ಆಪರೇಷನ್ ಥಿಯೇಟರ್‌ನಲ್ಲಿ ಸೋನು ಗಾಯನ
- ಆಪರೇಷನ್ ಥಿಯೇಟರ್‌ನಲ್ಲಿ ಸೋನು ಗಾಯನ
- 'ಸುಹಾನಿ ರಾತ್ ಧಲ್ ಚುಕಿ' ಹಾಡಿ ವೈದ್ಯರನ್ನು ರಂಜಿಸಿದ ಖ್ಯಾತ ಗಾಯಕ
- ಸೋಷಿಯಲ್ ಮೀಡಿಯಾನಲ್ಲಿ ವಿಡಿಯೋ ವೈರಲ್
ಮುಂಬೈ: ನೋವು ಎಷ್ಟೇ ಇರಲಿ, ಸಂಗೀತದ ಮೇಲಿನ ಪ್ರೀತಿ ಮತ್ತು ಕಲೆಗೆ ಇರುವ ಸಮರ್ಪಣಾ ಭಾವ ಎಂಥವರನ್ನೂ ಬೆರಗುಗೊಳಿಸುತ್ತದೆ. ಇದನ್ನು ಬಾಲಿವುಡ್‌ನ ಖ್ಯಾತ ಗಾಯಕ ಸೋನು ನಿಗಮ್ (Sonu Nigam Singing in Operation Theater) ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ತಮ್ಮ ದೇಹ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವ ಸಂದರ್ಭದಲ್ಲಿ ಸಹ ನೋವನ್ನು ಮರೆತು ಅವರು ಹಾಡಿರುವ ವಿಡಿಯೋವೊಂದು ಈಗ ಸೋಷಿಯಲ್ ಮೀಡಿಯಾನಲ್ಲಿ ಸಕ್ಕತ್ ವೈರಲ್ ಆಗುತ್ತಿದೆ.
ಆಪರೇಷನ್ ಥಿಯೇಟರ್‌ನಲ್ಲಿ ನಡೆದದ್ದೇನು?
ಸೋನು ನಿಗಮ್ ಅವರಿಗೆ ಇತ್ತೀಚೆಗೆ ಶಸ್ತ್ರಚಿಕಿತ್ಸೆ ನಡೆದಿದೆ. ಆ ಸಮಯದಲ್ಲಿ ವೈದ್ಯರು ಹಾಗೂ ಸಿಬ್ಬಂದಿಯ ಜತೆ ತಾವು ಅನುಭವಿಸಿದ ಆ ಅಪರೂಪದ ಕ್ಷಣದ ಬಗ್ಗೆ ಅವರೇ ಸ್ವತಃ ಸಂದರ್ಶನವೊಂದರಲ್ಲಿ ಮುಕ್ತವಾಗಿ ಹಂಚಿಕೊಂಡಿದ್ದಾರೆ.
ಶಸ್ತ್ರಚಿಕಿತ್ಸೆ ನಡೆಸುತ್ತಿದ್ದ ವೈದ್ಯ ಡಾ. ನೀಲೇಶ್ ಸತ್‌ಭಾಯ್ ಸೋನು ನಿಗಮ್ ಅಪ್ಪಟ ಅಭಿಮಾನಿಯಂತೆ. ಹೀಗಾಗಿ, ಆಪರೇಷನ್ ರೂಮ್‌ನಲ್ಲಿ, ಸೋನು ಅವರೇ ಹಾಡಿರುವ ಹಳೆಯ ಸುಂದರ ಹಾಡುಗಳನ್ನು ಬ್ಯಾಕ್‌ಗ್ರೌಂಡ್‌ನಲ್ಲಿ ಪ್ಲೇ ಮಾಡಲಾಗಿತ್ತು.
ಶಸ್ತ್ರಚಿಕಿತ್ಸೆ ಮುಂದುವರಿದಂತೆ, ಕೆಲವು ಹಾಡುಗಳು ಮ್ಯೂಸಿಕ್ ಮಾತ್ರ ಬಂದು ಸಾಂಗ್ ಮಿಸ್ ಆಗಿದೆಯಂತೆ. ಇದನ್ನು ಗಮನಿಸಿದ ಸೋನು ನಿಗಮ್, ತಕ್ಷಣವೇ ಆ ಹಾಡಿಗೆ ತಾವೇ ಧ್ವನಿಯಾಗಿ ಹಾಡಲು ಆರಂಭಿಸಿದ್ದಾರೆ.
'ಸುಹಾನಿ ರಾತ್ ಧಲ್ ಚುಕಿ' ಗೆ ಮರುಳಾದ ವೈದ್ಯರು!
ಶಸ್ತ್ರಚಿಕಿತ್ಸೆಯ ಬೆಡ್ ಮೇಲೆ ಮಲಗಿಯೇ ಅವರು 1949ರ 'ದುಲಾರಿ' ಸಿನಿಮಾದ ಮೊಹಮ್ಮದ್ ರಫಿ ಅವರ ಐಕಾನಿಕ್ ಹಾಡಾದ "ಸುಹಾನಿ ರಾತ್ ಧಲ್ ಚುಕಿ... ಗೀತೆಯನ್ನು ಗುನುಗಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸೋನು, ಇದು ಯಾರೂ ಪ್ಲಾನ್ ಮಾಡಿದ್ದಲ್ಲ, ಸ್ವಾಭಾವಿಕವಾಗಿ ಆಗಿದ್ದು. ಡಾ. ನೀಲೇಶ್ ಮತ್ತು ಅವರ ತಂಡ ಇದನ್ನು ತುಂಬಾ ಎಂಜಾಯ್ ಮಾಡಿತು. ರೋಗಿಯೊಬ್ಬರು ತಮಗೆ ತಾವೇ ಶಸ್ತ್ರಚಿಕಿತ್ಸೆ ನಡೆಯುವಾಗ ಹಾಡುತ್ತಿರುವುದು ತಮ್ಮ ಜೀವನದಲ್ಲೇ ಮೊದಲು ಎಂದು ವೈದ್ಯರು ಹೇಳಿ ಖುಷಿಪಟ್ಟರು. ನನಗೂ ನನ್ನ ನೆಚ್ಚಿನ ರಫಿ ಸಾಬ್ ಅವರ ಹಾಡನ್ನು ಹಾಡುತ್ತಾ ವೈದ್ಯರ ಜತೆ ಸಮಯ ಕಳೆದದ್ದು ತುಂಬಾ ಖುಷಿಕೊಟ್ಟಿತು ಎಂದಿದ್ದಾರೆ.
ಸೋನು ನಿಗಮ್ ಆಸ್ಪತ್ರೆಯಿಂದಲೇ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಂತೆ, ಅಭಿಮಾನಿಗಳು ಪ್ರೀತಿಯ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ದೇವರು ನಿಮಗೆ ಒಳ್ಳೆಯ ಧ್ವನಿ ಕೊಟ್ಟಿದ್ದಾರೆ, ಬೇಗ ಗುಣಮುಖರಾಗಿ ಬನ್ನಿ ಸರ್, ಎಂದು ಸಾವಿರಾರು ಮಂದಿ ಕಾಮೆಂಟ್ ಮಾಡುವ ಮೂಲಕ ಕಾಳಜಿ ವ್ಯಕ್ತಪಡಿಸುತ್ತಿದ್ದಾರೆ, (ಏಜನ್ಸೀಸ್).