ಶಾರುಖ್‌ನಿಂದ ಇನ್‌ಫ್ಲುಯೆನ್ಸರ್‌ಗೆ ಕಾನೂನು ಬಿಸಿ WEB
ಬಾಲಿವುಡ್

ಅಂಬಾನಿ ವಿಡಿಯೋ ಹಾಕಿ ಕೆಂಗಣ್ಣಿಗೆ ಗುರಿ ! ಶಾರುಖ್‌ನಿಂದ ಇನ್‌ಫ್ಲುಯೆನ್ಸರ್‌ಗೆ ಕಾನೂನು ಬಿಸಿ| Shah Rukh Khan

ಉದ್ಯಮಿ ಅನಂತ್ ಅಂಬಾನಿ ಜೊತೆಗಿನ ಸಂಭಾಷಣೆಯ ವಿಡಿಯೊಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ತಪ್ಪು ಮಾಹಿತಿ ಹರಡಲಾಗಿದೆ ಎಂಬ ಆರೋಪದ ಮೇಲೆ ಬಾಲಿವುಡ್ ನಟ ಶಾರುಖ್ ಖಾನ್ ಕಾನೂನು ಸಮರಕ್ಕೆ ಮುಂದಾಗಿದ್ದಾರೆ. ತಮ್ಮ ಮತ್ತು ಅನಂತ್ ಅಂಬಾನಿ ನಡುವಿನ ಮಾತುಕತೆಯನ್ನು ತಪ್ಪಾಗಿ ಬಿಂಬಿಸುವ ರೀಲ್ ಪ್ರಕಟಿಸಿದ ಆರೋಪದಲ್ಲಿ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಸುವಿಗ್ಯಾ ಶರ್ಮಾ ಅವರಿಗೆ ಶಾರುಖ್ ಖಾನ್ ಪರ ವಕೀಲರು ಕಾನೂನು ನೋಟಿಸ್ ಕಳುಹಿಸಿದ್ದಾರೆ.Shah Rukh Khan

ಮುಂಬೈ: ಉದ್ಯಮಿ ಅನಂತ್ ಅಂಬಾನಿ ಜೊತೆಗಿನ ಸಂಭಾಷಣೆಯ ವಿಡಿಯೊಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ತಪ್ಪು ಮಾಹಿತಿ ಹರಡಲಾಗಿದೆ ಎಂಬ ಆರೋಪದ ಮೇಲೆ ಬಾಲಿವುಡ್ ನಟ ಶಾರುಖ್ ಖಾನ್ ಕಾನೂನು ಸಮರಕ್ಕೆ ಮುಂದಾಗಿದ್ದಾರೆ. ತಮ್ಮ ಮತ್ತು ಅನಂತ್ ಅಂಬಾನಿ ನಡುವಿನ ಮಾತುಕತೆಯನ್ನು ತಪ್ಪಾಗಿ ಬಿಂಬಿಸುವ ರೀಲ್ ಪ್ರಕಟಿಸಿದ ಆರೋಪದಲ್ಲಿ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಸುವಿಗ್ಯಾ ಶರ್ಮಾ ಅವರಿಗೆ ಶಾರುಖ್ ಖಾನ್ ಪರ ವಕೀಲರು ಕಾನೂನು ನೋಟಿಸ್ ಕಳುಹಿಸಿದ್ದಾರೆ.

ಆಧ್ಯಾತ್ಮಿಕ ಗುರು ಸದ್ಗುರು ಅವರೊಂದಿಗಿನ ಸಂವಾದದ ವೇಳೆ ಅನಂತ್ ಅಂಬಾನಿ ಕಾಣಿಸಿಕೊಂಡಿರುವ ವಿಡಿಯೊ ಹಾಗೂ ಮತ್ತೊಂದು ಸಂದರ್ಭದಲ್ಲಿ ಶಾರುಖ್ ಖಾನ್ ಮತ್ತು ಅನಂತ್ ಅಂಬಾನಿ ಮಾತನಾಡುತ್ತಿರುವ ದೃಶ್ಯಗಳನ್ನು ಒಟ್ಟುಗೂಡಿಸಿ ಇನ್‌ಸ್ಟಾಗ್ರಾಂನಲ್ಲಿ ರೀಲ್ ಪ್ರಕಟಿಸಲಾಗಿತ್ತು. ಈ ವಿಡಿಯೊಗೆ ನೀಡಿದ ಶೀರ್ಷಿಕೆಯಲ್ಲಿ, ಸಂಭಾಷಣೆ ವೇಳೆ ಶಾರುಖ್ ಖಾನ್ ಅವರಿಗೆ ಮೌನವಾಗಿರುವಂತೆ ಹೇಳಲಾಗಿತ್ತು ಎಂಬರ್ಥದ ಆರೋಪ ಮಾಡಲಾಗಿತ್ತು. ಆದರೆ ಈ ಹೇಳಿಕೆ ಸುಳ್ಳು ಮತ್ತು ತಪ್ಪು ದಾರಿಗೆಳೆಯುವಂತಿದೆ ಎಂದು ನಟನ ಕಾನೂನು ತಂಡ ಆಕ್ಷೇಪಿಸಿದೆ.

ನವೆಂಬರ್ 23ರಂದು ಕಾನೂನು ನೋಟಿಸ್

ನವೆಂಬರ್ 23ರಂದು ಕಳುಹಿಸಲಾದ ನೋಟಿಸ್‌ನಲ್ಲಿ ವಿಡಿಯೊದ ವಿಷಯವನ್ನು ದುರುದ್ದೇಶಪೂರಿತ, ತಪ್ಪು ದಾರಿಗೆಳೆಯುವ ಮತ್ತು ಮಾನಹಾನಿಕರ ಎಂದು ಶಾರುಖ್ ಖಾನ್ ಪರ ವಕೀಲರು ಕರೆದಿದ್ದಾರೆ. ವಿಡಿಯೊಗೆ ನೀಡಿರುವ ಶೀರ್ಷಿಕೆ ಸಂಭಾಷಣೆಯ ನೈಜ ಸಂದರ್ಭವನ್ನು ತಿರುಚಿ ತೋರಿಸುವ ಉದ್ದೇಶ ಹೊಂದಿದೆ. ಇದರಿಂದ ನಟನ ಸಾರ್ವಜನಿಕ ವ್ಯಕ್ತಿತ್ವ ಮತ್ತು ಗೌರವಕ್ಕೆ ಧಕ್ಕೆಯಾಗಬಹುದು ಎಂದು ನೋಟಿಸ್‌ನಲ್ಲಿ ಆಕ್ಷೇಪಿಸಲಾಗಿದೆ.

ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್), 2023ರ ಸೆಕ್ಷನ್ 356 ಅನ್ನು ಉಲ್ಲೇಖಿಸಿರುವ ಕಾನೂನು ತಂಡ, ಆಧಾರರಹಿತ ಹಾಗೂ ಹಾನಿಕಾರಕ ಹೇಳಿಕೆಗಳನ್ನು ಸಾಕ್ಷ್ಯವಿಲ್ಲದೆ ಪ್ರಸಾರ ಮಾಡುವುದು ಮಾನಹಾನಿಗೆ ಕಾರಣವಾಗಬಹುದು ಎಂದು ತಿಳಿಸಿದೆ.

48 ಗಂಟೆಗಳಲ್ಲಿ ಐದು ಬೇಡಿಕೆಗಳ ಈಡೇರಿಕೆಗೆ ಸೂಚನೆ

ಕಾನೂನು ನೋಟಿಸ್‌ನಲ್ಲಿ ಇನ್‌ಫ್ಲುಯೆನ್ಸರ್‌ಗೆ ಐದು ಪ್ರಮುಖ ಸೂಚನೆಗಳನ್ನು ನೀಡಲಾಗಿದೆ. ವಿವಾದಿತ ಇನ್‌ಸ್ಟಾಗ್ರಾಂ ರೀಲ್ ಅನ್ನು ತಕ್ಷಣ ತೆಗೆದುಹಾಕಬೇಕು, ಇದೇ ಆರೋಪವನ್ನು ಮತ್ತೆ ಹಂಚಿಕೊಳ್ಳಬಾರದು ಹಾಗೂ ವಿಡಿಯೊಗೆ ಸಂಬಂಧಿಸಿದ ತಪ್ಪು ಶೀರ್ಷಿಕೆ ಮತ್ತು ಹೇಳಿಕೆಗಳನ್ನು ಅಳಿಸಬೇಕು ಅಥವಾ ಸರಿಪಡಿಸಬೇಕು ಎಂದು ಸೂಚಿಸಲಾಗಿದೆ. ಅಲ್ಲದೆ, ಮೂಲ ವಿಡಿಯೊ ಹಾಗೂ ಅದನ್ನು ಪ್ರಕಟಿಸಲು ಬಳಸಿದ ದಾಖಲೆಗಳನ್ನು ಸಂರಕ್ಷಿಸಬೇಕು. ನೋಟಿಸ್‌ನಲ್ಲಿರುವ ಸೂಚನೆಗಳನ್ನು ಪಾಲಿಸಿರುವ ಕುರಿತು 48 ಗಂಟೆಗಳೊಳಗೆ ಲಿಖಿತ ದೃಢೀಕರಣ ನೀಡಬೇಕು ಎಂದೂ ಕೇಳಲಾಗಿದೆ.

ನೋಟಿಸ್‌ಗೆ ಇನ್‌ಫ್ಲುಯೆನ್ಸರ್ ತಿರುಗೇಟು

ಕಾನೂನು ನೋಟಿಸ್ ಸ್ವೀಕರಿಸಿದ ಬಳಿಕ ಸುವಿಗ್ಯಾ ಶರ್ಮಾ ಮತ್ತೊಂದು ವಿಡಿಯೊ ಪ್ರಕಟಿಸಿ ಶಾರುಖ್ ಖಾನ್ ಅವರ ಆಕ್ಷೇಪವನ್ನು ಪ್ರಶ್ನಿಸಿದ್ದಾರೆ. ವೈರಲ್ ವಿಡಿಯೊದಲ್ಲಿನ ಹೇಳಿಕೆಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಪ್ತಿಯಲ್ಲಿರುವ ಟೀಕೆಗಳಾಗಿವೆ ಎಂಬ ವಾದವನ್ನು ಮುಂದಿಟ್ಟಿದ್ದಾರೆ. ಶಾರುಖ್ ಖಾನ್ ಅವರನ್ನು ಮೌನವಾಗಿರಲು ಹೇಳಿದ ವ್ಯಕ್ತಿ ಅವರನ್ನು ಅವಮಾನಿಸಿಲ್ಲವೇ? ಅಥವಾ ಶಾರುಖ್ ಖಾನ್ ಅವರಿಗೆ ಅವಮಾನವಾಯಿತು ಎಂದು ಹೇಳುವ ಧೈರ್ಯವಿಲ್ಲವೇ? ಆದರೆ ನಾವು ಅವರನ್ನು ಅವಮಾನಿಸಿದ್ದೇವೆ ಎನ್ನಲಾಗುತ್ತಿದೆ ಎಂಬರ್ಥದಲ್ಲಿ ಅವರು ಪ್ರತಿಕ್ರಿಯಿಸಿದ್ದಾರೆ.

ಈ ಸಂಭಾಷಣೆಯ ಕಿರು ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ಹಲವು ಖಾತೆಗಳಿಂದ ಇದೇ ರೀತಿಯ ಹೇಳಿಕೆಗಳು ಪ್ರಕಟವಾಗಿವೆ. ಆದರೆ ಶಾರುಖ್ ಖಾನ್ ಅವರ ಕಾನೂನು ತಂಡ ಈ ವಿಡಿಯೊದ ನಿರೂಪಣೆಯನ್ನೇ ಪ್ರಶ್ನಿಸಿದ್ದು, ಸಂಭಾಷಣೆಯ ಸಂದರ್ಭವನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂಬ ನಿಲುವು ವ್ಯಕ್ತಪಡಿಸಿದೆ. ಸದ್ಯ ಈ ವಿವಾದದಲ್ಲಿ ಕಾನೂನು ನೋಟಿಸ್‌ಗೆ ಇನ್‌ಫ್ಲುಯೆನ್ಸರ್ ನೀಡುವ ಮುಂದಿನ ಪ್ರತಿಕ್ರಿಯೆ ಕುತೂಹಲ ಮೂಡಿಸಿದೆ.