Surbhi Chandna: ಇತ್ತೀಚಿನ ದಿನಗಳಲ್ಲಿ ಚಿತ್ರರಂಗದ ತಾರೆಯರು ಹಾಗೂ ಮಹಿಳೆಯರಲ್ಲಿ 'ಎಗ್ ಫ್ರೀಜಿಂಗ್' ಪ್ರಕ್ರಿಯೆಯು ಹೆಚ್ಚಿನ ಚರ್ಚೆಗೆ ಗ್ರಾಸವಾಗಿದೆ. ತಮ್ಮ ಭವಿಷ್ಯದ ತಾಯ್ತನದ ಯೋಜನೆಯನ್ನು ಕಾಯ್ದಿರಿಸಿಕೊಳ್ಳಲು ಹಲವು ಮಹಿಳೆಯರು ಈ ವೈದ್ಯಕೀಯ ವಿಧಾನವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಈ ಟ್ರೆಂಡ್ ಬಗ್ಗೆ ಕಿರುತೆರೆ ನಟಿ ಸುರಭಿ ಚಂದ್ನಾ ಕೂಡಾ ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಸುರಭಿ ಅವರು ಈ ಪ್ರಕ್ರಿಯೆಯನ್ನು ಆಯ್ಕೆ ಮಾಡಿಕೊಳ್ಳುವ ಮಹಿಳೆಯರ ನಿರ್ಧಾರವನ್ನು ಗೌರವಿಸುತ್ತಾರಾದರೂ, ವೈಯಕ್ತಿಕವಾಗಿ ತಮಗೆ ಇದರ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ನನ್ನ ಸಹೋದರಿಯೇ ನನಗೆ ಪ್ರೇರಣೆ: ಸುರಭಿ ಚಂದ್ನಾ
ಐಎಎನ್‌ಎಸ್‌ಗೆ (IANS) ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಸುರಭಿ, ನನ್ನ ಸಹೋದರಿಗೆ 39 ನೇ ವಯಸ್ಸಿನಲ್ಲಿ ಗಂಡು ಮಗು ಜನಿಸಿತು, ಅವನಿಗೀಗ ಎರಡು ವರ್ಷ. ಆಕೆಯ ಕೆಲಸದಲ್ಲಿ ಸಾಕಷ್ಟು ಶ್ರಮ ಮತ್ತು ಶಾರೀರಿಕ ಒತ್ತಡವಿದ್ದರೂ ಆಕೆ ಮಗುವಿಗೆ ಜನ್ಮ ನೀಡಲು ಸಾಧ್ಯವಾಯಿತು ಎಂದರು.
ತಮ್ಮ ವೈದ್ಯರ ಸಲಹೆಯನ್ನು ಉಲ್ಲೇಖಿಸಿದ ನಟಿ, ಅಂಡಾಣುಗಳನ್ನು ಶೇಖರಿಸುವ ಪ್ರಕ್ರಿಯೆಗೆ ಒಳಗಾದರೆ ದೇಹದಲ್ಲಿ ಹಾರ್ಮೋನುಗಳ ಏರುಪೇರು (Hormonal Imbalance) ಹೆಚ್ಚಾಗುತ್ತದೆ ಎಂದು ನನ್ನ ವೈದ್ಯರು ತಿಳಿಸಿದ್ದಾರೆ. ಹಾಗಾಗಿ ಈ ಹಾರ್ಮೋನು ವೈಪರೀತ್ಯಗಳ ಬಗ್ಗೆ ನನಗೆ ಸ್ವಲ್ಪ ಆತಂಕವಿದೆ. ಹೀಗಾಗಿ ಪ್ರತಿಯೊಂದು ಮಗುವೂ ತನ್ನದೇ ಆದ ಅದೃಷ್ಟದೊಂದಿಗೆ ಈ ಭೂಮಿಗೆ ಬರುತ್ತದೆ ಎಂದು ನಾನು ನಂಬುತ್ತೇನೆ. ನಾನು ಕೂಡ ನೈಸರ್ಗಿಕ ರೀತಿಯಲ್ಲೇ ತಾಯಿಯಾಗಲು ಬಯಸುತ್ತೇನೆ ಎಂದಿದ್ದಾರೆ.
ತಾಯ್ತನದ ಯೋಚಿಸುವುದರ ಬಗ್ಗೆ ಮಾತನಾಡಿದ ಅವರು ನಾವು ಯಾವಾಗ ಮಗುವನ್ನು ಹೊಂದಬೇಕು ಎಂದು ಬಯಸುತ್ತೇವೆ ಗೊತ್ತಿಲ್ಲ. ಆದರೆ, ಸರಿಯಾದ ಸಮಯ ಬಂದಾಗ ಅದು ಸಂಭವಿಸುತ್ತದೆ. ಅದು ದೇವರ ಕೊಡುಗೆಯಾಗಿರುತ್ತದೆ ಎಂದು ಹೇಳಿದ್ದಾರೆ.
ಏನಿದು 'ಎಗ್ ಫ್ರೀಜಿಂಗ್' (Egg Freezing)?
ಎಗ್ ಫ್ರೀಜಿಂಗ್ ಎಂಬುದು ವೈದ್ಯಕೀಯ ತಂತ್ರಜ್ಞಾನವಾಗಿದ್ದು, ಇದರಲ್ಲಿ ಮಹಿಳೆಯ ಅಪಕ್ವ/ಅಸಂಸ್ಕರಿಸಿದ ಅಂಡಾಣುಗಳನ್ನು ದೇಹದಿಂದ ಹೊರತೆಗೆದು, 'ವಿಟ್ರಿಫಿಕೇಶನ್' (Vitrification) ಎಂಬ ವೇಗದ ತಂಪಾಗಿಸುವ ವಿಧಾನದ ಮೂಲಕ ಹೆಪ್ಪುಗಟ್ಟಿಸಲಾಗುತ್ತದೆ. ನಂತರ ಇವುಗಳನ್ನು ದ್ರವ ಸಾರಜನಕದಲ್ಲಿ (liquid nitrogen) ಭವಿಷ್ಯದ ಬಳಕೆಗಾಗಿ ಸುರಕ್ಷಿತವಾಗಿ ಶೇಖರಿಸಿಡಲಾಗುತ್ತದೆ (ಏಜೆನ್ಸೀಸ್).