗೆ ಕಾಣಿಸಿಕೊಳ್ಳುತ್ತಿರುವ ಲಾರಿಸ್ಸಾ ಬೊನೆಸಿ ಯಾರು?.

  • ಮಾಡೆಲಿಂಗ್, ಬಾಲಿವುಡ್, ದಕ್ಷಿಣ ಭಾರತದ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಲಾರಿಸ್ಸಾ

  • ಆರ್ಯನ್​ ಖಾನ್​ಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಲಾರಿಸ್ಸಾ, ಇಬ್ಬರ ಮಧ್ಯೆ ಪ್ರೀತಿ ವದಂತಿ

Who Is Larissa Bonesi: 'ದೇಸಿ ಬಾಯ್ಸ್' ಚಿತ್ರದ 'ಮೂಲಕ ಭಾರತೀಯ ಸಿನಿಮಾ ರಂಗಕ್ಕೆ ಕಾಲಿಟ್ಟ ಬ್ರೆಜಿಲಿಯನ್ ಮಾಡೆಲ್ ಮತ್ತು ನಟಿ ಲಾರಿಸ್ಸಾ ಬೊನೆಸಿ, ತೆಲುಗು ಸಿನಿಮಾ ರಂಗದಲ್ಲಿಯೂ ತಮ್ಮದೇ ಆದ ಹೆಸರು ಮಾಡಿದ್ದಾರೆ. ಸದ್ಯ ಶುರುವಾಗಿರುವ ಗುಸು ಗುಸು ಎಂದರೆ ಅವರು ಬಾಲಿವುಡ್​ನ ಬಾದ್​ ಶಾ ಶಾರುಖ್​ ಖಾನ್​ ಅವರ ಪುತ್ರ ಆರ್ಯನ್​ ಖಾನ್​ರೊಂದಿಗೆ ಡೇಟಿಂಗ್​ನಲ್ಲಿದ್ದಾರೆ ಎನ್ನುವುದು.

ಆದರೆ, ಲಾರಿಸ್ಸಾ ಬೊನೆಸಿ ಮತ್ತು ಆರ್ಯನ್​ ಖಾನ್​​​ ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ಎಲ್ಲಿಯೂ ಅಧಿಕೃತವಾಗಿ ಒಪ್ಪಿಕೊಂಡಿಲ್ಲ. ಹೀಗಿದ್ದರೂ ಆರ್ಯನ್ ಅವರಿಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಲಾರಿಸ್ಸಾ ಕಾಣಿಸಿಕೊಳ್ಳುತ್ತಿರುವುದು ಸಾಕಷ್ಟು ಊಹಾಪೋಹಕ್ಕೆ ಎಡೆ ಮಾಡಿಕೊಟ್ಟಿದೆ.

ಮಾಡೆಲಿಂಗ್, ಬಾಲಿವುಡ್, ದಕ್ಷಿಣ ಭಾರತದ ಸಿನಿಮಾಗಳು ಮತ್ತು ಮ್ಯೂಸಿಕ್ ವಿಡಿಯೋಗಳ ಮೂಲಕ ಲಾರಿಸ್ಸಾ ತಮ್ಮದೇ ಆದ ವೃತ್ತಿಜೀವನವನ್ನು ರೂಪಿಸಿಕೊಂಡಿದ್ದಾರೆ. ಇತ್ತೀಚೆಗೆ ಶಾರುಖ್ ಖಾನ್ ಅವರನ್ನು ಲೆಜೆಂಡ್ ಎಂದು ಕರೆದಿರುವ ಲಾರಿಸ್ಸಾ, ಅವರು ಎಂದೆಂದಿಗೂ ನಂಬರ್ ಒನ್ ಆಗಿಯೇ ಇರುತ್ತಾರೆ ಎಂದು ಹೇಳಿದ್ದಾರೆ. ಆ ಮೂಲಕ ಮತ್ತೆ ಎಲ್ಲರ ಚಿತ್ತ ಅವರತ್ತ ಹರಿಸುವಂತೆ ಮಾಡಿಕೊಂಡಿದ್ದಾರೆ.

ಯಾರು ಈ ಲಾರಿಸ್ಸಾ ಬೊನೆಸಿ?

ಲಾರಿಸ್ಸಾ ಬೊನೆಸಿ ಅವರು ಬ್ರೆಜಿಲ್​​ ದೇಶದ ಮಾಡೆಲ್​​ ಮತ್ತು ನಟಿ. 16 ವರ್ಷಗಳ ಹಿಂದೆ ಕೆಲಸದ ನಿಮಿತ್ತ ಭಾರತಕ್ಕೆ ಬಂದರು. ಮುಂಬೈನಲ್ಲಿಯೇ ನೆಲೆಸಿದ ಅವರು, ಮಾಡೆಲ್​ ಆಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ಫ್ಯಾಷನ್ ಲೋಕ, ಸಿನಿಮಾಗಳು ಮತ್ತು ಮ್ಯೂಸಿಕ್ ವಿಡಿಯೋಗಳಲ್ಲಿ ಕೆಲಸ ಮಾಡಿದ್ದಾರೆ.

ಅಕ್ಷಯ್​ ಕುಮಾರ್​ ಮತ್ತು ಜಾನ್​ ಅಬ್ರಹಾಂ ನಟನೆಯ 'ದೇಸಿ ಬಾಯ್ಸ್' ಚಿತ್ರದ 'ಸುಬಹ್ ಹೋನೆ ನಾ ದೇ' ಎಂಬ ಹಾಡಿನಲ್ಲಿ ನೃತ್ಯ ಮಾಡುವ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟರು. 2013ರಲ್ಲಿ ಸೈಫ್ ಅಲಿ ಖಾನ್, ಕುನಾಲ್ ಖೇಮು ಮತ್ತು ವೀರ್ ದಾಸ್ ನಟನೆಯ 'ಗೋ ಗೋವಾ ಗಾನ್' ಜಾಂಬಿ ಕಾಮಿಡಿ ಸಿನಿಮಾದಲ್ಲಿ ನಟಿಸಿದರು.

ಟಾಲಿವುಡ್​ಗೂ ಎಂಟ್ರಿ

ಲಾರಿಸ್ಸಾ ಬೊನೆಸಿ ಬಾಲಿವುಡ್​ ಮಾತ್ರವಲ್ಲದೆ ಟಾಲಿವುಡ್​ಗೂ ಅದ್ದೂರಿಯಾಗಿ ಎಂಟ್ರಿ ಕೊಟ್ಟರು. 'ತಿಕ್ಕಾ' (2016), ನೆಕ್ಸ್ಟ್ ಏಂಟಿ?' (2018) ಸಿನಿಮಾದಲ್ಲಿ ನಟಿಸಿದ್ದಾರೆ, ಸ್ಟೆಬಿನ್ ಬೆನ್, ಯೋ ಯೋ ಹನಿ ಸಿಂಗ್ ಮತ್ತು ಟೆರೆನ್ಸ್ ಲೂಯಿಸ್ ಅವರಂತಹ ಖ್ಯಾತ ಕಲಾವಿದರೊಂದಿಗೆ ಮ್ಯೂಸಿಕ್ ವಿಡಿಯೋಗಳಲ್ಲಿ ಕೆಲಸ ಮಾಡಿದ್ದಾರೆ. ಹೃತಿಕ್​ ರೋಷನ್​ ಅವರೊಂದಿಗಿನ ಜಾಹೀರಾತಿನಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಸದ್ಯ ಲಾರಿಸ್ಸಾ ಅವರ '1920: ಕೋಲ್ಡ್ ವಿಂಟರ್' ಎಂಬ ಹಾರರ್ ಸಿನಿಮಾ ಬಿಡುಗಡೆಯ ಹಂತದಲ್ಲಿದೆ.

ಆರ್ಯನ್​ ಖಾನ್ ಜೊತೆಗೆ ಡೇಟಿಂಗ್?

ಲಾರಿಸ್ಸಾ ಬೊನೆಸಿ ಮತ್ತು ಆರ್ಯನ್​ ಖಾನ್​ ಹಲವಾರು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ ಎನ್ನುವ ವಿಚಾರಗಳು ಕೇಳಿಬಂದಿವೆ. ಆರ್ಯನ್ ಮತ್ತು ಖಾನ್ ಕುಟುಂಬಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಲಾರಿಸ್ಸಾ ಹಾಜರಿರುವುದು ಇವರಿಬ್ಬರ ನಡುವೆ ಪ್ರೀತಿಯಿದೆ ಎನ್ನುವ ವಿಚಾರಕ್ಕೆ ಪುಷ್ಟಿ ನೀಡಿದಂತಾಗಿದೆ.

2025ರ ಸೆಪ್ಟೆಂಬರ್‌ನಲ್ಲಿ ನಡೆದ ಆರ್ಯನ್ ಖಾನ್ ನಿರ್ದೇಶನದ ಚೊಚ್ಚಲ ಪ್ರಾಜೆಕ್ಟ್ 'ದಿ ಬ್ಯಾಡ್ಸ್ ಆಫ್ ಬಾಲಿವುಡ್' ಪ್ರೀಮಿಯರ್​ ಶೋನಲ್ಲಿ ಲಾರಿಸ್ಸಾ ಕಾಣಿಸಿಕೊಂಡಿದ್ದರು. ಇಷ್ಟೆಲ್ಲ ಆದರೂ ಸಹ ಇಲ್ಲಿಯವರೆಗೂ ಲಾರಿಸ್ಸಾ ಅವರು ತಮ್ಮ ಸಂಬಂಧದ ಬಗ್ಗೆ ಬಹಿರಂಗಪಡಿಸಿಲ್ಲ, (ಏಜೆನ್ಸೀಸ್).