ಸಿಮರ್ ಭಾಟಿಯಾ 
ಬಾಲಿವುಡ್

ರೊಮ್ಯಾಂಟಿಕ್ ಕಾಮಿಡಿಯಲ್ಲಿ ಸಿಮರ್ : ‘ಇಕ್ಕೀಸ್’ ಬಳಿಕ ಮತ್ತೊಂದು ಚಿತ್ರದಲ್ಲಿ ಮಿಂಚಲು ರೆಡಿಯಾದ ಅಕ್ಷಯ್ ಸಂಬಂಧಿ

ಪ್ರಮುಖ ಮುಖ್ಯಾಂಶಗಳು

  • ಬಾಲಿವುಡ್ ನಲ್ಲಿ ಖ್ಯಾತ ನಟ-ನಟಿಯರ ಸಂಬಂಧಿಗಳು ಚಿತ್ರರಂಗಕ್ಕೆ ಪದಾರ್ಪಣೆ
  • ಅಕ್ಷಯ್ ಕುಮಾರ್ ಸಹೋದರಿಯ ಪುತ್ರಿ ಸಿಮರ್ ಬಾಲಿವುಡ್ ನಲ್ಲಿ ಕಮಾಲ್​
  • ಇಕ್ಕೀಸ್ ಮೂಲಕ ಗಮನಸೆಳೆದಿದ್ದ ನಟಿ ಇದೀಗ ರೊಮ್ಯಾಂಟಿಕ್ ಚಿತ್ರಕ್ಕೆ ಅವಕಾಶ ಪಡೆದುಕೊಂಡ ನಟಿ
ಬಾಲಿವುಡ್ ಖ್ಯಾತ ನಟ-ನಟಿಯರ ಮಕ್ಕಳಷ್ಟೇ ಅಲ್ಲದೇ, ಅವರ ಸಂಬಂಧಿಗಳು ಕೂಡ ಈಗಾಗಲೇ ಚಿತ್ರರಂಗದಲ್ಲಿ ನೆಲೆಯೂರಿದ್ದಾರೆ. ಇದೀಗ ಹಿಂದಿ ನಟ ಅಕ್ಷಯ್ ಕುಮಾರ್ ಸಹೋದರಿ ಪುತ್ರಿ ಸಿಮರ್ ಭಾಟಿಯಾ ಸರದಿ. ಕಳೆದ ಜನವರಿಯಲ್ಲಿ ತೆರೆಕಂಡಿದ್ದ ‘ಇಕ್ಕೀಸ್’ ಮೂಲಕ ಹಿಂದಿ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದ ಸಿಮರ್ ಮೊದಲ ಚಿತ್ರದಲ್ಲಿಯೇ ಗಮನ ಸೆಳೆದಿದ್ದರು. ಇದೀಗ ಮತ್ತೆ ಬಾಲಿವುಡ್ ಮಂದಿಯ ಕಣ್ಣಿಗೆ ಬಿದ್ದಿರುವ ಅವರು ಎರಡನೇ ಚಿತ್ರಕ್ಕೆ ಅವಕಾಶ ಪಡೆದಿದ್ದಾರೆ. ಇದೊಂದು ರೊಮ್ಯಾಂಟಿಕ್ ಕಾಮಿಡಿ ಜಾನರ್‌ನ ಚಿತ್ರವಾಗಿದ್ದು, ಹಿಂದಿಯ ‘ಏಕ್ ಥೀ ಡಾಯನ್’ ಸೇರಿ ಕೆಲ ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ಅಧಿರಾಜ್ ಬೋಸ್ ಇದೀಗ ಪೂರ್ಣ ಪ್ರಮಾಣದ ನಿರ್ದೇಶಕರಾಗುತ್ತಿದ್ದಾರೆ. ಈ ಸಿನಿಮಾದ ಪ್ರಿ-ಪ್ರೊಡಕ್ಷನ್ ಕಾರ್ಯಗಳು ಪೂರ್ಣಗೊಳಿಸಿರುವ ಅಧಿರಾಜ್, ಸದ್ಯ ತಾರಾಗಣದ ಆಯ್ಕೆಯಲ್ಲಿ ತೊಡಗಿದ್ದಾರೆ. ಚಿತ್ರಕ್ಕೆ ನಾಯಕ-ನಾಯಕಿಯ ಆಯ್ಕೆಯಾಗಿದ್ದು, ಮಲಯಾಳಂ ನಟ ರೋಷನ್ ಮ್ಯಾಥ್ಯೂ ಮುಖ್ಯಭೂಮಿಕೆಯಲ್ಲಿ ನಟಿಸಲಿದ್ದಾರೆ. ‘ಇಕ್ಕೀಸ್’ನಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸಿಮರ್, ಇದೀಗ ಎರಡನೇ ಚಿತ್ರದಲ್ಲಿ ಪೂರ್ಣಪ್ರಮಾಣದ ನಾಯಕಿಯಾಗುತ್ತಿದ್ದಾರೆ. ನವೆಂಬರ್‌ನಿಂದ ಶೂಟಿಂಗ್ ಆರಂಭವಾಗಲಿದ್ದು, 2027ರ ದ್ವಿತೀಯಾರ್ಧದಲ್ಲಿ ಸಿನಿಮಾ ತೆರೆ ಮೇಲೆ ತರುವ ಯೋಚನೆ ಚಿತ್ರತಂಡದ್ದು. -ಏಜೆನ್ಸೀಸ್.