ರಕ್ಷಾ ಬಂಧನ ಜಾಹೀರಾತು ವಿವಾದ ಮತ್ತು ಬ್ಲೌಸ್ ಚರ್ಚೆಯ ಬಗ್ಗೆ ಸಂದರ್ಶನದಲ್ಲಿ ಮಾತನಾಡುತ್ತಿರುವ ನಟಿ ಕೃತಿ ಸನೊನ್ 
ಬಾಲಿವುಡ್

"ಚಾನೆಲ್​ನಲ್ಲಿ ನನ್ನ ಬ್ಲೌಸ್‌ ಬಗ್ಗೆ ಡಿಬೇಟ್ ನಡೆಯಿತು!": ರಕ್ಷಾ ಬಂಧನ ಜಾಹೀರಾತು ಸೃಷ್ಟಿಸಿದ್ದ ವಿವಾದ; ನಟಿ ಕೃತಿ ಸನೊನ್​ ಹೇಳಿದ್ದೇನು? Kriti Sanon Controversy

ರಕ್ಷಾ ಬಂಧನದ ಜಾಹೀರಾತಿನಲ್ಲಿ ಧರಿಸಿದ್ದ ಬ್ಲೌಸ್ ಬಗ್ಗೆ ನಡೆದ ಅತಿಯಾದ ಚರ್ಚೆ ಹಾಗೂ ಟ್ರೋಲ್ ಕುರಿತು ಬಾಲಿವುಡ್ ನಟಿ ಕೃತಿ ಸನೊನ್ ಮುಕ್ತವಾಗಿ ಮಾತನಾಡಿದ್ದಾರೆ. ಪೂರ್ಣ ವಿವರ ಇಲ್ಲಿದೆ.

ಮುಂಬೈ: ಕೆಲ ತಿಂಗಳುಗಳ ಹಿಂದೆ, ರಕ್ಷಾ ಬಂಧನದ ಸಂದರ್ಭದಲ್ಲಿ ಬಾಲಿವುಡ್​ ನಟಿ ಕೃತಿ ಸನೊನ್​ ಕಾಣಿಸಿಕೊಂಡಿದ್ದ ಜಾಹೀರಾತೊಂದು ಭಾರೀ ವಿವಾದಕ್ಕೆ ಕಾರಣವಾಗಿ, ನಂತರ ಆ ಜಾಹೀರಾತನ್ನು ಹಿಂಪಡೆದುಕೊಂಡ ಘಟನೆ ನಡೆದಿತ್ತು.

ಸಹೋದರ ಸಂಬಂಧದದ ಹಬ್ಬವೆಂದೇ ಕರೆಯಲಾಗುವ ರಕ್ಷಾ ಬಂಧನದ ಹಬ್ಬದ ಪ್ರಯುಕ್ತ ಜೀವಾ ಜುವೆಲ್ಲರಿ ಅವರು ಸೃಷ್ಟಿಸಿದ್ದ ಜಾಹೀತಿನಲ್ಲಿ ನಟಿ ಕೃತಿ ಡೀಪ್​ ನೆಕ್​ ಬ್ಲೌಸ್​ ಧರಿಸಿದ್ದು, ಸಂಪ್ರದಾಯವಾದಿಗಳ ಕೋಪಕ್ಕೆ ಕಾರಣವಾಗಿ, ದೇಶಾದ್ಯಂತ ಆಕ್ರೋಶ ಭುಗಿಲೆದ್ದಿತ್ತು. ಹಿಂದೂ ಆಚರಣೆಗಳನ್ನು ಬೇಕಂತಲೇ ಗುರಿಯಾಗಿಸಿಕೊಂಡು, ಅವಮಾನಿಸುವ ಕೆಲಸವನ್ನು ನಿಲ್ಲಿಸಬೇಕೆಂಬ ಕೂಗು ಕೇಳಿಬಂದಿತ್ತು. ಈಗ, ಈ ಘಟನೆ ಬಗ್ಗೆ ನಟಿ ಕೃತಿ ಸನೊನ್​ ಕರಿನಾ ಕಪೂರ್​ ಖಾನ್​ ನಡೆಸಿಕೊಡುವ "ವಾಟ್​ ವುಮೆನ್​ ವಾಂಟ್​" ಎಂಬ ಕಾರ್ಯಕ್ರಮಕ್ಕೆ ಭಾಗವಹಿಸಿದಾಗ ಮನಬಿಚ್ಚಿ ಮಾತನಾಡಿದ್ದಾರೆ.

ನನ್ನ ಬ್ಲೌಸ್​ ಡಿಬೇಟ್​ ಟಾಪಿಕ್​​ ಆಗಿತ್ತು!

ಇತ್ತೀಚೆಗೆ ವಾಟ್​ ವುಮೆನ್​ ವಾಂಟ್​ ಶೋನಲ್ಲಿ ಕಾಣಿಸಿಕೊಂಡಿದ್ದ ನಟಿ ಕೃತಿ ಸನೊನ್​ ತಮ್ಮ ರಕ್ಷಾ ಬಂಧನ ಜಾಹೀರಾತಿನ ವಿವಾದದ ಬಗ್ಗೆ ಮಾತನಾಡಿದ್ದಾರೆ. ಈ ಬಗ್ಗೆ ಮಾತನ್ನಾರಂಭಿಸಿದ ನಟಿ ಕೃತಿ, ನನ್ನ ಬ್ಲೌಸ್​​ ಬಗ್ಗೆ ಸುದ್ದಿ ವಾಹಿನಿಯಲ್ಲಿ ಆರು ಜನ ಕುಳಿತುಕೊಂಡು ಡಿಬೇಟ್​ ಮಾಡಿದ್ದಾರೆ ಎಂದು ಹೇಳಿದ್ದಾರೆ. ಇಂತಹ ವಿಷಯಗಳ ಬಗ್ಗೆ ಡಿಬೇಟ್​ ನಡೆಸುವುದು ಎಷ್ಟು ಸರಿ ಎಂದು ನಟಿ ಕಿಡಿಕಾರಿದ್ದಾರೆ.

ಸ್ಪಷ್ಟನೆ ನೀಡಿದ್ದ ನಟಿ!

ಈ ರಕ್ಷಾ ಬಂಧನ ಜಾಹೀರಾತಿನ ವಿವಾದ ಭುಗಿಲೆದ್ದ ಸಂದರ್ಭದಲ್ಲಿ ಕೃತಿ ಸನೊನ್​ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ತಿರುಗೇಟು ನೀಡಿದ್ದರು. ಹಬ್ಬ ಎನ್ನವುದು ಅದೊಂದು ಭಾವನೆ, ಅದನ್ನು ಬಟ್ಟೆಯ ಆಧಾರದಲ್ಲಿ ಅಳೆಯಬಾರದು. ರಕ್ಷಾ ಬಂಧನ ಎಂದರೆ ಪರಸ್ಪರ ರಕ್ಷಣೆ ಮಾಡಿಕೊಳ್ಳುತ್ತೆವೆಂದು ಅರ್ಥ. ನಾನು, ನನ್ನ ತಂಗಿ ಇಬ್ಬರು ರಾಖಿ ಕಟ್ಟಿಕೊಳ್ಳುತ್ತೇವೆ. ಈ ಜಾಹೀರಾತಿನಲ್ಲಿ ನಾವು ಸಾಕುವ ನಾಯಿಗಳನ್ನು ಹಬ್ಬದ ಸಂದರ್ಭದಲ್ಲಿ ಸೇರಿಸಿಕೊಳ್ಳಿ ಎನ್ನುವುದು ಉದ್ದೇಶವಾಗಿತ್ತು.

ಅಂತಯೇ, ನಾನು ಹೆಣ್ಣು ಇಂತಹದ್ದೆ ಬಟ್ಟೆ ಧರಿಸಬೇಕು, ಇದನ್ನು ಧರಿಸಕೂಡದು ಎಂಬ ಧೋರಣೆಯಿಂದ ಯಾವಾಗ ಹೊರಬುತ್ತೇವೆ? ಫ್ಯಾಷನ್​ ಎನ್ನುವುದು ಇಷ್ಟೊಂದು ಮುಂದುವರಿದಿದೆ, ಆದರೆ ನಾವು ಹೆಣ್ಣು ಧರಿಸುವ ಬಟ್ಟೆ ಮೂಲಕ ಆಕೆಯ ಸಂಪ್ರದಾಯವನ್ನು ಲೆಕ್ಕಹಾಕುತ್ತಿದ್ದೆವೆ. ಸಂಪ್ರದಾಯ ಮತ್ತು ಸಂಸ್ಕಾರ ಎನ್ನುವುದು ಹೃದಯದಲ್ಲಿರುತ್ತದೆ, ಆಕೆಯ ಕುತ್ತಿಗೆ ಕೆಳಗಲ್ಲ ಎಂದು ನಟಿ ಕಟುವಾಗಿ ಪ್ರತಿಕ್ರಿಯಿಸಿದ್ದರು.

ಏನಿದು ವಿವಾದ?

ರಕ್ಷಾ ಬಂಧನ ಹಬ್ಬದ ಸಂದರ್ಭದಲ್ಲಿ ಜೀವಾ ಜುವೆಲ್ಲರಿ ಅವರು ಕೃತಿ ಸನೊನ್​ ಅವರನ್ನು ಬಳಸಿಕೊಂಡು ಜಾಹೀರಾತೊಂದನ್ನು ಸೃಷ್ಟಿಸಿದ್ದರು. ಇದರಲ್ಲಿ ಸಹೋದರಿ, ತನ್ನ ಸಹೋದರನಿಗೆ ರಾಖಿ ಕಟ್ಟಿದ ಬಳಿಕ, ತಮ್ಮಲ್ಲಿರುವ ನಾಯಿಗೂ ರಾಖಿ ಕಟ್ಟಿ, ಪ್ರಾಣಿಗಳನ್ನು ನಾವು ಆಚರಿಸುವ ಹಬ್ಬಗಳಲ್ಲಿ ಸೇರಿಸಿಕೊಳ್ಳಿ, ಪ್ರಾಣಿಗಳಿಗೆ ಕಟ್ಟಲು ರಾಖಿಯನ್ನು ಜೀವಾ ಜುವೆಲ್ಲರಿ ಮೂಲಕ ಖರೀದಿಸಿ ಎನ್ನುವುದು ಈ ಜಾಹೀರಾತಿನ ಆಶಯವಾಗಿತ್ತು.

ಆದರೆ, ಈ ಜಾಹೀರಾತಿನಲ್ಲಿ ನಟಿ ಕೃತಿ ಸನೊನ್​ ಧರಿಸಿದ್ದ ಬಿಳಿ ಬಣ್ಣದ ಡೀಪ್​ ನೆಕ್​ ಬ್ಲೌಸ್​ ವಿವಾದಕ್ಕೆ ಕಾರಣವಾಯಿತು. ಈ ರೀತಿಯ ಬಟ್ಟೆ ಧರಿಸಿ ಯಾರು ರಕ್ಷಾ ಬಂಧನವನ್ನು ಆಚರಿಸುತ್ತಾರೆ. ಇದು ಹಿಂದೂ ಸಂಪ್ರದಾಯಕ್ಕೆ ಮಾಡಿದ ಅವಮಾನ ಎಂಬ ಆರೋಪ ಕೇಳಿಬಂದಿತು. ವಿವಾದ ತೀವ್ರಗೊಂಡ ಹಿನ್ನಲೆ ಜೀವಾ ಜುವೆಲ್ಲರಿ ಈ ಜಾಹೀರಾತನ್ನು ಹಿಂಪಡೆದಿತ್ತು, (ಏಜೆನ್ಸೀಸ್​).