'ಹನುಮಾನ್ ಅಂಶ' ಸಿನಿಮಾ ವೀಕ್ಷಿಸಿ ಭಾವುಕರಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ 
ಬಾಲಿವುಡ್

ಆ ದೃಶ್ಯ ನನ್ನನ್ನು ಬಹಳ ಕಾಡುತ್ತಿದೆ...: 'ಹನುಮಾನ್​ ಅಂಶ' ಸಿನಿಮಾ ನೋಡಿ ಸೆಹ್ವಾಗ್​ ಭಾವುಕ; ಮಾಜಿ ಕ್ರಿಕೆಟಿಗ ಹೇಳಿದ್ದೇನು? Virender Sehwag on Hanuman Ansh

ಪ್ರಮುಖ ಮುಖ್ಯಾಂಶಗಳು

  • 'ಹನುಮಾನ್ ಅಂಶ' ಸಿನಿಮಾ ನೋಡಿ ಭಾವುಕರಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್
  • ಸಾಮಾಜಿಕ ಜಾಲತಾಣದಲ್ಲಿ ಭಾವುಕರಾದ ಸೆಹ್ವಾಗ್
ನವದೆಹಲಿ: ಕೆಲ ದಿನಗಳ ಹಿಂದೆ ಅತ್ಯಂತ ಕಡಿಮೆ ಬಜೆಟ್​ನಲ್ಲಿ ನಿರ್ಮಾಣವಾಗಿ ಕೋಟ್ಯಾಂತರ ರೂಪಾಯಿ ಲಾಭ ಗಳಿಸುತ್ತಿರುವ ಸಿನಿಮಾ ಎಂದರೆ ಅದು ನೀಮ್​ ಕರೋಲಿ ಬಾಬಾ ಅವರ ಜೀವನಾಧರಿತ ಸಿನಿಮಾವಾದ ಹನುಮಾನ್​ ಅಂಶ.
ಈ ಸಿನಿಮಾ ಕೇವಲ ಎರಡು ಕೋಟಿ ಬಜೆಟ್​ನಲ್ಲಿ ನಿರ್ಮಾಣವಾಗಿ ಬರೊಬ್ಬರಿ 60 ಕೋಟಿಗೂ ಹೆಚ್ಚಿನ ಗಳಿಕೆ ಮಾಡಿದೆ. ಈಗ ಈ ಸಿನಿಮಾ ಬಗ್ಗೆ ಭಾರತ ಕ್ರಿಕೆಟ್​ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ (Virender Sehwag on Hanuman Ansh) ಮಾತನಾಡಿದ್ದು, ಚಿತ್ರದಲ್ಲಿ ಕಂಡುಬಂದ ಕೆಲ ದೃಶ್ಯಗಳು ತಮ್ಮನ್ನು ಭಾವುಕರನ್ನಾಗಿಸಿದೆ ಎಂದಿದ್ದಾರೆ. 

ಸದ್ದು ಮಾಡದೆ ಸಂಚಲನ ಸೃಷ್ಟಿಸಿದ 'ಹನುಮಾನ್ ಅಂಶ'

ಕಳೆದ ತಿಂಗಳು ತೆರೆಕಂಡ ಹನುಮಾನ್ ಅಂಶ ಸಿನಿಮಾ ರಿಲೀಸ್ ಆದಾಗ ದೊಡ್ಡ ಮಟ್ಟದ ಸದ್ದು ಮಾಡಿರಲಿಲ್ಲ. ಆದರೆ, ಸಿನಿಮಾ ನೋಡಿದ ಪ್ರತಿಯೊಬ್ಬರೂ ಬಾಯ್ತುಂಬಾ ಹೊಗಳಿದ ಪರಿಣಾಮ, ಮೌತ್ ಪಬ್ಲಿಸಿಟಿಯೇ ಈ ಚಿತ್ರಕ್ಕೆ ದೊಡ್ಡ ಬಲವಾಯಿತು. 
ನೀಮ್ ಕರೋಲಿ ಬಾಬಾ ಅವರ ಮೇಲಿನ ಭಕ್ತಿಯಿಂದ ಮಾತನಾಡಿರುವ ಸೆಹ್ವಾಗ್, ಕೆಲವು ಅನುಭವಗಳು ಮತ್ತು ವ್ಯಕ್ತಿಗಳನ್ನು ವರ್ಣಿಸಲು ಪದಗಳೇ ಸಾಲದು. ನನ್ನ ಆಪ್ತ ಸ್ನೇಹಿತನೊಬ್ಬ ಸುಮಾರು 10 ವರ್ಷಗಳ ಹಿಂದೆ ನನಗೆ ಬಾಬಾ ಅವರ ಬಗ್ಗೆ ತಿಳಿಸಿದ್ದ. ಅಂದಿನಿಂದ ನಾನು ಅವರ ಬಗ್ಗೆ ಓದುತ್ತಾ, ಕೇಳುತ್ತಾ ಬಂದಿದ್ದೇನೆ. ಮಹಾರಾಜರ ವ್ಯಕ್ತಿತ್ವ, ಭಕ್ತಿ ಮತ್ತು ಆಶೀರ್ವಾದ ನನ್ನ ಜೀವನದ ಮೇಲೆ ಪ್ರಭಾವ ಬೀರಿದೆ ಎಂದಿದ್ದಾರೆ.
ಮುಂದುವರಿದು ಮಾತನಾಡುತ್ತಾ, 52 ವರ್ಷಗಳ ಹಿಂದೆ ಅವರು ದೇಹತ್ಯಾಗ ಮಾಡಿದ್ದರೂ, ಇಂದಿಗೂ ಅವರ ಆಶೀರ್ವಾದ ಭಕ್ತರ ಜತೆಗಿದೆ. ಹನುಮಾನ್ ಅಂಶ ಸಿನಿಮಾ ಅವರ ಜೀವನದ ಸಣ್ಣ ಝಲಕ್ ಅನ್ನು ಅದ್ಭುತವಾಗಿ ತೆರೆದಿಟ್ಟಿದೆ. ಮಹಾರಾಜ್ ಜಿ ಅವರಿಗೆ ಸಲ್ಲಿಸಿದ ಅತ್ಯಂತ ಸುಂದರ ಗೌರವ ಇದು ಎಂದು ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.

ಸೆಹ್ವಾಗ್ ಕಣ್ಣಂಚಿನಲ್ಲಿ ನೀರು ತರಿಸಿದ ಆ ದೃಶ್ಯ!

ಸಿನಿಮಾದ ಒಂದು ದೃಶ್ಯದ ಬಗ್ಗೆ ಮಾತನಾಡುತ್ತಾ ಸೆಹ್ವಾಗ್  ಭಾವುಕರಾಗಿದ್ದಾರೆ. ಸಿನಿಮಾದಲ್ಲಿ ಮಹಾರಾಜ್ ಜಿ ಹಾವುಗಳಿಂದ ಸುತ್ತುವರೆದಿರುವ ದೃಶ್ಯ ನನ್ನನ್ನು ತುಂಬಾ ಕಾಡಿತು. ಅವರು ಶಿವನಷ್ಟೇ ಮುಗ್ಧ ಎಂದು ಭಕ್ತನೊಬ್ಬ ಹೇಳಿದಾಗ, ನೀವು ಮುಗ್ಧರು, ನಮ್ಮ ಹೃದಯದಲ್ಲಿ ಏನಿರುತ್ತದೆಯೋ ಕಣ್ಣಿಗೆ ಅದೇ ಕಾಣುತ್ತದೆ ಎಂದು ಬಾಬಾ ಹೇಳುವ ಮಾತು ಮನಸ್ಸಿಗೆ ಆಳವಾಗಿ ನಾಟುತ್ತದೆ ಎಂದು ಸೆಹ್ವಾಗ್ ವಿವರಿಸಿದ್ದಾರೆ. ಅಲ್ಲದೆ, ನೀಮ್ ಕರೋಲಿ ಬಾಬಾ ಬಗ್ಗೆ ಈಗಾಗಲೇ ಗೊತ್ತಿದ್ದವರು ಈ ಸಿನಿಮಾ ನೋಡಿ, ಗೊತ್ತಿಲ್ಲದವರು ಇದನ್ನು ಖಂಡಿತವಾಗಿ ನೋಡಲೇಬೇಕು ಎಂದು ಕರೆ ನೀಡಿದ್ದಾರೆ, (ಏಜನ್ಸೀಸ್​).