'ಟಾಕ್ಸಿಕ್' ಪೋಸ್ಟರ್ ಶೇರ್ ಮಾಡಿ ಯಶ್‌ಗೆ ಸಾಥ್ ನೀಡಿದ ಆದಿತ್ಯ ಧರ್! 
ಬಾಲಿವುಡ್

‘ಟಾಕ್ಸಿಕ್’ ನೋಡಿ ಫಿದಾ ಆದ ‘ಧುರಂಧರ್’ ನಿರ್ದೇಶಕ; ಯಶ್ ಜೊತೆ ಮುಂದಿನ ಸಿನಿಮಾ ಮಾಡ್ತಾರಾ ಆದಿತ್ಯ ಧರ್? Aditya Dhar on Toxic

ಮುಂಬೈ: ರಾಕಿಂಗ್​​ ಸ್ಟಾರ್​​ ಯಶ್​ ಅಭಿನಯದ ಹಾಗೂ ಗೀತು ಮೋಹನ್​ದಾಸ್​ ನಿರ್ದೇಶನ ಟಾಕ್ಸಿಕ್​: ಎ ಫೇರಿ ಟೇಲ್ಸ್​​ ಫಾರ್​ ಗ್ರೋನಪ್ಸ್​​ ಸಿನಿಮಾ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಪ್ರಾರಂಭದಲ್ಲಿ ಈ ಸಿನಿಮಾಗೆ ನೆಗೆಟಿವ್​ ಹಾಗೂ ಮಿಶ್ರ ಪತ್ರಿಕ್ರಿಯೆ ಲಭ್ಯವಾದರೂ ಇಲ್ಲಿವರೆಗೆ ಸುಮಾರು 250 ಕೋಟಿಗೂ ಅಧಿಕ ಗಳಿಕೆಯನ್ನು ಮಾಡಿದೆ ಎಂದು ವರದಿಗಳು ಕೇಳಿ ಬರುತ್ತಿವೆ. 
ಈಗ ಈ ಸಿನಿಮಾವನ್ನು ನೋಡಿರುವ ಉರಿ ಹಾಗೂ ಧುರಂಧರ್​ ಸಿನಿಮಾ ನಿರ್ದೇಶಕ ಆದಿತ್ಯ ಧರ್ (Aditya Dhar on Toxic) ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಆದಿತ್ಯನಿಂದ ಈ ಮೆಚ್ಚುಗೆ ದೊರೆಯುತ್ತಿದ್ದಂತೆ ಯಶ್​ ಮುಂದಿನ ಸಿನಿಮಾಗೆ ಆದಿತ್ಯ ಆ್ಯಕ್ಷನ್​ ಕಟ್​ ಹೇಳುತ್ತಾರಾ ಎಂಬ ಗುಸು-ಗುಸು ಜೋರಾಗಿದೆ. 

ಯಶ್ ಸಿನಿಮಾಗೆ ಆದಿತ್ಯ ಧರ್ ಮೆಚ್ಚುಗೆ!

ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನಪ್ಸ್'  ಸಿನಿಮಾ ಇತ್ತೀಚೆಗೆ ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದ ಬಗ್ಗೆ ಬಾಲಿವುಡ್ ನಿರ್ದೇಶಕ ಆದಿತ್ಯ ಧರ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಯಶ್ ಅವರ ಪೋಸ್ಟರ್ ಶೇರ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರದ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರ ಕೆಲಸವನ್ನು ಕೊಂಡಾಡಿರುವ ಅವರು, ಅದಕ್ಕೆ ಕೆಂಪು ಹೃದಯದ ಎಮೋಜಿ ಹಾಕಿ ಬೆಂಬಲ ಸೂಚಿಸಿದ್ದಾರೆ.
ಬಾಲಿವುಡ್‌ನಿಂದ ಯಶ್‌ಗೆ ಸಿಕ್ಕ ಈ ಬಹಿರಂಗ ಬೆಂಬಲ ಈಗ ಎಲ್ಲರ ಕಣ್ಸೆಳೆದಿದೆ. ಯಶ್ ಪರವಾಗಿ ನಿಂತು ಬಾಲಿವುಡ್‌ನಿಂದ ಮೆಚ್ಚುಗೆ ಸೂಚಿಸಿದ ಮೊದಲ ನಿರ್ದೇಶಕ ಇವರೇ ಇರಬೇಕು ಎಂದು ನೆಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಮುಂದಿನ ಪ್ರಾಜೆಕ್ಟ್ ಮೇಲೆ ಕಣ್ಣು!

ಆದಿತ್ಯ ಧರ್ ಹೀಗೆ ಯಶ್ ಪೋಸ್ಟರ್ ಶೇರ್ ಮಾಡಿದ್ದೇ ತಡ, ಅಭಿಮಾನಿಗಳು ಹೊಸ ಲೆಕ್ಕಾಚಾರಗಳನ್ನು ಹಾಕಲು ಶುರು ಮಾಡಿದ್ದಾರೆ. "ಧುರಂಧರ್ ನಿರ್ದೇಶಕ ಈಗ ಟಾಕ್ಸಿಕ್ ಯಶ ತೆ ಕೈಜೋಡಿಸುತ್ತಿದ್ದಾರೆ", "ದಯವಿಟ್ಟು ಇವರಿಬ್ಬರೂ ಒಟ್ಟಿಗೆ ಒಂದು ದೊಡ್ಡ ಸಿನಿಮಾ ಮಾಡಿ" ಎಂದು ಸೋಷಿಯಲ್​  ಮೀಡಿಯಾದಲ್ಲಿ ಫ್ಯಾನ್ಸ್ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಇನ್ನು ಕೆಲವರಂತೂ, ಆದಿತ್ಯ ಧರ್ ಅವರ ಮುಂದಿನ ಸಿನಿಮಾದಲ್ಲಿ ರಣವೀರ್ ಸಿಂಗ್ ಇರುವುದಿಲ್ಲ ಬದಲಿಗೆ ಪ್ಯಾನ್ ಇಂಡಿಯಾ ಸ್ಟಾರ್ ಯಶ್ ನಟಿಸಲಿದ್ದಾರೆ ಎಂದು ಗ್ಯಾರಂಟಿ ಕೊಟ್ಟು ಬರೆಯುತ್ತಿದ್ದಾರೆ. ಆದಾಗ್ಯೂ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲವಾದರೂ, ಈ ಸಣ್ಣ ಸುಳಿವು ಸಿನಿಪ್ರಿಯರಲ್ಲಿ ಸಿಕ್ಕಾಪಟ್ಟೆ ಕುತೂಹಲ ಮೂಡಿಸಿದೆ, (ಏಜನ್ಸೀಸ್​).