ಪ್ರಮುಖ ಮುಖ್ಯಾಂಶಗಳು
ಕೃತಕ ಬುದ್ಧಿಮತ್ತೆ (ಎಐ) ಮೂಲಕ ಸಿನಿಮಾ ತಾರೆಯರ ಫೋಟೋ, ವಿಡಿಯೋಗಳನ್ನು ತಿರುಚಿ ಹರಿಬಿಡುವ ವಿಕೃತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈಗಾಗಲೇ ಎರಡು ಡಜನ್‌ಗೂ ಅಧಿಕ ಕಲಾವಿದರು ಇದರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ. ಅಷ್ಟೇ ಅಲ್ಲದೇ, ಈ ವಿಚಾರವಾಗಿ ದಿನಕ್ಕೊಬ್ಬ ನಟ-ನಟಿಯರು ಹೇಳಿಕೆ, ಎಚ್ಚರಿಕೆ ಅಥವಾ ನೋಟಿಸ್ ನೀಡುತ್ತಿದ್ದಾರೆ. ಆದರೂ, ಈ ವಿಕೃತಿಗೆ ಅಂತ್ಯ ಹಾಡಲು ಸಾಧ್ಯವಾಗಿಲ್ಲ. ಇತ್ತೀಚೆಗಷ್ಟೇ ನಟಿ ಶ್ರುತಿ ಹಾಸನ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿ ವ್ಯಕ್ವಿತ್ವ ಹಕ್ಕುಗಳನ್ನು ಸಂರಕ್ಷಿಸುವಂತೆ ಮನವಿ ಮಾಡಿದ್ದರು. ಅದರ ಬೆನ್ನಲ್ಲೇ ಮತ್ತಿಬ್ಬರು ತಾರೆಯರು ಡೀಪ್‌ಫೇಕ್ ವಿರುದ್ಧ ಸಮರ ಸಾರಿದ್ದಾರೆ. ಫೋಟೋ, ವಿಡಿಯೋ ಹಾಗೂ ಧ್ವನಿಯನ್ನು ತಿರುಚಲಾಗುತ್ತಿದೆ ಎಂದು ನಟಿ ತಬು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದರೆ, ಇನ್ನೋರ್ವ ನಟಿ ಮೃಣಾಲ್ ಠಾಕೂರ್ ಆನ್‌ಲೈನ್ ಕಿಡಿಗೇಡಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಬಹುಭಾಷಾ ತಾರೆ ತಬು ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, ‘ತಮ್ಮ ಅನುಮತಿ ಇಲ್ಲದೆ ಎಐ ಮೂಲಕ ಫೋಟೋ, ವಿಡಿಯೋಗಳನ್ನು ರಚಿಸಿ, ಕಮರ್ಷಿಯಲ್ ಪ್ರಚಾರಕ್ಕಾಗಿ ಬಳಸಲಾಗುತ್ತಿದೆ. ಇದು ಪ್ರಚಾರದ ಹಕ್ಕುಗಳ ಉಲ್ಲಂಘನೆಯಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ನ್ಯಾಯಮೂರ್ತಿ ಜ್ಯೋತಿ ಸಿಂಗ್ ಈ ಅರ್ಜಿ ವಿಚಾರಣೆ ನಡೆಸಿದ್ದು, ತಬು ಪರ ವಕೀಲರಾದ ಸ್ವಾತಿ ಸುಕುಮಾರ್ ಸಲ್ಲಿಸಿರುವ ದಾಖಲೆಗಳಲ್ಲಿ ಕೆಲ ವ್ಯತ್ಯಾಸಗಳನ್ನು ಗಮನಿಸಿ, ಸರಿಯಾದ ದಾಖಲೆಗಳನ್ನು ಸಲ್ಲಿಸುವಂತೆ ನಿರ್ದೇಶಿಸಿದ್ದಾರೆ. ಸದ್ಯ ತಬು ‘ಸ್ಲಂಡಾಗ್ 33: ಟೆಂಪಲ್ ರೋಡ್’ ಚಿತ್ರದ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. -ಏಜೆನ್ಸೀಸ್