ನಾಯಕ ಆಯುಷ್ಮಾನ್​ ಖುರಾನಾ, ನಾಯಕಿ ಶಾರ್ವರಿ ಜತೆ ನಿರ್ದೇಶಕ ಸೂರಜ್​ ಬರ್ಜಾತಿಯಾ 
ಬಾಲಿವುಡ್

Sooraj Barjatya Interview - ಸೂರಜ್​ ರ್ಬಜಾತಿಯಾ ಹೊಸ ಪ್ರೇಮ್​ ಕಥೆ

"ಮೈನೆ ಪ್ಯಾರ್​ ಕಿಯಾ', "ಹಮ್​ ಆಪ್​ಕೇ ಹೈ ಕೌನ್​?', "ಹಮ್​ ಸಾಥ್​ ಸಾಥ್​ ಹೈ', "ಮೈ ಪ್ರೇಮ್​ ಕೀ ದಿವಾನೀ ಹೂ', "ವಿವಾಹ್​', "ಪ್ರೇಮ್​ ರತನ್​ ಧನ್​ ಪಾಯೊ', "ಊಂಚಾಯಿ'... ಹೀಗೆ 37 ವರ್ಷಗಳ ಸುದೀರ್ ಸಿನಿಮಾ ಕರಿಯರ್​ನಲ್ಲಿ ಅವರು ನಿರ್ದೇಶಿಸಿರುವ ಸಿನಿಮಾಗಳ ಸಂಖ್ಯೆ ಕೇವಲ ಏಳು. ಇದೀಗ ಎಂಟನೇ ಚಿತ್ರ "ಯೇ ಪ್ರೇಮ್​ ಮೋಲ್​ ಲಿಯಾ' ಇದೇ 27ರಂದು ರಿಲೀಸ್​ಗೆ ರೆಡಿಯಿದೆ. ಇದೇ ಖುಷಿಯಲ್ಲಿ ಬಾಲಿವುಡ್​ನ ದಿಗ್ಗಜ ಸೂರಜ್​ ಬರ್ಜಾತಿಯಾ ವಿಜಯವಾಣಿ ಜತೆ ಮಾತಿಗೆ ಸಿಕ್ಕಿದ್ದರು.

ವಿಜಯವಾಣಿ ಸುದ್ದಿ ಜಾಲ, ಹರ್ಷವರ್ಧನ್ ಬ್ಯಾಡನೂರು

37 ವರ್ಷಗಳಲ್ಲಿ ಕೇವಲ ಎಂಟು ಸಿನಿಮಾ. ಇಷ್ಟು ಸಮಯ ಏಕೆ?

ನಾನು ರಾಜ್​ ಕಪೂರ್​ ಅವರ ಅತಿ ದೊಡ್ಡ ಅಭಿಮಾನಿ. ಡೈರೆಕ್ಟರ್​ ಆದರೆ, ಅವರಂತಹ ನಿರ್ದೇಶಕನಾಗಬೇಕು ಅಂತ ಆಸೆಪಟ್ಟವನು. ನಿರ್ದೇಶಕನಾಗುವುದು ನನ್ನ ಪ್ರಜ್ಞಾಪೂರ್ವಕ ನಿರ್ಧಾರ. ಏನೇ ಮಾಡಿದರೂ ಅದಕ್ಕೆ ನೂರು ಪ್ರತಿಶತಃ ನೀಡಬೇಕು ಅಂತ ಯೋಚಿಸಿದ್ದೆ. ಒಂದು ನಿರ್ಮಾಣ ಸಂಸ್ಥೆ ನಡೆಸುತ್ತಿದ್ದರೂ ನಿರ್ದೇಶನದ ವಿಷಯದಲ್ಲಿ ಸ್ವಲ್ಪ ಸ್ವಾರ್ಥಿ. ನಾನು ಕಥೆಯ ಹಂತದಿಂದಲೇ ಜತೆಗೆ ಕೂರುತ್ತೇನೆ. ಪ್ರತಿ ಪಾತ್ರವನ್ನೂ ಜೀವಿಸುತ್ತೇನೆ. ಕಮರ್ಷಿಯಲ್ಲಾಗಿ ಆಯಾಮದಲ್ಲಿ ನೋಡುವುದಾದರೆ ಹಾಗೆ ಮಾಡುವುದರಲ್ಲಿ ಅರ್ಥವಿಲ್ಲ. ಆದರೆ, ನಿರ್ದೇಶಕನಾಗಿ ಇದು ನನ್ನ ಆಯ್ಕೆ. ಒಳ್ಳೆಯದು, ಕೆಟ್ಟದು, ಸಕ್ಸಸ್​, ಫೇಲ್ಯೂರ್​ ಯಾವುದೂ ಮುಖ್ಯವಾಗುವುದಿಲ್ಲ. ನನ್ನ ಸಿನಿಮಾ ನೋಡುವ ಪ್ರತಿಯೊಬ್ಬರಿಗೂ ಇದು ನನ್ನ ಮನೆಯ ಕಥೆ ಅಂತನ್ನಿಸಬೇಕು, ನೈಜವಾಗಿರಬೇಕು ಅಂತಹ ಸಿನಿಮಾ ಮಾಡಬೇಕು ಅಂತಲೇ ಪ್ರತಿ ಬಾರಿ ಸಮಯ ತೆಗೆದುಕೊಂಡು ಸಿನಿಮಾ ಮಾಡುತ್ತೇನೆ.

ಸೂರಜ್​ ಬರ್ಜಾತಿಯಾ

ಸಣ್ಣ ವಯಸ್ಸಿನಲ್ಲೇ ಸಿನಿಮಾ ನಿರ್ದೇಶನಕ್ಕಿಳಿದಿರಿ...

ನಾನು ಬೆಳೆದಿದ್ದು ಸಿನಿಮಾ ಹಿನ್ನೆಲೆಯ ಕುಟುಂಬದಲ್ಲಿ. ಆ ವಿಷಯದಲ್ಲಿ ನಾನು ಅದೃಷ್ಟವಂತ. ಚಿತ್ರರಂಗದ ಉದ್ಯಮದಲ್ಲಿ ತೊಡಗಿದ್ದ ಕಾರಣ, ಮನೆಯಲ್ಲಿ ಯಾವಾಗಲೂ ಸಿನಿಮಾ ಕುರಿತ ಮಾತುಗಳೇ. 12, 13ನೇ ವಯಸ್ಸಿನಲ್ಲೇ ಕಥೆ, ಸಂಕಲನ ಕೆಲಸಗಳಲ್ಲಿ ತೊಡಗಿಸಿಕೊಂಡೆ. ಹೀಗಾಗಿ ಸಣ್ಣ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಬಂದೆ. ನನ್ನ ತಂದೆ ರಾಜಕುಮಾರ್​ ರ್ಬಜಾತಿಯಾ ನನಗೆ ಬಾಲ್ಯದಿಂದಲೇ ಸಿನಿಮಾ ಬಗ್ಗೆ ಕಲಿಸಿದರು. ನಾನು ನಿರ್ದೇಶಕನಾಗಬೇಕು ಅಂತ ಹೇಳಿದಾಗಲೂ ಅಪ್ಪ ಮಾರ್ಗದರ್ಶನ ನೀಡಿದರು. "ನಿನ್ನ ವಯಸ್ಸಿಗೆ ತಕ್ಕಂತೆ ನಿನ್ನಲ್ಲಿ ಬರುವ ವಿಷಯಗಳನ್ನೇ ಬರೆಯುತ್ತಾ ಹೋಗು. ಅದು ಪ್ರೇಮಕಥೆಯಾಗಿದ್ದರೆ ಚಂದ. ತಾಂತ್ರಿಕವಾಗಿ ಏನಾದರೂ ಬದಲಾವಣೆ ಬೇಕೆಂದರೆ ನೋಡೋಣ' ಎಂದರು. ಅವರು ಹೇಳಿದಂತೆಯೇ ನಾನು ಬರೆಯತೊಡಗಿದೆ. "ಮೈನೆ ಪ್ಯಾರ್​ ಕಿಯಾ' ನನ್ನ ಜೀವನದ ಭಾಗವೇ ಆಗಿತ್ತು. ಆ ಸಮಯದಲ್ಲಿ ನನ್ನ ಬದುಕಿನಲ್ಲಿ ನಡೆದ ವಿಷಯಗಳನ್ನೇ ಕಥೆ ಮಾಡಿದೆ. ಅದೇ ತೆರೆಯ ಮೇಲೆ ಮೂಡಿಬಂತು. ಅದಕ್ಕೆ ಸಂಪೂರ್ಣ ಕ್ರೆಡಿಟ್​ ನನ್ನ ತಂದೆಗೆ ಸಲ್ಲುತ್ತದೆ.

ಆಯುಷ್ಮಾನ್ ಜತೆ ಸೂರಜ್

ಎಲ್ಲರೂ ಪ್ಯಾನ್​ ಇಂಡಿಯಾ, ಪ್ಯಾನ್​ ವರ್ಲ್ಡ್​ ಹೊರಟಿದ್ದಾರೆ. ನೀವು ಕೌಟುಂಬಿಕ ವಿಷಯಗಳಲ್ಲೇ ತೊಡಗಿದ್ದೀರಿ.

ಪ್ರತಿಯೊಬ್ಬ ನಿರ್ದೇಶಕನೂ ಒಂದೊಂದು ವಿಷಯದಲ್ಲಿ ಸಾಮರ್ಥ್ಯ ಹೊಂದಿರುತ್ತಾನೆ. ನನ್ನ ಸಿನಿಮಾಗಳು ಕೌಟುಂಬಿಕ ವಿಷಯಗಳ ಸುತ್ತ ಸಾಗುತ್ತವೆ. ಆದರೆ, ಪ್ರತಿ ಚಿತ್ರದಲ್ಲೂ ಹೊಸತನವಿರಬೇಕು. ಹಾಗಂತ ಇಷ್ಟು ವರ್ಷಗಳಲ್ಲಿ ನಾನು ಬೇರೆ ರೀತಿ ಸಿನಿಮಾ ಮಾಡಿಲ್ಲ ಅಂತಲ್ಲ. ನಾನೂ ಕಮರ್ಷಿಯಲ್​ ವಿಷಯಗಳತ್ತ ಗಮನ ಹರಿಸಿದ್ದೆ. ಆದರೆ, ಅದರಲ್ಲಿ ನಾನು ಬೆಸ್ಟ್​ ಅಂತ ಅನ್ನಿಸಲಿಲ್ಲ. ಹಾಗೇ ನನಗೂ ಖುಷಿ ಸಿಗಲಿಲ್ಲ. ನನಗೇ ಖುಷಿ ನೀಡದ ವಿಷಯದ ಬಗ್ಗೆ ಸಿನಿಮಾ ಮಾಡಿದರೆ, ಅದು ತೆರೆಯ ಮೇಲೂ ಚೆನ್ನಾಗಿ ಮೂಡಿಬರುವುದಿಲ್ಲ. ನಾನು ನೋಡಿರುವ ಪ್ರಪಂಚ, ಕುಟುಂಬ, ಪ್ರೇಮ ವೈಲ್ಯಗಳು, ಜೀವನ, ಭರವಸೆ, ಈಗಲೂ ಒಟ್ಟಿಗಿರುವ ನಮ್ಮ ಕೂಡು ಕುಟುಂಬ... ಇದೇ ವಿಷಯಗಳ ಬಗ್ಗೆ ಸಿನಿಮಾ ಮಾಡಲು ನನಗಿಷ್ಟ. ಆ ಮೂಲಕ ಇವತ್ತಿನ ಯುವಜನರಿಗೆ ನಮ್ಮ ಜೀವನ, ಕೌಟುಂಬಿಕ ಮೌಲ್ಯಗಳ ಬಗ್ಗೆ ತಿಳಿಸಬೇಕು. ಅದನ್ನು ನೋಡಿ ಅವರು ತಾರ್ಕಿಕವಾಗಿ ಯೋಚಿಸಿ, ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ವಿಷಯಗಳನ್ನು ಅಳವಡಿಸಿಕೊಳ್ಳಬಹುದು. ಹಾಗೇ ಇವತ್ತು ನಾನು "ಹಮ್​ ಆಪ್ಕೇ ಹೈ ಕೌನ್​'ನಂತೆ ಎಲ್ಲರೂ ಒಟ್ಟಾಗಿರಬೇಕು, ಖುಷಿಯಾಗಿರಬೇಕು ಎಂಬ ಕಥೆ ಹೇಳಲು ಹೋದರೆ, ಅದು ಇವತ್ತಿನ ಪ್ರೇಕ್ಷಕರಿಗೆ ರಿಲೇಟ್​ ಆಗದಿರಬಹುದು. ಏಕೆಂದರೆ, ಇವತ್ತು ಯುವಜನ ತಮಗೇನು ಬೇಕು, ಬೇಡ ಎಂಬುದರ ಬಗ್ಗೆ ನೇರವಾಗಿ ಹೇಳುತ್ತಾರೆ. ನಾವು ಸಣ್ಣವರಿದ್ದಾಗ, ನಮಗೇನು ಬೇಕು, ಬೇಡ ಅಂತ ಅಪ್ಪನ ಬಳಿಯೂ ಹೇಳಲಾಗುತ್ತಿರಲಿಲ್ಲ. ಆ ಸಮಯದಲ್ಲಿ ಅದು ಎಲ್ಲ ಕುಟುಂಬಗಳಲ್ಲೂ ಸಾಮಾನ್ಯವಾಗಿತ್ತು. ಆದರೆ, ಈಗ ಸಮಯದೊಂದಿಗೆ ಎಲ್ಲವೂ ಬದಲಾಗಿದೆ.

ಶಾರ್ವರಿ ಜತೆ ಸೂರಜ್​

"ಯೇ ಪ್ರೇಮ್​ ಮೋಲ್​ ಲಿಯಾ' ಹೇಗೆ ಪ್ರಾರಂಭವಾಯಿತು?

"ಯೇ ಪ್ರೇಮ್​ ಮೋಲ್​ ಲಿಯಾ' ನನ್ನ ಇದುವರೆಗಿನ ಅತ್ಯಂತ ಪ್ರೋಗ್ರೆಸಿವ್​ ಸಿನಿಮಾ. ಇಲ್ಲಿ ಕಥಾನಾಯಕ ತಾನು ಪ್ರೀತಿಸುವ ಹುಡುಗಿಯ ಆದ್ಯತೆಗಳಿಗೆ ಪ್ರಾಮುಖ್ಯ ನೀಡುತ್ತಾನೆ. ಇವತ್ತಿನ ಪೀಳಿಗೆಯ ಯುವ ಕುಟುಂಬಗಳಿಗೆ ಹತ್ತಿರವಾಗುವ ವಿಷಯವಿದೆ. ನಾನು ಮತ್ತು ಸಹ ಬರಹಗಾರ್ತಿ ಸುರಭಿ ಚರ್ಚಿಸುತ್ತಿರುವಾಗ, ಈ ವಿಷಯದ ಬಗ್ಗೆ ಕಥೆ ಮಾಡಿದರೆ ಹೇಗೆ ಅಂತನ್ನಿಸಿ, ಬರವಣಿಗೆ ಪ್ರಾರಂಭಿಸಿದೆವು. ಚಿತ್ರದಲ್ಲಿ ಒಂದೊಳ್ಳೆ ಸಂದೇಶವಿದೆ. ಒಬ್ಬ ಮುಂಬೈ ಮೂಲದ ಸಂಗೀತಗಾರ ಯುವತಿಯನ್ನು ಪ್ರೀತಿಸತೊಡಗುತ್ತಾನೆ. ಆದರೆ, ಆಕೆಗೆ ಅಜ್ಜಿಯಂದಿರು, ಚಿಕ್ಕಮ್ಮ, ಅತ್ತೆ, ಸಣ್ಣ ತಂಗಿ ಹೀಗೆ ಆರು ಜನರ ಜವಾಬ್ದಾರಿಯಿರುತ್ತದೆ. ಹೀಗಾಗಿ ಪ್ರೀತಿಸುವ ಅಥವಾ ಮದುವೆಯಾಗುವ ಆಲೋಚನೆ ಆಕೆಗೆ ಇರುವುದಿಲ್ಲ. ಆದರೆ, ಆಕೆಯನ್ನು ತುಂಬ ಪ್ರೀತಿಸುವ ಈತ, ಆಕೆಯ ಪರಿಸ್ಥಿತಿ ಕಂಡು ಆಕೆಯ ಮನೆಗೆ ಹೋಗಿರಲು ತೀರ್ಮಾನಿಸುತ್ತಾನೆ. ಇವತ್ತಿನ ಯುವಕರು, ಯುವತಿಯರು ತಮಗೆ ತಪು$್ಪ ಅನ್ನಿಸಿದ ಎಲ್ಲ ವಿಷಯಗಳ ಬಗ್ಗೆ ನೇರವಾಗಿ ಪ್ರಶ್ನಿಸುತ್ತಾರೆ, ಧ್ವನಿ ಎತ್ತುತ್ತಾರೆ. ಮದುವೆಯಾದ ಹುಡುಗಿ, ಹುಡುಗನ ಮನೆಗೆ ಏಕೆ ಹೋಗಬೇಕು? ಹುಡುಗ ಹುಡುಗಿಯ ಮನೆಯಲ್ಲಿರಬಾರದು ಅಂತ ಯಾವ ವೇದ ಅಥವಾ ಸಂವಿಧಾನ ಹೇಳುತ್ತದೆ? ಗಂಡನ ಮನೆಯ ಜವಾಬ್ದಾರಿ ಹೇಗೆ ಸೊಸೆಯ ಹೆಗಲಿಗೆ ಬೀಳುತ್ತದೆಯೋ, ಹಾಗೇ ಹೆಂಡತಿಯ ಮನೆಯ ಜವಾಬ್ದಾರಿ ಕೂಡ ಅಳಿಯನ ಹೆಗಲಿಗೆ ಬೀಳಬೇಕು ಎಂಬುದು ಚಿತ್ರದ ಕಥಾವಸ್ತು. ಈ ಥೀಮ್​ ನನಗೆ ಹೊಳೆದ ಕ್ಷಣವೇ ನನಗೆ ನಾಯಕನ ಪಾತ್ರಕ್ಕೆ ಆಯುಷ್ಮಾನ್​ ಖುರಾನಾ ಒಪು$್ಪತ್ತಾರೆ ಅಂತನ್ನಿಸಿತು. ಏಕೆಂದರೆ, ಅವರು ಇದುವರೆಗೆ ಹಲವು ಸವಾಲಿನ, ಸಮಾಜದ ಕಟ್ಟುಪಾಡುಗಳನ್ನು ಪ್ರಶ್ನಿಸುವ ಕಥೆಗಳಲ್ಲಿ, ಪಾತ್ರಗಳಲ್ಲಿ ನಟಿಸಿದ್ದಾರೆ. ನೈಜವಾಗಿ, ಲೀಲಾಜಾಲವಾಗಿ ಅಭಿನಯಿಸುತ್ತಾರೆ. ನಾಯಕಿಯ ಪಾತ್ರಕ್ಕೆ ಇಂದಿನ ಜನರೇಷನ್​ ಹುಡುಗಿ ಬೇಕಿತ್ತು. ಶರ್ವರಿ ಪಾತ್ರಕ್ಕೆ ಸರಂಡರ್​ ಆದ ರೀತಿ, ಮೆಚುರಿಟಿ ಕಂಡು ನನಗೇ ಆಶ್ಚರ್ಯವಾಯಿತು... ಇಬ್ಬರ ಕೆಮಿಸ್ಟ್ರಿ ಅದ್ಭುತವಾಗಿ ಮೂಡಿಬಂದಿದೆ.

ಯೇ ಪ್ರೇಮ್ ಮೋಲ್​ ಲಿಯಾ ಪೋಸ್ಟರ್

ನಿಮ್ಮ ಪ್ರತಿ ಚಿತ್ರದಲ್ಲೂ ನಾಯಕನ ಪಾತ್ರದ ಹೆಸರು "ಪ್ರೇಮ್​' ಆಗಿರುತ್ತದೆ. "ಮೈನೆ ಪ್ಯಾರ್​ ಕಿಯಾ' ಚಿತ್ರದಿಂದ ಹಿಡಿದು "ಯೇ ಪ್ರೇಮ್​ ಮೋಲ್​ ಲಿಯಾ'ವರೆಗೂ ಕಥಾನಾಯಕ "ಪ್ರೇಮ್​' ಕೂಡ ಸಾಕಷ್ಟು ಬದಲಾಗಿದ್ದಾನೆ...

ನನ್ನ ಪ್ರಕಾರ ಪ್ರೇಮ್​ ಮರ್ಯಾದೆಯ ಪ್ರತೀಕ. "ಮೈನೆ ಪ್ಯಾರ್​ ಕಿಯಾ'ದಲ್ಲಿ ಆತ ಹೃದಯವಂತ, ಕುಟುಂಬಕ್ಕೆ ಹೆಚ್ಚು ಪ್ರಾಮುಖ್ಯ ನೀಡುವ, ಹೆಚ್ಚು ಕಷ್ಟಗಳನ್ನು ನೋಡದ, ಖುಷಿಯಾಗಿರುವ ಹುಡುಗ. "ಹಮ್​ ಆಪ್ಕೇ ಹೈ ಕೌನ್​'ನಲ್ಲಿ ಆತನಲ್ಲಿ ಸ್ವಲ್ಪ ಮೆಚುರಿಟಿ ಕಾಣಬಹುದು. "ಹಮ್​ ಸಾಥ್​ ಸಾಥ್​ ಹೈ' ಚಿತ್ರದಲ್ಲಿ ಜೀವನದ ಅನುಭವಗಳಿಂದ ಸಾಕಷ್ಟು ಕಲಿತಿರುತ್ತಾನೆ. ಜನರಲ್ಲಿ ಯಾಕಿಷ್ಟು ಸ್ವಾರ್ಥ? ಯಾಕೆ ನಿಸ್ವಾರ್ಥಿಯಾಗಿರಬಾರದು ಅಂತ ಯೋಚಿಸುತ್ತಾನೆ. "ವಿವಾಹ್​'ನಲ್ಲಿ ತನ್ನ ಪ್ರೀತಿ, ಪ್ರೀತಿಸುವ ಹುಡುಗಿಯ ಪರ ಎಲ್ಲ ಕಷ್ಟಗಳಲ್ಲೂ ನಿಲ್ಲುತ್ತಾನೆ. ಹೀಗೆ ಪ್ರೇಮ್​ ನನ್ನ ಜತೆಗೇ ಬೆಳೆದಿದ್ದಾನೆ. ನಾನು ಹೇಗೆ ಪ್ರಪಂಚವನ್ನು ನೋಡಲು ಇಷ್ಟಪಡುತ್ತೇನೆ? ಎಲ್ಲ ಹುಡುಗರು ಹೇಗಿರಬೇಕು ಅಂತ ಬಯಸುತ್ತೇನೆ? ಅದೇ ರೀತಿ ಆತನೂ ಇರಬೇಕು ಅಂತ ಇಷ್ಟಪಡುತ್ತೇನೆ. ಆದರೆ, ಕೆಲವೊಮ್ಮೆ ಅಂತಹ ಹುಡುಗರೇ ಇಲ್ಲ, ಏಕೆ ಹೀಗೆ ತೋರಿಸುತ್ತೀರಿ? ಅಂತ ಕೆಲವರು ವಿರೋಧಿಸಿದ್ದೂ ಇದೆ. ಎಲ್ಲರಲ್ಲೂ ಪ್ರೇಮ್​ ಇದ್ದಾನೆ. "ಯೇ ಪ್ರೇಮ್​ ಮೋಲ್​ ಲಿಯಾ'ದಲ್ಲಿ ಇವತ್ತಿನ ಪೀಳಿಗೆಯ ಪ್ರೇಮ್​ ಇದ್ದಾನೆ.

ಯೇ ಪ್ರೇಮ್ ಮೋಲ್ ಲಿಯಾ ಪೋಸ್ಟರ್

ಚಿತ್ರದಲ್ಲಿ ಪ್ರೇಕ್ಷಕರು ಏನನ್ನು ನಿರೀಕ್ಷಿಸಬಹುದು?

ಪ್ರತಿಯೊಬ್ಬರ ಜೀವನಕ್ಕೂ ಹೋಲಿಸುವ ಫ್ಯಾಮಿಮಿಲಿ ಕಥೆ ನಿರೀಕ್ಷಿಸಬಹುದು. ಸಂಗೀತ, ನಗು, ಒಂದೊಳ್ಳೆ ಕ್ಲೀನ್​ ಮನರಂಜನಾತ್ಮಕ ಚಿತ್ರವಿದು. ಫುಲ್ ಪ್ಲೇಟ್​ ಮೀಲ್ಸ್​ನ ರುಚಿ, ಸವಿದ ಬಳಿಕ ನೀಡುವ ಸಮಾಧಾನ ಎರಡೂ ಇದೆ. ಕುಟುಂಬ ಪ್ರಾರಂಭಿಸಬೇಕು ಅಂತ ಅಂದುಕೊಂಡಿರುವ ಪ್ರತಿಯೊಬ್ಬ ಯುವ ಪೀಳಿಗೆಯ ಜನ ಈ ಸಿನಿಮಾ ನೋಡಬಹುದು. ಆಗ ಮದುವೆ, ಜೀವನ, ಸಂಬಂಧ, ಮೌಲ್ಯಗಳ ಬಗ್ಗೆ ಮತ್ತಷ್ಟು ತಿಳಿದುಕೊಳ್ಳುವ, ಅಳವಡಿಸಿಕೊಳ್ಳುವ ಆಲೋಚನೆ ಬರಹುದು.

ಯೇ ಪ್ರೇಮ್ ಮೋಲ್ ಲಿಯಾ ಸ್ಟಿಲ್

ಬೆಂಗಳೂರಿಗೆ ಬಂದಿದ್ದೀರಾ?

ನಾವು ಜೈನರು. ಪವಿತ್ರ ತೀರ್ಥಕ್ಷೇತ್ರವಾದ ಶ್ರವಣಬೆಳಗೊಳಕ್ಕೆ ಆಗಾಗ ಕುಟುಂಬ ಸಮೇತ ಬರುತ್ತಿರುತ್ತೇನೆ. ವಿಮಾನದಲ್ಲಿ ಬೆಂಗಳೂರಿಗೆ ಬಂದು, ಅಲ್ಲಿಂದ ಶ್ರವಣಬೆಳಗೊಳಕ್ಕೆ ಕಾರಿನಲ್ಲಿ ಹೋಗುತ್ತಿರುತ್ತೇವೆ. ಎರಡು ವರ್ಷಗಳ ಹಿಂದೆಯೂ ಬಾಹುಬಲಿ ದರ್ಶನ ಪಡೆದಿದ್ದೆ. ನನ್ನ ಹಲವು ಶಾಲಾ ಗೆಳೆಯರು ಕನ್ನಡಿಗರು. ಬೆಂಗಳೂರು ಸುಂದರ ನಗರ. ಚಿತ್ರೀಕರಣ ನಡೆಸಲು ಸೂಕ್ತವಾಗಿದೆ. ಆದರೆ, ಹೆಚ್ಚು ಸುತ್ತಾಡಲು ಅವಕಾಶ ಸಿಕ್ಕಿಲ್ಲ.